ವಾಷಿಂಗ್ಟನ್(ಪಿಟಿಐ): ರಫ್ತು ಮತ್ತು ಖಾಸಗಿ ಹೂಡಿಕೆ ಪ್ರಮಾಣ ಹೆಚ್ಚಿದರೆ 2014-15ನೇ ಸಾಲಿನಲ್ಲಿ ಭಾರತದ ಒಟ್ಟಾರೆ ಉತ್ಪಾದನೆ ಪ್ರಮಾಣ (ಜಿಡಿಪಿ) ಶೇ 6.7ರ ಮಟ್ಟಕ್ಕೆ ಏರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ.
ದಕ್ಷಿಣ ಏಷ್ಯಾದ ಪ್ರಾದೇಶಿಕ ಪ್ರಗತಿ ಮುಖ್ಯವಾಗಿ ಭಾರತದ `ಜಿಡಿಪಿ' ಚೇತರಿಕೆಯನ್ನು ಅವಲಂಬಿಸಿದೆ. 2013-14ರಲ್ಲಿ ಶೇ 6.5 ಮತ್ತು 2014-15ರಲ್ಲಿ ಶೇ 6.7ರಷ್ಟು `ಜಿಡಿಪಿ' ನಿರೀಕ್ಷೆ ಮಾಡಬಹುದಾಗಿದೆ ಎಂದು ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ `ಜಾಗತಿಕ ಆರ್ಥಿಕ ಮುನ್ನೋಟ'ದಲ್ಲಿ ಹೇಳಿದೆ.
ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಭಾರತದ ರಫ್ತು ಚಟುವಟಿಕೆ ಮತ್ತು ಖಾಸಗಿ ಹೂಡಿಕೆ 2012ರಲ್ಲಿ ತೀವ್ರವಾಗಿ ಕುಸಿದಿದೆ. ಇದರಿಂದ ವಿದೇಶಿ ವಿನಿಮಯದ ಒಳಹರಿವೂ ಕಡಿಮೆಯಾಗಿ ಚಾಲ್ತಿ ಖಾತೆ ಕೊರತೆ(ಸಿಎಡಿ) ಹೆಚ್ಚಿದೆ. ಆದರೆ, ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳು ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಿವೆ ಎಂದು ಈ ವರದಿ ಹೇಳಿದೆ.
ಇದೇ ವೇಳೆ, ಭಾರತದ ಪರಿಕರ ತಯಾರಿಕಾ ವಲಯದ ಪ್ರಗತಿ ನಾಲ್ಕು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದಕ್ಕೆ ವಿಶ್ವಬ್ಯಾಂಕ್ ಕಳವಳವನ್ನೂ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.