ADVERTISEMENT

ಸಂಪನ್ಮೂಲ: ವಿಫಲವಾದರೆ ಅಪಾಯ

ಮಧ್ಯಮಾವಧಿ ವಿತ್ತೀಯ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಬೆಂಗಳೂರು: ಸರ್ಕಾರಕ್ಕೆ ಸೂಕ್ತ ಆದಾಯದ ಮೂಲಗಳನ್ನು ಕಂಡುಕೊಳ್ಳದಿದ್ದರೆ ಹೊಸ ಜನಪ್ರಿಯ ಯೋಜನೆಗಳನ್ನು ಪ್ರಾರಂಭಿಸುವುದು ಕಷ್ಟವಾಗುತ್ತದೆ ಎಂದು ರಾಜ್ಯ ಸರ್ಕಾರದ ಮಧ್ಯಮಾವಧಿ ವಿತ್ತೀಯ ಯೋಜನೆ ಎಚ್ಚರಿಸಿದೆ.

`ಹಂಚಿಕೆ ರಹಿತ ಮತ್ತು ಭಾಗಶಃ ಹಂಚಿಕೆಯುಳ್ಳ ಕಾರ್ಯಕ್ರಮಗಳನ್ನು ಮರುಪರಿಶೀಲಿಸಿ ಇನ್ನೂ ಪ್ರಾರಂಭದ ಹಂತದಲ್ಲಿರುವ ಹಾಗೂ ಕಡಿಮೆ ಉತ್ಪಾದನೆಯ ಯೋಜನೆಗಳನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ ಎಂಬುದು ಆರ್ಥಿಕ ಹೊಣೆಗಾರಿಕೆ ಕಾಯ್ದೆ ವಿಧಿಸಿರುವ ಮಿತಿ. ಇಲ್ಲವಾದರೆ ರಾಜ್ಯದ ಹಣಕಾಸು ಪರಿಸ್ಥಿತಿಯು ಒತ್ತಡದಲ್ಲೇ ಮುಂದುವರಿಯುತ್ತದೆ. ಪರಿಣಾಮವಾಗಿ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಅವಕಾಶ ಕಡಿಮೆಯಾಗುತ್ತದೆ ಮತ್ತು ರಾಜ್ಯದ ಭವಿಷ್ಯದ ಬೆಳವಣಿಗೆ ಪ್ರಸ್ತಾವಗಳು ಸಂಕುಚಿತಗೊಳ್ಳುತ್ತವೆ' ಎಂದು  ರಾಜ್ಯ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿರುವ 2013-17ರ ಅವಧಿಯ ಮಧ್ಯಮಾವಧಿ ವಿತ್ತೀಯ ಯೋಜನೆ ಹೇಳಿದೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 160 ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ 60 ಭರವಸೆಗಳನ್ನು ಈ ಬಜೆಟ್‌ನಲ್ಲೇ ಅನುಷ್ಠಾನಕ್ಕೆ ತಂದಿದ್ದು, ಉಳಿದವುಗಳನ್ನು ಮುಂದಿನ ವರ್ಷಗಳಲ್ಲಿ ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಭರವಸೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಡೀಕರಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಯೋಜನಾ ಗಾತ್ರವನ್ನು ಗಣನೀಯ ಪ್ರಮಾಣದಲ್ಲಿ ಹಿಗ್ಗಿಸಿರುವ ಸರ್ಕಾರ, ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ಅಕ್ಕಿ ವಿತರಿಸುವುದು ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಿದೆ. 1,452 ಕೋಟಿ ರೂಪಾಯಿ ಹೆಚ್ಚುವರಿ ವರಮಾನ ಸಂಗ್ರಹದ ಅಂದಾಜನ್ನೂ ಸಿದ್ಧಪಡಿಸಿಕೊಂಡಿದೆ. ಆದರೂ, ಸಾಮಾಜಿಕ ಮತ್ತು ಆರ್ಥಿಕ ವಲಯಗಳ ಅನುದಾನ ನಿಗದಿಯಲ್ಲಿ ಹೆಚ್ಚಳ ಆಗಿರುವುದರಿಂದ ಅದನ್ನು ಸರಿಹೊಂದಿಸಲು ಸರ್ಕಾರ ಅಗತ್ಯ ವರಮಾನ ಮೂಲಗಳನ್ನು ತಕ್ಷಣವೇ ಕಂಡುಕೊಳ್ಳಬೇಕಿದೆ ಎಂಬ ಅಭಿಪ್ರಾಯ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿದೆ.

ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ, ಬಜೆಟ್ ಸಿದ್ದಪಡಿಸುವಾಗ ಕೇಂದ್ರ ಯೋಜನಾ ಆಯೋಗ ಅನುಮೋದನೆ ನೀಡಿರುವ ಮೊತ್ತಕ್ಕಿಂತಲೂ 1,685 ಕೋಟಿ ರೂಪಾಯಿಯಷ್ಟು ಯೋಜನಾ ಗಾತ್ರವನ್ನು ಹಿಗ್ಗಿಸಿದ್ದಾರೆ. ಪರಿಣಾಮವಾಗಿ ರಾಜ್ಯದ ಯೋಜನಾ ಗಾತ್ರ 48,685 ಕೋಟಿ ರೂಪಾಯಿ ತಲುಪಿದೆ. ಈ ವರ್ಷ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಹಾಯಧನ ನೀಡುವುದಕ್ಕಾಗಿ 14,800 ಕೋಟಿ ರೂಪಾಯಿ ವ್ಯಯಿಸಬೇಕಿದೆ.

ಸಹಾಯಧನದ ಪರಿಣಾಮ
ಸಹಾಯಧನ ಮತ್ತು ಫಲಾನುಭವಿ ಆಧಾರಿತ ಯೋಜನೆಗಳ ಮೇಲಿನ ವೆಚ್ಚದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಆಗುತ್ತಿರುವ ಬಗ್ಗೆಯೂ ವಿತ್ತೀಯ ಯೋಜನೆಯಲ್ಲಿ ಆತಂಕ ವ್ಯಕ್ತವಾಗಿದೆ. `ಈ ಯೋಜನೆಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ನೆರವು  ಮತ್ತು ಸಹಾಯಧನ ಒದಗಿಸಲಾಗುತ್ತಿದೆ. ದೊಡ್ಡ ಮೊತ್ತದ ವೆಚ್ಚಗಳೆಲ್ಲವೂ ರಾಜ್ಯದ ರಾಜಸ್ವ ಉಳಿತಾಯದ ಮೇಲೆ ಪರಿಣಾಮ ಬೀರುತ್ತವೆ. 14,800 ಕೋಟಿ ರೂಪಾಯಿ ಮೊತ್ತದ ಸಹಾಯಧನಗಳಿಗೆ ಪೂರಕ ಬೆಂಬಲದ ಶಾಶ್ವತ ಮೂಲಗಳಿಲ್ಲ. ಪರಿಣಾಮವಾಗಿ ಈ ವಲಯಗಳು ಸುಧಾರಣೆಯಿಂದ ಶಾಶ್ವತವಾಗಿ ದೂರ ಉಳಿಯುತ್ತವೆ'  ಎಂದು ಉಲ್ಲೇಖಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಬಂಡವಾಳ ವೆಚ್ಚದ ಪ್ರಮಾಣವು ಕುಸಿಯುತ್ತಿರುವ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. 2010-11ರಲ್ಲಿ ಬಂಡವಾಳ ವೆಚ್ಚದ ಪ್ರಮಾಣ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇಕಡ 4ರಷ್ಟಿತ್ತು. 2012-13ರಲ್ಲಿ ಶೇ 3.02ಕ್ಕೆ ಕುಸಿದಿತ್ತು. 2013-14ರ ಪರಿಷ್ಕೃತ ಬಜೆಟ್‌ನಲ್ಲಿ ಈ ಮೊತ್ತವನ್ನು ಶೇ 3.06ಕ್ಕೆ (18,380 ಕೋಟಿ ರೂಪಾಯಿ) ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಪಪ್ರಮಾಣದ ಏರಿಕೆ ಆಗಿದೆ.

`ಮುಂದಿನ ದಿನಗಳಲ್ಲಿ ರಾಜ್ಯವು ಋಣೇತರ ಬಂಡವಾಳ ಸ್ವೀಕೃತಿಗಳನ್ನು ಹೆಚ್ಚಿಸಲು ಮತ್ತು ಬಳಕೆ ಮಾಡಿಕೊಳ್ಳುವ ರಾಜಸ್ವ ವೆಚ್ಚದ ಮೊತ್ತವನ್ನು ಕಡಿತ ಮಾಡಲು ಪ್ರಯತ್ನಿಸಬೇಕು. ಆ ಮೂಲಕ ಆಸ್ತಿಗಳ ನಿರ್ಮಾಣಕ್ಕೆ ಹೆಚ್ಚಿನ ಹಣ ವೆಚ್ಚ ಮಾಡಬೇಕು' ಎಂದು ವರದಿ ಅಭಿಪ್ರಾಯಪಟ್ಟಿದೆ.

`ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಳಕೆ ಮಾಡಿಕೊಳ್ಳುವ ರಾಜಸ್ವ ವೆಚ್ಚದ ಪ್ರಮಾಣ ಹೆಚ್ಚುತ್ತಲೇ ಇದೆ. ಇದರಿಂದಾಗಿ ಅಭಿವೃದ್ಧಿಗೆ ಪೂರಕವಾದ ಬಂಡವಾಳ ವೆಚ್ಚದಲ್ಲಿ ಇಳಿಕೆ ಆಗುತ್ತಿದೆ' ಎಂದು ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯ ಡಿ.ಮುರಳೀಧರ್ ಹೇಳುತ್ತಾರೆ.

ಗಣನೀಯ ಹೆಚ್ಚಳ
`ಸಹಾಯಧನ ಯೋಜನೆಗಳ ಹೆಚ್ಚಳ ಹಾಗೂ ಅಭಿವೃದ್ಧಿಯೇತರ ಕಾರ್ಯಕ್ರಮಗಳಿಗೆ ಮಾಡುತ್ತಿರುವ ವೆಚ್ಚಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಹೆಚ್ಚಳ ಆಗಿದೆ. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳದೇ ಇರುವುದರಿಂದ ಹಣಕಾಸು ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿದೆ. ರಾಜ್ಯವನ್ನು ಅಭಿವೃದ್ಧಿಯ ವಿಷಯದಲ್ಲಿ ಮುಂಚೂಣಿಯಲ್ಲಿ ಕೊಂಡೊಯ್ಯಬೇಕಾದರೆ ಸರ್ಕಾರ ಬಂಡವಾಳ ವೆಚ್ಚ ಹೆಚ್ಚಳ ಮಾಡಲೇಬೇಕು' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.