ADVERTISEMENT

ಸಕ್ಕರೆ ಇನ್ನು ಭಾಗಶಃ ನಿಯಂತ್ರಣ ಮುಕ್ತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST
ಸಕ್ಕರೆ ಇನ್ನು ಭಾಗಶಃ ನಿಯಂತ್ರಣ ಮುಕ್ತ
ಸಕ್ಕರೆ ಇನ್ನು ಭಾಗಶಃ ನಿಯಂತ್ರಣ ಮುಕ್ತ   

ನವದೆಹಲಿ(ಪಿಟಿಐ): ಸಕ್ಕರೆ ವಲಯವನ್ನು ಸರ್ಕಾರದ ನಿಯಂತ್ರಣದಿಂದ ಭಾಗಶಃ ಮುಕ್ತಗೊಳಿಸಬೇಕು ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್ ಅವರ ನೇತೃತ್ವದ ತಜ್ಞರ ಸಮಿತಿ ಶುಕ್ರವಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಸಕ್ಕರೆ ವಲಯ ಸರ್ಕಾರಿ ನಿಯಂತ್ರಣ ದಿಂದ ಮುಕ್ತಗೊಳ್ಳುವುದರಿಂದ ಕಾರ್ಖಾನೆಗಳಿಗೆ ತಮ್ಮಲ್ಲಿನ ಉತ್ಪನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮತ್ತು ಬೆಲೆ ನಿರ್ಧರಿಸುವ ಸ್ವಾತಂತ್ರ್ಯ ಲಭಿಸಲಿದೆ.  `ಪಡಿತರ ವಿತರಣೆಯ ನ್ಯಾಯಬೆಲೆ ಅಂಗಡಿಗಳಿಗಾಗಿ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ದರದಲ್ಲಿ ಸಕ್ಕರೆ ಪೂರೈಸಬೇಕು ಎನ್ನುವ ಕಡ್ಡಾಯ ನಿಯಮವನ್ನೂ ಸರ್ಕಾರ ತೆಗೆದು ಹಾಕಬೇಕು~ ಎಂದೂ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಹಲವು ವಲಯಗಳು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಂಡು ವರ್ಷಗಳೇ  ಕಳೆದಿವೆ. ಸಕ್ಕರೆ ಮಾತ್ರ ಉತ್ಪಾದನೆಯಿಂದ ವಿತರಣೆ ಹಂತದವರೆಗೂ ಇನ್ನೂ ಸರ್ಕಾರಿ ನಿಯಂತ್ರಣದಲ್ಲೇ ಇದೆ. ಸಕ್ಕರೆ ಕಾರ್ಖಾನೆಗಳು ಒಟ್ಟು ಉತ್ಪಾದನೆಯ  ಶೇ 10ರಷ್ಟು ಸಕ್ಕರೆಯನ್ನು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ (ಲೆವಿ) ದರದಲ್ಲಿ ಪಡಿತರ

ಅಂಗಡಿಗಳಿಗೆ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಜತೆಗೆ ಕಾರ್ಖಾನೆಗಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾದ ಸಕ್ಕರೆ ಪ್ರಮಾಣವನ್ನೂ ಸರ್ಕಾರವೇ ನಿರ್ಧರಿಸುತ್ತದೆ.  ಈ ಎಲ್ಲ ಪರಿಮಾಣಾತ್ಮಕ ನಿರ್ಬಂಧಗಳನ್ನು ತೆಗೆದುಹಾಕಿ, `ಸ್ಥಿರ ವಹಿವಾಟು~ ವಿಧಾನ ಜಾರಿಗೆ ತರುವಂತೆ ವರದಿ ಸಲ್ಲಿಸಿದ್ದೇವೆ ಎಂದು ರಂಗರಾಜನ್ ಹೇಳಿದ್ದಾರೆ.

ಪೂರ್ಣ ಅಲ್ಲ-ಭಾಗಶಃ: ಸಮಿತಿಯೇನೂ `ಸಕ್ಕರೆ ವಲಯವನ್ನು ಸರ್ಕಾರಿ ನಿಯಂತ್ರಣದಿಂದ ಸಂಪೂರ್ಣಮುಕ್ತಗೊಳಿಸಬೇಕು~ ಎಂದು ಶಿಫಾರಸು ಮಾಡಿಲ್ಲ. ಪ್ರಮುಖವಾದ ಈ ಮೇಲಿನ ಎರಡು ನಿರ್ಬಂಧ ತೆಗೆದುಹಾಕುವ ಅಗತ್ಯವಂತೂ ಇದೆ. ಇದರಿಂದ ದೇಶೀ ಮಾರುಕಟ್ಟೆಯಲ್ಲಿ ಸಕ್ಕರೆ ಖಂಡಿತ ದುಬಾರಿ ಆಗುವುದಿಲ್ಲ.

ಬದಲಿಗೆ ಸ್ಪರ್ಧಾತ್ಮಕತೆ ಹೆಚ್ಚುತ್ತದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕಬ್ಬು ಬೆಳೆಗಾರರಿಗೆ  ವೇತನ ಪಾವತಿಯಲ್ಲಿ ಆಗುತ್ತಿದ್ದ ವಿಳಂಬವೂ ತಪ್ಪುತ್ತದೆ~ ಎಂದು ರಂಗರಾಜನ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಸಕ್ಕರೆ ಉದ್ಯಮದ ಅಭಿವೃದ್ಧಿಗಾಗಿ ಈಗಾಗಲೇ ಜಾರಿಯಲ್ಲಿರುವ ಎರಡು ನಿಯಂತ್ರಣಗಳಿಗೆ ಅಲ್ಪ

ಮಟ್ಟಿಗಿನ ಸುಧಾರಣೆಗಳನ್ನು ಸಮಿತಿ ಸೂಚಿಸಿದೆ. ಇದರಡಿ ಕಬ್ಬಿಗೆ `ನ್ಯಾಯಯುತ ಮತ್ತು ಇಳುವರಿ ಆಧಾರಿತ ದರ ನಿಗದಿ~ (ಎಫ್‌ಆರ್‌ಪಿ) ಕ್ರಮವನ್ನು ಸರ್ಕಾರ ಮುಂದುವರೆಸಬಹುದು ಎಂದು ಹೇಳಿದೆ. ಕಾರ್ಖಾನೆಗಳು ಸಕ್ಕರೆ  ಮತ್ತು ಉಪ ಉತ್ಪನ್ನಗಳಿಂದ ಬರುವ ಶೇ 70ರಷ್ಟು ವರಮಾವನ್ನು ಕಬ್ಬು ಬೆಳೆಗಾರರಿಗೆ ವರ್ಗಾಯಿಸುವುದು  ಕಡ್ಡಾಯ ಎಂದೂ ಸಮಿತಿ ಹೇಳಿದೆ.

ರಾಜ್ಯಗಳಿಗೆ ಸಲಹೆ: ಮುಕ್ತ ಮಾರುಕಟ್ಟೆಯಿಂದ ನೇರವಾಗಿ ಸಕ್ಕರೆ ಖರೀದಿಸಿ, ಅದೇ ಬೆಲೆಯಲ್ಲಿ ಪಡಿತರ ಅಂಗಡಿಗಳ ಮೂಲಕ ಮಾರಾಟ ಮಾಡುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ರಂಗರಾಜನ್ ಸಮಿತಿ ಸಲಹೆ ಮಾಡಿದೆ. ಇದಕ್ಕಾಗಿ ಸಕ್ಕರೆ ಸಂಗ್ರಹಣೆ ವೆಚ್ಚ ಭರಿಸಲು ಕೇಂದ್ರ ರಾಜ್ಯ ಸರ್ಕಾರಗಳಿಗೆ ್ಙ3000 ಕೋಟಿ ಸಹಾಯಧನ ನೀಡುವಂತೆಯೂ ವರದಿಯಲ್ಲಿ ಹೇಳಿದೆ. 

ಜಾರಿ ವಿಳಂಬ : ರಂಗರಾಜನ್ ನೇತೃತ್ವದ 6 ಜನ ತಜ್ಞರ ಸಮಿತಿ ಸಲ್ಲಿಸಿರುವ ಶಿಫಾರಸು ಜಾರಿಗೆ ಬರಲು ಎಷ್ಟು ದಿನವಾಗಲಿದೆ? ಎಂಬ ಪ್ರಶ್ನೆಗೆ `ಈಗಲೇ ದಿನ ನಿಗದಿಪಡಿಸುವುದು ಕಷ್ಟ~ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸುಧೀರ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

`ಪಿಎಂಒ~ ಪರಿಶೀಲನೆ ನಂತರ ಸಮಯ ನಿಗದಿ

ADVERTISEMENT

ನವದೆಹಲಿ (ಪಿಟಿಐ): ರಂಗರಾಜನ್ ಸಮಿತಿ ವರದಿಯನ್ನು ಪ್ರಧಾನಿ ಅವರಿಗೆ ಸಲ್ಲಿಸಲಾಗುವುದು ಹಾಗೂ ಪ್ರಧಾನಿ ಕಚೇರಿ (ಪಿಎಂಒ) ಪರಿಶೀಲನೆ ನಂತರ ಶಿಫಾರಸು ಜಾರಿಗೆ `ಸಮಯ ನಿಗದಿ~ ಕುರಿತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ವಿ.ಥಾಮಸ್  ಶುಕ್ರವಾರ ಇಲ್ಲಿ ಹೇಳಿದ್ದಾರೆ.

ಸರ್ಕಾರಿ ನಿಯಂತ್ರಣದಿಂದ ಸಕ್ಕರೆ ಮುಕ್ತಗೊಳಿಸಲು 1971-72 ಮತ್ತು 1978-79ರಲ್ಲಿಯೂ ಪ್ರಯತ್ನಿಸಲಾಗಿದ್ದಿತು. 2010ರ ಮಧ್ಯಭಾಗದಲ್ಲಿ ಅಂದು ಆಹಾರ ಖಾತೆ ಸಚಿವರಾಗಿದ್ದ ಶರದ್ ಪವಾರ್ ಸಹ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.

ಸಕ್ಕರೆ ವಲಯದ ಸುಧಾರಣೆಗಾಗಿ ಸರ್ಕಾರ ರಚಿಸುವ ಸಮಿತಿಗಳಲ್ಲಿ ರಂಗರಾಜನ್ ಸಮಿತಿ ಮೊದಲನೆಯದೇನಲ್ಲ. ಈ ಮೊದಲು ರಚಿಸಿದ್ದ ಟುಟೇಜಾ ಸಮಿತಿ ಮತ್ತು ಥೋರಟ್ ಸಮಿತಿ ಶಿಫಾರಸುಗಳೇ ಜಾರಿಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.