ನವದೆಹಲಿ (ಪಿಟಿಐ): ಈ ಬಾರಿ ಮುಂಗಾರು ವಿಫಲವಾಗಿರುವುದರಿಂದ ಮುಂದಿನ ಮಾರುಕಟ್ಟೆ ವರ್ಷದಲ್ಲಿ (2012ರ ಅಕ್ಟೋಬರ್-2013 ಸೆಪ್ಟೆಂಬರ್ ನಡುವಿನ ಅವಧಿ) ದೇಶದಲ್ಲಿನ ಸಕ್ಕರೆ ಉತ್ಪಾದನೆ 30 ಲಕ್ಷ ಟನ್‌ನಷ್ಟು ಕಡಿಮೆ ಆಗಲಿದೆ. 2.30 ಕೋಟಿ ಟನ್ ಸಕ್ಕರೆಯಷ್ಟೇ ಉತ್ಪಾದನೆ ಆಗಲಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ಕೆ.ವಿ.ಥಾಮಸ್ ಹೇಳಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಯೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಈ ಭಾಗದಲ್ಲಿ ಮುಂಗಾರು ಕೈಕೊಟ್ಟಿರುವುದು ಸಕ್ಕರೆ ಉತ್ಪಾದನೆ ಕುಸಿಯಲು ಕಾರಣ ಎಂದು ವಿವರಿಸಿದರು.
ದೇಶದಲ್ಲಿ ವಾರ್ಷಿಕ 2.20 ಕೋಟಿ ಟನ್ ಸಕ್ಕರೆಗೆ ಬೇಡಿಕೆ ಇದೆ. ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ(2011 ಅಕ್ಟೋಬರ್-2012 ಸೆಪ್ಟೆಂಬರ್) ದೇಶದಲ್ಲಿನ ಸಕ್ಕರೆ ಉತ್ಪಾದನೆ 2.60 ಕೋಟಿ ಟನ್‌ಗೂ ಹೆಚ್ಚು ಇದೆ. ಮುಂದಿನ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಇಳಿಮುಖವಾಗಲಿದೆ ಎಂದರು.
ಹಾಗೆಂದು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಉತ್ಪಾದನೆ ಪ್ರಮಾಣ ಬೇಡಿಕೆಗಿಂತಲೂ ಅಧಿಕವಾಗಿಯೇ ಇದೆ. ಹಾಗಾಗಿ ಮುಂದಿನ ಮಾರುಕಟ್ಟೆ ವರ್ಷವೂ ಸಕ್ಕರೆ ಆಮದು ಮಾಡಿಕೊಳ್ಳಬೇಕಾದ ಅಗತ್ಯ ಬೀಳದು ಎಂದು ಥಾಮಸ್ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಕೊಂಚ ಕಳವಳದ ಸಂಗತಿ ಎಂದರೆ ಸಕ್ಕರೆ ರಫ್ತು ಚಟುವಟಿಕೆಗೆ ಇದರಿಂದ ಕಷ್ಟವಾಗಲಿದೆ. ಈ ವರ್ಷ ಮಾಡಿದಷ್ಟು ಸಕ್ಕರೆ ರಫ್ತನ್ನೂ (ವರ್ಷದ ಪ್ರಥಮಾರ್ಧದಲ್ಲಿ 13.5 ಲಕ್ಷ ಟನ್ ಸಕ್ಕರೆ ರಫ್ತಾಗಿದೆ) ಮುಂದಿನ ವರ್ಷ ಮಾಡಲಾಗುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.