ADVERTISEMENT

ಸಗಟು ಹಣದುಬ್ಬರ ಶೇ 3.55

23 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಡಬ್ಲ್ಯುಪಿಐ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:30 IST
Last Updated 18 ಆಗಸ್ಟ್ 2016, 19:30 IST
ಸಗಟು ಹಣದುಬ್ಬರ ಶೇ 3.55
ಸಗಟು ಹಣದುಬ್ಬರ ಶೇ 3.55   

ನವದೆಹಲಿ (ಪಿಟಿಐ):  ಆಹಾರ ಪದಾರ್ಥಗಳು ತುಟ್ಟಿಯಾಗಿರುವುದರಿಂದ, ಸಗಟು ಹಣದುಬ್ಬರವು ಜುಲೈ ತಿಂಗಳಿನಲ್ಲಿ ಶೇ 3.55ಕ್ಕೆ ಏರಿಕೆಯಾಗಿದೆ. ಇದು 23 ತಿಂಗಳ ಗರಿಷ್ಠ ಮಟ್ಟವಾಗಿದೆ. ಈ ಹಿಂದೆ 2014ರ ಆಗಸ್ಟ್‌ ತಿಂಗಳಿನಲ್ಲಿ ಸಗಟು ಹಣದುಬ್ಬರ ಶೇ 3.74ರಷ್ಟು ಗರಿಷ್ಠ ಮಟ್ಟದಲ್ಲಿತ್ತು.

ಸಗಟು ದರ ಸೂಚ್ಯಂಕ  (ಡಬ್ಲ್ಯೂಪಿಐ) ಆಧರಿಸಿದ ಹಣದುಬ್ಬರವು 2016ರ ಜೂನ್‌ ತಿಂಗಳಿನಲ್ಲಿ ಶೇ 1.62ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಈಗ ಶೇ ₹1.93ರಷ್ಟು ಹೆಚ್ಚಾಗಿದೆ.  2015ರ ಜುಲೈನಲ್ಲಿ ಸಗಟು ಹಣದುಬ್ಬರವು ಶೇ (–) 4 ರಷ್ಟಿತ್ತು.

ಸಗಟು ಹಣದುಬ್ಬರ ಏರಿಕೆ ಆಗಿರುವುದರಿಂದ ಆಹಾರ ಪದಾರ್ಥಗಳ ಚಿಲ್ಲರೆ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದರಿಂದ ಆರ್‌ಬಿಐ ಮತ್ತು ಸರ್ಕಾರಕ್ಕೆ ಚಿಲ್ಲರೆ ಹಣದುಬ್ಬರವನ್ನು ಶೇ 6ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ ಎಂದು ಉದ್ಯಮ ವಲಯ ಹೇಳಿದೆ.

ಒಟ್ಟಾರೆ, ಆಹಾರ ಹಣದುಬ್ಬರವು ಜುಲೈನಲ್ಲಿ ಎರಡಂಕಿ ಮಟ್ಟವಾದ ಶೇ 12ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆಲೂಗೆಡ್ಡೆ ದರ ಶೇ 59, ಬೇಳೆಕಾಳು ಶೇ 36, ತರಕಾರಿ ಶೇ 28, ಏಕದಳಧಾನ್ಯಗಳು ಶೇ 7ರಷ್ಟು ತುಟ್ಟಿಯಾಗಿವೆ.

ಸಕ್ಕರೆ ಧಾರಣೆಯು ಶೇ 32, ಹಣ್ಣಿನ ಬೆಲೆ ಶೇ 17ರಷ್ಟು ಏರಿಕೆಯಾಗಿವೆ. 2014ರ ನವೆಂಬರ್‌ನಿಂದ 2016ರ ಮಾರ್ಚ್‌ವರೆಗೆ ಸಗಟು ಹಣದುಬ್ಬರ ಋಣಾತ್ಮಕ ಮಟ್ಟದಲ್ಲಿತ್ತು. ಏಪ್ರಿಲ್‌ ನಂತರ ಸಕಾರಾತ್ಮಕ ಮಟ್ಟವನ್ನು ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT