ADVERTISEMENT

ಸಣ್ಣ ನೀರಾವರಿಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯದಲ್ಲಿನ ಬರಪೀಡಿತ 81 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತ್ವರಿತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯಡಿ ವಿವಿಧ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಸಣ್ಣ ನೀರಾವರಿ ಇಲಾಖೆಗೆ ಒಟ್ಟು 868 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ.

81 ತಾಲ್ಲೂಕುಗಳಲ್ಲಿ ಒಟ್ಟು 685 ಕೋಟಿ ರೂಪಾಯಿ ವೆಚ್ಚದಲ್ಲಿ 493 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪೈಕಿ 404 ಕಾಮಗಾರಿಗಳಿಗೆ ಐದು ಹಂತಗಳಲ್ಲಿ ಮಂಜೂರಾತಿ ನೀಡಿದ್ದು, 590 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ `ಪ್ರಜಾವಾಣಿ~ಗೆ ತಿಳಿಸಿದರು.ಪ್ರತಿಯೊಂದು ಕಾಮಗಾರಿ ಅಡಿ ಕನಿಷ್ಠ 50 ಹೆಕ್ಟೇರ್‌ನಂತೆ ಒಟ್ಟು 42,076 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಕಾಮಗಾರಿಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 90ರಷ್ಟು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ 10ರಷ್ಟು ಹಣವನ್ನು ಭರಿಸಲಿದೆ. ಕೆಲ ಕಾಮಗಾರಿಗಳು ಕಳೆದ ವರ್ಷ ಶುರುವಾಗಿದ್ದು, ಮುಂದಿನ ತಿಂಗಳು ಪೂರ್ಣಗೊಳ್ಳಲಿವೆ.

2014-15ರವರೆಗೂ ಹಂತ ಹಂತವಾಗಿ ಈ ಯೋಜನೆಯಡಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಸೇತುವೆ-ಬ್ಯಾರೇಜ್‌ಗಳನ್ನು ನಿರ್ಮಿಸುವ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಗುಲ್ಬರ್ಗ ಜಿಲ್ಲೆಯೊಂದರಲ್ಲೇ 100 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ತಾಲ್ಲೂಕುಗಳು ಈ ಯೋಜನೆಯ ಸದುಪಯೋಗ ಪಡೆಯಲಿವೆ.ಇದಲ್ಲದೆ 470 ಕೆರೆಗಳ ದುರಸ್ತಿ ಮತ್ತು ಪುನರುಜ್ಜೀವನ ಕಾರ್ಯಕ್ಕೆ 233 ಕೋಟಿ ರೂಪಾಯಿ ಮಂಜೂರಾಗಿದೆ. ಕೆರೆಗಳ ಹೂಳೆತ್ತುವುದು ಅಷ್ಟೇ ಅಲ್ಲದೆ, ಕಾಲುವೆಗಳ ನಿರ್ಮಾಣ, ಕೆರೆ ಏರಿಯನ್ನು ಭದ್ರಪಡಿಸುವುದು ಇತ್ಯಾದಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ಪ್ರವಾಹ ನಿರ್ವಹಣೆ ಕಾರ್ಯಕ್ರಮದಡಿ ನಗರ ಪ್ರದೇಶಗಳಲ್ಲಿ ಎಂಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು 349.29 ಕೋಟಿ ರೂಪಾಯಿ ನೆರವು ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಮೂರು ಯೋಜನೆಗಳಿಗೆ ಮಾತ್ರ ಮಂಜೂರಾತಿ ನೀಡಿ 95.64 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಶಿವಮೊಗ್ಗ, ಮುಧೋಳ ಮತ್ತು ಹೊಳೆನರಸೀಪುರದಲ್ಲಿ ಪ್ರವಾಹ ಸಂದರ್ಭದಲ್ಲಿ ಹಾನಿ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಸಿಮೆಂಟ್ ತಡೆಗೋಡೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.