ADVERTISEMENT

ಸರಕು ವಿನಿಮಯ ವಹಿವಾಟು: ಶೇ 44ರಷ್ಟು ವೃದ್ಧಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 16:45 IST
Last Updated 2 ಫೆಬ್ರುವರಿ 2011, 16:45 IST

ನವದೆಹಲಿ (ಪಿಟಿಐ): ದೇಶದ ಎಲ್ಲ ಸರಕು ವಿನಿಮಯ ಕೇಂದ್ರದ ಒಟ್ಟು ವಹಿವಾಟು ಶೇಕಡ 44.24ರಷ್ಟು ಪ್ರಗತಿ ಕಂಡಿದ್ದು, ರೂ 112 ಲಕ್ಷ ಕೋಟಿ ತಲುಪಿದೆ ಎಂದು ಸರಕು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಫಾವರ್ಡ್ ಮಾರ್ಕೆಟ್ ಕಮಿಷನ್ (ಎಫ್‌ಎಂಸಿ) ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಎಲ್ಲ ಸರಕು ವಿನಿಮಯ ಮಾರಾಟ ಕೇಂದ್ರಗಳ ಒಟ್ಟಾರೆ ವಹಿವಾಟು ರೂ 112ಲಕ್ಷ ಕೋಟಿಗಿಂತಲೂ ಹೆಚ್ಚಬಹುದು ಎಂದು ‘ಎಫ್‌ಎಂಸಿ’ ಅಧ್ಯಕ್ಷ ಬಿ.ಸಿ ಕಾಟ್ವಾ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಯೋಜಸಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಒಟ್ಟು ಸರಕು ವಿನಿಮಯ ವಹಿವಾಟು ರೂ 77.64ಲಕ್ಷ ಕೋಟಿ ದಾಖಲಿಸಿತ್ತು. ಪ್ರಸಕ್ತ ಸಾಲಿನಲ್ಲಿ ಇದು ಗಣನೀಯ ಚೇತರಿಕೆ ಕಂಡಿದೆ. ಈಗಾಗಲೇ ರೂ 88 ಲಕ್ಷ ಕೋಟಿಯನ್ನು ದಾಟಿದೆ ಎಂದು ಹೇಳಿದರು. ‘ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನೂ ನಮ್ಮ ಮುಂದೆ ಐದು ಪಾಕ್ಷಿಕ ಅವಧಿಗಳಿವೆ. ಈ ಅವಧಿಯಲ್ಲಿ ಖಂಡಿತ ರೂ 112 ಲಕ್ಷ ಕೋಟಿ ವಹಿವಾಟು ದಾಖಲಿಸುತ್ತೇವೆ’ ಎಂದು ಹೇಳಿದರು.

ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ಮಾತ್ರ ಅಲ್ಪ ಚೇತರಿಕೆ ಕಂಡುಬಂದಿದೆ. ‘ಎಫ್‌ಎಂಸಿ’ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಒಂಬತ್ತು ತಿಂಗಳಲ್ಲಿ ಸರಕು ವಹಿವಾಟು ಶೇ 50ರಷ್ಟು ಹೆಚ್ಚಿದ್ದು, ರೂ 82.7ಲಕ್ಷ ಕೋಟಿ ದಾಟಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.   ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಚಿನ್ನದ ವಿನಿಮಯ ಶೇ 64ರಷ್ಟು ಏರಿಕೆ ಕಂಡಿದ್ದು, ರೂ 19.37ಲಕ್ಷ ಕೋಟಿಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.