ADVERTISEMENT

`ಸಿಇಒ' ಹುದ್ದೆ ಆಕರ್ಷಣೆ-ಹೊಣೆ

ಕೆ.ಎಸ್.ಗಿರೀಶ್
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST
`ಸಿಇಒ' ಹುದ್ದೆ ಆಕರ್ಷಣೆ-ಹೊಣೆ
`ಸಿಇಒ' ಹುದ್ದೆ ಆಕರ್ಷಣೆ-ಹೊಣೆ   

ಇಡೀ ವಿಶ್ವದಲ್ಲೇ ಯುವ `ಸಿಇಒ' ಗಳಿಗೆ ಅತಿ ಹೆಚ್ಚು ಸಂಬಳ ಕೊಡುವ ದೇಶ ಭಾರತ. `ಸಿಇಒ' ಹುದ್ದೆ ಇಂದು ಕೇವಲ ಹುದ್ದೆಯಾಗಿ ಉಳಿದಿಲ್ಲ. ಎಂಬಿಎ ವಿದ್ಯಾರ್ಥಿಗಳ ಪಾಲಿಗೆ ಅದೊಂದು ಹೆಗ್ಗುರಿ.

ಆದರೆ ಅದೇನೂ ಸುಲಭದಲ್ಲಿ ಒಲಿಯುವಂತಹುದೂ ಅಲ್ಲ, ಹಾಗೆಂದೂ ತೀರಾ ದುರ್ಲಭವೂ ಅಲ್ಲ. ಆ ಹುದ್ದೆಯಲ್ಲಿ ಸಿಗುವ ಕೋಟಿಗಟ್ಟಲೆ ಸಂಬಳ ಎಂತಹವರನ್ನಾದರೂ ದಂಗುಬಡಿಸದೇ ಇರದು. `ಸಿಇಒ'ಗಳಿಗೆ ನೀಡಲಾಗುತ್ತಿರುವ ಅಧಿಕ ವೇತನವೇ ಕಂಪೆನಿಗಳಿಗೆ ಹೊರೆಯಾಗುತ್ತದೆ ಎನ್ನುವ ವಾದವೂ ಇದೆ.

ಅದಕ್ಕೆಂದೇ ಕೋಟ್ಯಧೀಶ ಮುಖೇಶ್ ಅಂಬಾನಿ ಅವರು ತಮ್ಮ ವೇತನಕ್ಕೆ ಮಿತಿ ಹಾಕಿಕೊಂಡಿದ್ದಾರೆ. ಇವರ  ವರ್ಷದ ಸಂಬಳ ರೂ24 ಕೋಟಿ ಎಂದು ರಿಲಯನ್ಸ್ ಸಂಸ್ಥೆ ಇತ್ತೀಚೆಗಷ್ಟೆ ಪ್ರಕಟಿಸಿತ್ತು. ಆದರೆ ಮುಖೇಶ್ ತಮಗೆ ರೂ15 ಕೋಟಿಯೇ ಸಾಕು ಎಂದರು. 2007-08ನೇ ಹಣಕಾಸು ವರ್ಷದಲ್ಲಿ ಮುಖೇಶ್ ಅಂಬಾನಿ ರೂ44 ಕೋಟಿ ವೇತನ ಪಡೆದ ನಂತರ ಭಾರತದ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) `ಸಿಇಒ'ಗಳು ಅತ್ಯಧಿಕ ಸಂಬಳ ಪಡೆಯುತ್ತಾರೆ ಎಂಬ ಆರೋಪ ಎದುರಾಯಿತು. ಇದರಿಂದ ಬೇಸತ್ತ ಮುಖೇಶ್ ಅಂಬಾನಿ 2009ರ ಅಕ್ಟೋಬರ್‌ನಲ್ಲಿ ತಮ್ಮ ವೇತನಕ್ಕೆ ರೂ. 15 ಕೋಟಿಯ ಮಿತಿ ಹಾಕಿಕೊಂಡರು. 2008-09ರಿಂದ ಇಲ್ಲಿಯವರೆಗೂ ಅಂದರೆ ಸತತ 5ನೇ ಹಣಕಾಸಿನ ವರ್ಷದವರೆಗೂ ಮುಖೇಶ್ ಅಂಬಾನಿ ಅವರಿಗೆ ಕಂಪೆನಿಯ ಷೇರುದಾರರ ಮಂಡಳಿಯು ಅತ್ಯಧಿಕ ವೇತನ ನೀಡಲು ಮುಂದಾದರೂ, ಅವರು ರೂ15 ಕೋಟಿ ಸಂಬಳವೇ ಸಾಕೆಂದಿದ್ದಾರೆ.

2011-12ರಲ್ಲೂ ಕಂಪೆನಿ ರೂ23.82 ಕೋಟಿ ವೇತನ ನೀಡಲು ಮುಂದಾಯಿತು. ಕಳೆದ ಹಣಕಾಸು ವರ್ಷವೂ ಕಂಪೆನಿಯ ಷೇರುದಾರರ ಮಂಡಳಿ ರೂ38.93 ಕೋಟಿ ವೇತನ ಘೊಷಿಸಿತು. ಆದರೆ, ಮಿತಿ ಮೀರುವುದಿಲ್ಲ ಎಂಬ ಮುಖೇಶ್ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. 2012-13ರಲ್ಲಿ ರೂ4.16 ಕೋಟಿ ಅವರ ಮೂಲ ವೇತನವಾದರೆ, 60 ಲಕ್ಷ  ಸಾರಿಗೆ ಮತ್ತು ಇತರೆ ಭತ್ಯೆ, ನಿವೃತ್ತಿ ಕೊಡುಗೆ ರೂ89 ಲಕ್ಷ ಹಾಗೂ ರೂ9.35 ಕೋಟಿ ಕಮಿಷನ್ ಭತ್ಯೆ ಸೇರಿದೆ ಎಂದು ಕಂಪೆನಿ ಹೇಳಿದೆ.ರಿಲಯನ್ಸ್ ಕಂಪೆನಿಯ ಆಡಳಿತ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕರಾದ ನಿಖಿಲ್ ಮೆಸ್ವಾನಿ ಹಾಗೂ ಹಿತಲ್ ಮೆಸ್ವಾನಿ ಅವರಿಗೆ ತಲಾ ರೂ11 ಕೋಟಿ ಸಂಬಳವಿದೆ. ಮತ್ತೊಬ್ಬ ಹಿರಿಯ ಅಧಿಕಾರಿ ಪಿಎಂಎಸ್ ಪ್ರಸಾದ್ ಅವರಿಗೆ ರೂ5 ಕೋಟಿ ಹಾಗೂ ಪಿ.ಕೆ.ಕಪಿಲ್ ಅವರಿಗೆ ರೂ 2 ಕೋಟಿ ವೇತನ ನೀಡಲಾಗುತ್ತಿದೆ ಎಂದು ಕಂಪೆನಿಯೇ ಪ್ರಕಟಿಸಿದೆ.

2012-13ರ ಹಣಕಾಸು ವರ್ಷದಲ್ಲಿ ಕಂಪೆನಿ ತನ್ನ ಸಿಬ್ಬಂದಿಗೆ ನೀಡುವ ಒಟ್ಟು ವೇತನ ರೂ5,179 ಕೋಟಿಯಷ್ಟಿದ್ದರೆ, ಹಿಂದಿನ ಹಣಕಾಸು ವರ್ಷದಲ್ಲಿ ವೇತನಕ್ಕಾಗಿ ರೂ3,955 ಕೋಟಿ ವೆಚ್ಚ ಮಾಡಲಾಗಿದೆ. ಸದ್ಯ ಕಂಪೆನಿಯಲ್ಲಿ 23,519 ಮಂದಿ ಸಿಬ್ಬಂದಿ ಇದ್ದಾರೆ. 

  ಅತ್ಯಧಿಕ ಸಂಬಳ ಪಡೆಯುವ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ ಫ್ರಾನ್ಸಿಸ್ಕೋ ಡಿಸೋಜಾ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ `ಕಾಗ್ನಿಜೆಂಟ್' ಕಂಪೆನಿಯ `ಸಿಇಒ' ಆಗಿರುವ ಇವರು ಕಳೆದ ಹಣಕಾಸು ವರ್ಷದಲ್ಲಿ ಪಡೆದ ಒಟ್ಟು ಸಂಬಳ 106.10 ಲಕ್ಷ ಅಮೆರಿಕನ್ ಡಾಲರ್(ರೂ58.35 ಕೋಟಿ). ಜತೆಗೆ 95.90 ಲಕ್ಷ ಡಾಲರ್ ಮೌಲ್ಯದ ಷೇರುಪತ್ರ, 4,05,780 ಅಮೆರಿಕನ್ ಡಾಲರ್(ರೂ2.23 ಕೋಟಿ) ಪ್ರೋತ್ಸಾಹ ಭತ್ಯೆಯನ್ನೂ ಪಡೆದುಕೊಂಡಿದ್ದಾರೆ.

ಮೂಲತಃ ಭಾರತೀಯ ರಾಜತಾಂತ್ರಿಕರೊಬ್ಬರ ಪುತ್ರನಾದ 44 ವರ್ಷ ವಯಸ್ಸಿನ ಡಿಸೋಜಾ, 1994ರಲ್ಲಿ ಸಹ-ಸ್ಥಾಪಕನಾಗಿ ಕಂಪೆನಿ ಪ್ರವೇಶಿಸಿದರು. 2007ರಲ್ಲಿ `ಸಿಇಒ' ಆದರು. 140 ಕೋಟಿ ಡಾಲರ್‌ನಷ್ಟಿದ್ದ ಕಂಪೆನಿಯ ವಾರ್ಷಿಕ ಆದಾಯವನ್ನು 700 ಕೋಟಿ ಡಾಲರ್ ಮಟ್ಟಕ್ಕೆ ಹಿಗ್ಗಿಸಿದರು. ಸದ್ಯ ಇವರು ಕಂಪೆನಿಯಲ್ಲಿಯೇ ಅತ್ಯಧಿಕ ಸಂಬಳ ಪಡೆಯುವ ಉದ್ಯೋಗಿಯಾಗಿದ್ದಾರೆ. ಸ್ವತಃ ಕಂಪೆನಿ ಅಧ್ಯಕ್ಷರೇ (ಜೋರ್ಡಾನ್ ಜೆ. ಕೊಬರ್ನ್ 62.30 ಲಕ್ಷ ಅಮೆರಿಕನ್ ಡಾಲರ್ ಅಂದರೆ, ರೂ 34.26 ಕೋಟಿ) ಇವರಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.

ಸಂಬಳ ಕಡಿತ
ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್ ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಡಿ. ಶಿಬುಲಾಲ್ ಅವರ ಸಂಬಳದಲ್ಲಿ ಶೇ. 26ರಷ್ಟು ಕಡಿತ ಮಾಡಿದೆ. 2011-12ರಲ್ಲಿ  ಹಣಕಾಸು ವರ್ಷದಲ್ಲಿ 1,62,990 ಡಾಲರ್ ವೇತನ ಪಡೆದಿದ್ದರೆ ಅದೇ 2012-13ರಲ್ಲಿ ಪಡೆದ ವೇತನ 1,19,774 ಡಾಲರ್!

ಟಿಸಿಎಸ್‌ನಲ್ಲಿ ಏರಿಕೆ
ಆದರೆ, ಟಿಸಿಎಸ್ `ಸಿಇಒ' ವೇತನದಲ್ಲಿ ಏರಿಕೆ ಮಾಡಿದೆ. ಕಾರ್ಯನಿರ್ವಾಹಕ ನಿರ್ದೇಶಕ ಫಿರೋಜ್ ವಂದ್ರವಾಲ ಅವರಿಗೆ ಶೇ. 41ರಷ್ಟು ಸಂಬಳ ಹೆಚ್ಚಿಸಲಾಗಿದೆ. ಅವರ ವೇತನ ರೂ1.41 ಕೋಟಿ.`ಸಿಇಒ' ಚಂದ್ರಶೇಖರನ್ ಅವರ ವೇತನ ರೂ1.41 ಕೋಟಿಯಿಂದ 1.92 ಕೋಟಿಗೆ ಏರಿದೆ.

ಸಿಇಒ ವಿದ್ಯಾರ್ಹತೆ?
ಇಷ್ಟೊಂದು ಭಾರಿ ಮೊತ್ತದ ವೇತನ ಇರುವ ಈ   `ಸಿಇಒ' ಹುದ್ದೆ ಪಡೆಯಬೇಕಾದರೆ ಯಾವ ವಿದ್ಯಾರ್ಹತೆ ಇರಬೇಕು ಎಂಬ ಪ್ರಶ್ನೆ ಕಾಡದೆ ಇರದು. ಕಂಪೆನಿ ಯಾವುದೇ ಆಗಲಿ ವ್ಯಾಪಾರ ಅಥವಾ ಕೈಗಾರಿಕೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರನ್ನೇ ಬಯಸುತ್ತವೆ. ಇದರೊಂದಿಗೆ ಹಲವು ವರ್ಷಗಳ ಕಾಲ ಕಂಪೆನಿಯ ಬೇರೆ ಬೇರೆ ಶ್ರೇಣಿಗಳಲ್ಲಿ ಕೆಲಸ ಮಾಡಿದ ಅನುಭವದ ಮೂಟೆಯೂ ಇರಬೇಕು. ಅಲ್ಲದೆ ನಾಯಕತ್ವ ಹಾಗೂ ಸಂವಹನ ಕಲೆ ಕರಗತವಾಗಿರಬೇಕು. ಬೆಟ್ಟದಷ್ಟು ದೊಡ್ಡ ಕನಸಿರಬೇಕು. ಎಂಥ ಸಮಯದಲ್ಲೂ ಎದೆಗುಂದದೆ ಗುರಿಯೆಡೆಗೆ ದಾಪುಗಾಲಿಕ್ಕುವ ಕೆಚ್ಚೆದೆ ಇದ್ದರೆ ಸಿಇಒ ಹುದ್ದೆಯಲ್ಲಿ ಯಶಸ್ಸು ಗಳಿಸಬಹುದು.

ಶೇ 60 ಸಿಇಒ `ಎಂಬಿಎ' ಅಲ್ಲ!
ಹೌದು, ಆಶ್ಚರ್ಯವಾದರೂ ಸತ್ಯ. `ಹಾವರ್ಡ್ ಬಿಸಿನೆಸ್ ರಿವ್ಯೆ' ಹಾಗೂ `ಬಿಜಿನೆಸ್ ಟುಡೆ' ನಿಯತಕಾಲಿಕೆಗಳು ಜಂಟಿಯಾಗಿ ನಡೆಸಿದ ಐಘೆಖಉಅಈ  ವರದಿಯಲ್ಲಿ ಶೇ 60ರಷ್ಟು ಭಾರತೀಯ ಕಂಪೆನಿಗಳ `ಸಿಇಒ'ಗಳು ಎಂಬಿಎ ಪದವಿ ಪಡೆದಿಲ್ಲ ಎಂದು ತಿಳಿಸಿದೆ.

ಹೊಸ ಉದ್ಯೋಗಿ ಸಂಬಳ ಅಂತರ
ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳ ಸಂಬಳಕ್ಕೂ ಸಿಇಒ ಗಳ ವೇತನ ಹಾಗೂ ಭತ್ಯೆಗಳಿಗೂ ಭಾರಿ ಅಂತರವಿರುವುದನ್ನು ಜಾಗತಿಕ ಮಾನವ ಹೊರಗುತ್ತಿಗೆ ಸಂಸ್ಥೆಯಾದ `ಎ-ಆನ್ ಹೆವಿಟ್'ನ (ಅಟ್ಞ ಏಛಿಡಿಜಿಠಿಠಿ) ಇತ್ತೀಚಿನ ಸಮೀಕ್ಷೆ ತಿಳಿಸಿದೆ. ವಿಶೇಷವಾಗಿ ಭಾರತದಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದವರ ಸಂಬಳಕ್ಕಿಂತ `ಸಿಇಒ' ವೇತನ 600ಪಟ್ಟು ಅಧಿಕ ಎಂದು ಸಮೀಕ್ಷೆ ತಿಳಿಸಿದೆ. ಈ ಪ್ರಮಾಣ ಅಮೆರಿಕ, ಯೂರೋಪ್ ಹಾಗೂ ಚೀನಾದಲ್ಲಿ  200-300ರಷ್ಟು ಮಾತ್ರವೇ ಹೆಚ್ಚಿಗೆ ಇದೆ ಎಂದು ಹೇಳಿದೆ.

ಭಾರತದಲ್ಲೇ ಅಧಿಕ ಸಂಬಳ!
ಜಾಗತಿಕ ನೇಮಕಾತಿ ಕಂಪೆನಿ `ರ್‍ಯಾಂಡ್‌ಸ್ಟ್ಯಾಂಡ್' ಸಮೀಕ್ಷೆ ಪ್ರಕಾರ `ಯುವ ಸಿಇಒ'ಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಸಂಬಳ ನೀಡುವ ದೇಶ ಭಾರತ.  50 ವರ್ಷದೊಳಗಿನ `ಸಿಇಒ'ಗಳು ಭಾರತದಲ್ಲಿ ಪಡೆಯುವ ಸಂಬಳ ರೂ7.9 ಕೋಟಿ ಇದ್ದರೆ, ಯೂರೋಪ್‌ನಲ್ಲಿ 7.8 ಕೋಟಿ ಹಾಗೂ ಅಮೆರಿಕದಲ್ಲಿ 7.3 ಕೋಟಿ ಇದೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ ಈ `ಸಿಇಒ' ಹುದ್ದೆಯೇನೂ ಹೂವಿನ ಹಾಸಿಗೆ ಅಲ್ಲ. ಸತತ ಪರಿಶ್ರಮ, ದೂರದೃಷ್ಟಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸ್ಥೈರ್ಯ, ಥಟ್ಟನೆ ಕಠಿಣ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದ್ದರಷ್ಟೇ ಈ ಹುದ್ದೆ ಲಭ್ಯ. ಜತೆಗೆ ಎಂಬಿಎ ಅಂತಹ ಪದವಿಯೂ ಅವಶ್ಯಕ.

`ಐಐಎಂ' ವಿದ್ಯಾರ್ಥಿ ಸಿಂಹಪಾಲು
ಇಂದೋರ್‌ನಲ್ಲಿರುವ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ `ಐಐಎಂ'ನ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬನಿಗೆ (ಕ್ಯಾಂಪಸ್ ಆಯ್ಕೆ) ವಾರ್ಷಿಕ ರೂ. 34 ಲಕ್ಷ ಸಂಬಳ ನೀಡಲು ಕಂಪೆನಿಯೊಂದು ಮುಂದೆ ಬಂದಿದೆ. ಇತರೆ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಸರಾಸರಿ 12.1 ಲಕ್ಷ ವೇತನದ ನೌಕರಿಯ ಭರವಸೆ ದೊರಕಿವೆ.

                       ಭಾರತಸಿಇಒ ಸಂಬಳ (2011-12)
1. ನವೀನ್ ಜಿಂದಾಲ್ ಜಿಂದಾಲ್ ಸ್ಟೀಲ್ ಮತ್ತು ಪವರ್ ಕಂಪೆನಿ ರೂ. 73.42 ಕೋಟಿ
2. ಕಲಾನಿಧಿ ಮಾರನ್‌ಕಾರ್ಯನಿರ್ವಾಹಕ ಮುಖ್ಯಸ್ಥ ಸನ್ ಟಿವಿ ಬಳಗರೂ. 57.01 ಕೋಟಿ
3. ಕಾವೇರಿ ಕಲಾನಿಧಿ ಕಾರ್ಯನಿರ್ವಾಹಕ ನಿರ್ದೇಶಕ ಸನ್ ಟಿವಿ ಬಳಗ ರೂ. 57.01 ಕೋಟಿ
4. ಕುಮಾರ ಮಂಗಳಂ ಬಿರ್ಲಾ ಮುಖ್ಯಸ್ಥರು,ಅಲ್ಟ್ರಾ ಟೆಕ್ ಸಿಮೆಂಟ್, ರೂ. 47.11 ಕೋಟಿ
5. ಪವನ್ ಕಾಂತ್ ಮುಂಜಲ್‌ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಮೋಟೊಕ್ರಾಪ್ ರೂ. 34.47 ಕೋಟಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.