ADVERTISEMENT

ಸಿಎಡಿ ನಿರ್ವಹಣೆ ಸವಾಲು

ಪಿಎಂಇಎಸಿ; ಆರ್ಥಿಕ ಮುನ್ನೋಟ ವರದಿ–2013–14

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): ‘ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿ­ರುವ ಚಾಲ್ತಿ ಖಾತೆ ಕೊರತೆ (ಸಿಎಡಿ) ಮತ್ತು ವಿತ್ತೀಯ ಕೊರತೆ ನಿರ್ವ­ಹಣೆಯೇ ಸದ್ಯ ದೇಶ ಎದುರಿಸುತ್ತಿರುವ ಬಹು ದೊಡ್ಡ ಸವಾಲು. ಈ ಬಿಕ್ಕಟ್ಟಿನಿಂದ ಹೊರ­ಬರಲು ತೈಲ ಸಬ್ಸಿಡಿ ಮತ್ತು ಸರ್ಕಾರದ ಯೋಜನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಅಗತ್ಯ ಇದೆ’ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ(ಪಿಎಂಇಎಸಿ) ಅಭಿಪ್ರಾಯ­ಪಟ್ಟಿದೆ.

ಶುಕ್ರವಾರ ಇಲ್ಲಿ 2013–14ನೇ ಸಾಲಿನ ಆರ್ಥಿಕ ಮುನ್ನೋಟ ವರದಿ ಬಿಡುಗಡೆ ಮಾಡಿದ ‘ಪಿಎಂಇಎಸಿ’ ಅಧ್ಯಕ್ಷ  ಸಿ.ರಂಗರಾಜನ್‌, ‘ಸಿಎಡಿ’  ಮತ್ತು ವಿತ್ತೀಯ ಕೊರತೆ ಹೊರೆ ಹೆಚ್ಚಳದಿಂದ ಪ್ರಸಕ್ತ ಹಣ­ಕಾಸು ವರ್ಷದಲ್ಲಿ ದೇಶದ ‘ಜಿಡಿಪಿ’ ಪ್ರಗತಿ­ಯನ್ನು ಈ ಮೊದಲು (ಏಪ್ರಿಲ್‌ನಲ್ಲಿ ) ಅಂದಾ­ಜು ಮಾಡಿದ್ದ ಶೇ 6.4ರಿಂದ ಶೇ 5.3ಕ್ಕೆ ತಗ್ಗಿಸಲಾಗಿದೆ ಎಂದರು.

ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿ ಹೆಚ್ಚಿಸಿರುವುದು, ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳು ಮತ್ತು ಸ್ಥಿರವಾದ ತೆರಿಗೆ ದರ ವ್ಯವಸ್ಥೆಯಿಂದ ಅಲ್ಪಾವಧಿ ಮತ್ತು ದೀರ್ಘಾ­ವಧಿಯಲ್ಲಿ ದೇಶದ ಜಿಡಿಪಿ ಚೇತರಿಸಿಕೊಳ್ಳಲಿದೆ. ಇದರಿಂದ ಹಣಕಾಸು ವರ್ಷದ ಅಂತ್ಯಕ್ಕೆ ‘ಸಿಎಡಿ’ ‘ಜಿಡಿಪಿ’ಯ ಶೇ 3.8ಕ್ಕೆ (7,000 ಕೋಟಿ ಡಾಲರ್‌ಗಳಿಗೆ) ಇಳಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನಲ್ಲಿ ಕೃಷಿ ವಲಯ ಶೇ 4.8ರಷ್ಟು ಮತ್ತು ಕೈಗಾರಿಕೆ ಕ್ಷೇತ್ರ ಶೇ 2.7ರಷ್ಟು ಪ್ರಗತಿ ಕಾಣಲಿದೆ ಎಂದೂ ‘ಪಿಎಂಇಎಸಿ’ ಅಂದಾಜು ಮಾಡಿದೆ.

ಬಿಗಿ ಹಣಕಾಸು ನೀತಿ
ದೇಶದ ಹಣಕಾಸು ಮಾರುಕಟ್ಟೆ­ಯಲ್ಲಿನ ಅಸ್ಥಿರತೆ­ಯಿಂದ ಸದ್ಯದ ಬಿಕ್ಕಟ್ಟು ಎದುರಾಗಿದೆ. ಇದರಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಸ್ಥಿರಗೊ­ಳ್ಳುವವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಈಗಿನ ಬಿಗಿ ಹಣಕಾಸು ನೀತಿಯನ್ನೇ ಮುಂದು­ವರಿಸಿಕೊಂಡು ಹೋಗುವ ಅಗತ್ಯ ಇದೆ ಎಂದು ‘ಪಿಎಂಇಎಸಿ’ ಸಲಹೆ ಮಾಡಿದೆ.   

ಚಿನ್ನ ಆಮದು ಇಳಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನ ಆಮದು 3,800 ಕೋಟಿ ಡಾಲರ್‌­ಗಳಿಗೆ ಇಳಿಕೆ ಕಾಣಲಿದೆ ಎಂದು ‘ಪಿಎಂಇಎಸಿ’ ಅಂದಾಜು ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ 5,380 ಕೋಟಿ ಡಾಲರ್‌ ಮೌಲ್ಯದ ಚಿನ್ನ ಆಮದಾಗಿತ್ತು. ಇದರಿಂದ ‘ಸಿಎಡಿ’ 8,820 ಕೋಟಿ ಡಾಲರ್‌ಗಳಿಗೆ ಏರಿಕೆ ಕಂಡಿತ್ತು.
ತಜ್ಞರ ಅಸಮಾಧಾನ ‘ಪಿಎಂಇಎಸಿ’ ಅಂದಾಜು ಮಾಡಿ­ರುವ ಜಿಡಿಪಿ ಅಂಕಿ ಅಂಶಗಳು ವಾಸ್ತವ ಚಿತ್ರಣಕ್ಕೆ ತದ್ವಿರುದ್ಧವಾಗಿವೆ ಎಂದು  ಆರ್ಥಿಕ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಿಎಂಇಎಸಿ’ ಅಂಕಿ–ಅಂಶಗಳನ್ನು ನಾನು ಒಪ್ಪುವುದಿಲ್ಲ. ಹೂಡಿಕೆ ಗಣನೀ­ಯವಾಗಿ ತಗ್ಗಿರುವು­ದರಿಂದ ಪ್ರಸಕ್ತ ಹಣಕಾಸು ವರ್ಷದ ದ್ವಿತೀ­ಯಾರ್ಧದಲ್ಲಿ ಆರ್ಥಿಕತೆ ಚೇತರಿಸಿ­ಕೊಳ್ಳುವ ಯಾವುದೇ ಸೂಚನೆ ಇಲ್ಲ. ಹೆಚ್ಚೆಂದರೆ ಶೇ 4.3ರಷ್ಟು ‘ಜಿಡಿಪಿ’ ದಾಖಲಾ­ಗಬಹುದು. ಹಣ­ದುಬ್ಬರ ಶೇ 6.5ರಷ್ಟು ಇರಲಿದೆ’ ಎಂದು ಸೆಂಟರ್ ಫಾರ್‌ ಪಾಲಿಸಿ ರಿಸರ್ಚ್‌ನ ರಾಜೀವ್ ಕುಮಾರ್‌ ಅಭಿಪ್ರಾಯ­ಪಟ್ಟಿದ್ದಾರೆ. ‘ಪ್ರಸಕ್ತ ಸಾಲಿನಲ್ಲಿ ಶೇ 4.8­ರಷ್ಟು ‘ಜಿಡಿಪಿ’ ದಾಖಲಾ­ಗಬ­­ಹುದು ಎಂದು ರೇಟಿಂಗ್‌ ಸಂಸ್ಥೆ ‘ಕ್ರಿಸಿಲ್‌’ನ ಹಿರಿಯ ಆರ್ಥಿಕ ತಜ್ಞ ಡಿ.ಕೆ ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.