ADVERTISEMENT

ಸುಸ್ಥಿರ ಆರ್ಥಿಕ ಪ್ರಗತಿ: ಮೊಂಟೆಕ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ನವದೆಹಲಿ (ಪಿಟಿಐ): ಬರಲಿರುವ 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಹಿಂದಿನ ಸುಸ್ಥಿರ ಮಟ್ಟ ಶೇ 8ಕ್ಕೆ ಮರಳಲಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಶೇ 7ರಷ್ಟು `ಜಿಡಿಪಿ~ ನಿರೀಕ್ಷಿಸಲಾಗಿದೆ. ಆದರೆ, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆರ್ಥಿಕ ವೃದ್ಧಿ ದರ ಶೇ 8ರ ಮಟ್ಟ ತಲುಪಲು ಅಗತ್ಯವಾದ ಎಲ್ಲ ಕ್ರಮಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಕೈಗೊಳ್ಳಲಿದ್ದೇವೆ. 2012-13ನೇ ಸಾಲಿನ ಬಜೆಟ್‌ನ ಪ್ರಮುಖ ಗುರಿ ಆರ್ಥಿಕ ಬಲವರ್ಧನೆ ಎಂದು ಅವರು  ಖಾಸಗಿ ಟೆಲಿವಿಷನ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಬಾರಿಯ ಬಜೆಟ್ ಅನ್ನು ಮಾರ್ಚ್ ಮಧ್ಯದಲ್ಲಿ ಮಂಡಿಸುವ ಆಲೋಚನೆ ಇದೆ. ಅಂತರರಾಷ್ಟ್ರೀಯ ಸಂಗತಿಗಳ ಪ್ರಭಾವದಿಂದ ಒಟ್ಟಾರೆ ಈಗಿನ ಆರ್ಥಿಕ ಪರಿಸ್ಥಿತಿ ಅತ್ಯಂತ ಮಹತ್ವದ, ಸವಾಲಿನ ಕಾಲಘಟ್ಟ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಆರ್ಥಿಕ ಅಸ್ಥಿರತೆ, ಹಣದುಬ್ಬರ ಏರಿಕೆ, ಕೈಗಾರಿಕೆ ವೃದ್ಧಿ ದರ ಕುಸಿತ ಇತ್ಯಾದಿ ಸಂಗತಿಗಳಿಂದ ಸರ್ಕಾರ ಪ್ರಸಕ್ತ ವರ್ಷದ ಆರ್ಥಿಕ ವೃದ್ಧಿ ದರದ ಅಂದಾಜನ್ನು ಶೇ 8ರಿಂದ ಶೇ 7.5ಕ್ಕೆ ಕಳೆದ ತಿಂಗಳು ಇಳಿಸಿತ್ತು. ವೃದ್ಧಿ ದರವು ಹಣಕಾಸು ವರ್ಷದ ಅಂತ್ಯಕ್ಕೆ ಶೇ 7ಕ್ಕೆ ಸ್ಥಿರಗೊಳ್ಳಬಹುದು ಎಂದು ಮೊಂಟೆಕ್ ಹೇಳಿದ್ದಾರೆ.

`ಜಿಡಿಪಿ~ ಈ ಹಿಂದಿನ ಸುಸ್ಥಿರ ಮಟ್ಟ ಶೇ 8ಕ್ಕೆ ಮರಳುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆಯಲ್ಲಿ ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಬಳಿ ಇರುವ ಬಂಡವಾಳವನ್ನು ಮೂಲಸೌಕರ್ಯ ಮತ್ತು ಇಂಧನ ಕ್ಷೇತ್ರದಲ್ಲಿ ತೊಡಗಿಸಲು ಆದ್ಯತೆ ನೀಡುತ್ತಿವೆ. ಹಣದುಬ್ಬರ ಇಳಿಕೆಯಾಗಿರುವುದರಿಂದ ಮುಂದಿನ ವರ್ಷದ ಪ್ರಗತಿಗೆ ರೂಪುರೇಷೆ ಸಿದ್ಧಪಡಿಸಲು ಇದು ಸಕಾಲ ಎಂದೂ ಮೊಂಟೆಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.