ADVERTISEMENT

ಸೂಚ್ಯಂಕ 171 ಅಂಶ ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST
ಸೂಚ್ಯಂಕ 171 ಅಂಶ ಇಳಿಕೆ
ಸೂಚ್ಯಂಕ 171 ಅಂಶ ಇಳಿಕೆ   

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತದಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 171 ಅಂಶಗಳಷ್ಟು ಹಾನಿ ಅನುಭವಿಸಿ 19,233 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಕರೆನ್ಸಿ ಮಾರುಕಟ್ಟೆಗೆ `ಆರ್‌ಬಿಐ' ಮಧ್ಯ      ಪ್ರವೇಶ ವಿಳಂಬವಾದ ಹಿನ್ನೆಲೆಯಲ್ಲಿ ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್ ಷೇರುಗಳು ಗರಿಷ್ಠ ಹಾನಿ ಅನುಭವಿಸಿದವು. ಇದರಿಂದ ಹೂಡಿಕೆದಾರರು ರೂ1.557 ಕೋಟಿಯಷ್ಟು ಹಾನಿ ಅನುಭವಿಸಿದರು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ರೂ204.46 ಕೋಟಿ ಮೊತ್ತದ ಷೇರು ಮಾರಾಟ ಮಾಡಿದರು.
  
ಕಚ್ಚಾ ತೈಲ ತುಟ್ಟಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 9 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.  ಇದರಿಂದ ಆಮದುದಾರರು ಮತ್ತು ಬ್ಯಾಂಕುಗಳಿಂದ ಡಾಲರ್ ಬೇಡಿಕೆ ಹೆಚ್ಚಿದೆ. ಈ ಸಂಗತಿ ಕೂಡ ಷೇರುಪೇಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

  `ಒಎನ್‌ಜಿಸಿ' ಷೇರು ಮೌಲ್ಯ ಶೇ 3.49ರಷ್ಟು ಕುಸಿತಕಂಡು ರೂ304.45ಕ್ಕೆ ಜಾರಿತು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರಮವಾಗಿ ಶೇ 1.35 ಮತ್ತು ಶೇ 2.21 ರಷ್ಟು ಕುಸಿತ ಕಂಡವು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ಕೂಡ 56 ಅಂಶಗಳನ್ನು ಕಳೆದುಕೊಂಡು 5,811 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಐ.ಟಿಗೆ ಲಾಭ
ರೂಪಾಯಿ ಅಪಮೌಲ್ಯದಿಂದ ರಫ್ತು ವಹಿವಾಟು ನಡೆಸುವ ಸಾಫ್ಟ್‌ವೇರ್ ಸಂಸ್ಥೆಗಳ ಷೇರು ಮೌಲ್ಯ ವೃದ್ಧಿಸಿದೆ. ಸೋಮವಾರದ ವಹಿವಾಟಿನಲ್ಲಿ ಇನ್ಫೊಸಿಸ್, ಎಚ್‌ಸಿಎಲ್, ಹೆಕ್ಸಾವೇರ್, ವಿಪ್ರೊ ಸೇರಿದಂತೆ ಪ್ರಮುಖ ಕಂಪೆನಿಗಳ ಷೇರು ಮೌಲ್ಯ ಶೇ 4ರಷ್ಟು ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.