ADVERTISEMENT

ಸೂಚ್ಯಂಕ 4 ತಿಂಗಳಲ್ಲೇ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST

ಮುಂಬೈ(ಪಿಟಿಐ): ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಸೋಮವಾರ ಹಣಕಾಸು ವಿಧೇಯಕ ಮಂಡಿಸಿದ ನಂತರ ಷೇರುಪೇಟೆಯಲ್ಲಿ ಮೂಡಿದ್ದ ಹರ್ಷೋಲ್ಲಾಸ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಇಲ್ಲವಾಯಿತು! ಸೂಚ್ಯಂಕ ಕಳೆದ 4 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಮಂಗಳವಾರ 16,546.18 ಅಂಶಗಳೊಂದಿಗೆ ದಿನದ ಅಂತ್ಯ ಕಂಡಿತು. ಅಲ್ಲಿಗೆ ಸೂಚ್ಯಂಕದಲ್ಲಿ 366.53 ಅಂಶ ನಷ್ಟವಾಗಿತ್ತು.

 ಜನರಲ್ ಆಂಟಿ ಅವಾಯ್ಡೆಂಟ್ ರೂಲ್(ಜಿಎಎಆರ್) ಜಾರಿ ಮುಂದೂಡಿದ ಪ್ರಣವ್ ಮುಖರ್ಜಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿದ್ದ ತೆರಿಗೆ ಭೀತಿ ನಿವಾರಿಸಿದ್ದರಿಂದ ಸೋಮವಾರ ಷೇರುಪೇಟೆಯಲ್ಲಿ ಸಂತಸದ ಹೊನಲು ಹರಿದಿತ್ತು. ಆದರೆ ಮಂಗಳವಾರ ಬಿಎಸ್‌ಇ ಪರಿಸ್ಥಿತಿ ಆ ಸಂತಸ ಕೆಲವೇ ಗಂಟೆಗಳಲ್ಲಿ ಕೊನೆಗೊಂಡಂತೆ ತೋರುತ್ತಿದೆ. ಪರಿಣಾಮ ಒಂದೇ ದಿನದಲ್ಲಿ ಪೇಟೆಯಲ್ಲಿನ ಷೇರುಗಳ ಮೌಲ್ಯ  53 ಸಾವಿರ ಕೋಟಿ ಕುಸಿದಿದೆ ಎಂದಿದ್ದಾರೆ ಮಾರುಕಟ್ಟೆ ವಿಶ್ಲೇಷಕರು.

ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ್ ಅವರು ಹೈದರಾಬಾದ್‌ನಲ್ಲಿ `ಹಣದುಬ್ಬರದ ಒತ್ತಡ ಕಾರಣ ಬಡ್ಡಿದರ ಇಳಿಕೆ ಪ್ರಮಾಣ ಬಹಳ ಕಡಿಮೆ ಇರಲಿದೆ~ ಎಂದು ಹೇಳಿದ್ದೇ ಸೂಚ್ಯಂಕ ಕುಸಿತಕ್ಕೆ ಮುಖ್ಯ ಕಾರಣ ಎಂದು ಷೇರು ದಲ್ಲಾಳಿಗಳು ವಿಶ್ಲೇಷಿಸಿದ್ದಾರೆ.

ಹೈದರಾಬಾದ್(ಪಿಟಿಐ): ಬಡ್ಡಿದರ ಕಡಿಮೆ ಮಾಡುವ ಪ್ರಕ್ರಿಯೆಯನ್ನು ಏಪ್ರಿಲ್‌ನಲ್ಲಿಯೇ ಆರಂಭಿಸಿದೆವು. ಈಗ ಹಣದುಬ್ಬರದ ಸ್ಥಿತಿ ನೋಡಿದರೆ ಬ್ಯಾಂಕಿಂಗ್ ಬಡ್ಡಿದರ ಮತ್ತಷ್ಟು ಇಳಿಸುವ ಅವಕಾಶ ಕಡಿಮೆ ಇದೆ ಎಂದು ಆರ್‌ಬಿಐ ಡೆಪ್ಯುಟಿ ಗರ್ವನರ್ ಸುಬೀರ್ ಗೋಕರ್ಣ್ ಇಲ್ಲಿ ಫಿಕ್ಕಿ ಸಮಾವೇಶದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.