ನವದೆಹಲಿ (ಐಎಎನ್‌ಎಸ್): ಪ್ರಸಕ್ತ ಬಜೆಟ್‌ನಲ್ಲಿ ಸೇವಾ ತೆರಿಗೆಯನ್ನು ಶೇ 10ರಿಂದ ಶೇ 12ಕ್ಕೆ ಹೆಚ್ಚಿಸಲಾಗಿದ್ದು, ಈ ಮೂಲಕ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ರೂ 18,600 ಕೋಟಿ ಬಂಡವಾಳ ಹರಿದು ಬರಲಿದೆ.
`ಆರೋಗ್ಯಕರ ಹಣಕಾಸು ಪರಿಸ್ಥಿತಿ ಕಾಯ್ದುಕೊಳ್ಳಲು ಮತ್ತು ಸುಸ್ಥಿರ ಪ್ರಗತಿ ದಾಖಲಿಸಲು ಸೇವಾ ತೆರಿಗೆಯನ್ನು ಶೇ 2ರಷ್ಟು ಹೆಚ್ಚಿಸಲಾಗಿದೆ. ಸೇವಾ ವಲಯದಿಂದ ದೇಶದ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಶೇ 59ರಷ್ಟು ಕೊಡುಗೆ ಇರುವುದರಿಂದ ಈ ಹೆಚ್ಚಳವನ್ನು ಯಾರೂ ಹೊರೆಯಾಗಿ ಪರಿಗಣಿಸುವುದಿಲ್ಲ~ ಎಂದು ಪ್ರಣವ್ ಸಮರ್ಥಿಸಿಕೊಂಡಿದ್ದಾರೆ.
`ನಕಾರಾತ್ಮಕ ಪಟ್ಟಿ~ಯಲ್ಲಿ ಇರುವ ಸುಮಾರು 17 ಸೇವೆಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಖಾಸಗಿ ವಲಯದ ಸ್ಪರ್ಧೆ ಎದುರಿಸಲು ಈ ಸೇವೆಗಳಿಗೆ ತೆರಿಗೆ ವಿನಾಯ್ತಿ ಕಲ್ಪಿಸಲಾಗಿದೆ ಎಂದು ಪ್ರಣವ್ ಸ್ಪಷ್ಟಪಡಿಸಿದ್ದಾರೆ. `ನಕಾರಾತ್ಮಕ ಪಟ್ಟಿ~ ವ್ಯವಸ್ಥೆಯು ಜಾಗತಿಕವಾಗಿ ಬಳಕೆಯಲ್ಲಿದೆ. ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಭಾಗವಾಗಿ ದೇಶದಲ್ಲಿ ಇದನ್ನು ಪರಿಚಯಿಸಲಾಗಿದೆ.
ಶಾಲಾ ಪೂರ್ವ ಶಿಕ್ಷಣ, ಶಾಲಾ ಶಿಕ್ಷಣ, ಉನ್ನತ ಮಟ್ಟದಲ್ಲಿ ಅಂಗೀಕಾರ ಪಡೆದಿರುವ ಶಿಕ್ಷಣ, ಅನುಮೋದನೆ ಪಡೆದಿರುವ ಔದ್ಯೋಗಿಕ ಶಿಕ್ಷಣ, ಗೃಹ ನಿರ್ಮಾಣಕ್ಕೆ ಬಳಸಿಕೊಳ್ಳುವ ಯಂತ್ರಗಳ ಬಾಡಿಗೆ, ಮನೋರಂಜನೆ ಮತ್ತು ವಿನೋದ ಸೇವೆಗಳು, ಒಳನಾಡಿನ ಜಲ ಮಾರ್ಗ, ನಗರ ರೈಲ್ವೆ ಸೇವೆಗಳು, ಮೀಟರ್ ಕ್ಯಾಬ್‌ಗಳ ಸೇವೆ ಸೇರಿದಂತೆ ದೊಡ್ಡ ಪ್ರಮಾಣದ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.
ಕಟಾವು, ಬೀಜೋತ್ಪಾದನೆ, ಫಸಲು ನಿರ್ವಹಣೆ ಸೇರಿದಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುವವರೆಗಿನ ಸೇವೆಗಳಿಗೆ ತೆರಿಗೆಯಿಂದ ವಿನಾಯ್ತಿ ಕಲ್ಪಿಸಲಾಗಿದೆ. ಆರೋಗ್ಯ ಸೇವೆಗಳು, ದತ್ತಿ ಸಂಸ್ಥೆಗಳು, ಧಾರ್ಮಿಕ ವ್ಯಕ್ತಿಗಳು, ಕ್ರೀಡಾಪಟುಗಳು, ಜನಪದ ಮತ್ತು ಶಾಸ್ತ್ರೀಯ ಕಲಾವಿದರು ನೀಡುವ ಸೇವೆಗಳಿಗೆ ತೆರಿಗೆ ಇಲ್ಲ.
ವಾಣಿಜ್ಯೇತರ ಸೇವೆ ಒದಗಿಸುವ ವಕೀಲರಿಗೆ, ಹವ್ಯಾಸಿ ಪತ್ರಕರ್ತರಿಗೆ ಕೂಡ ಸೇವಾ ತೆರಿಗೆ ವಿನಾಯ್ತಿ ನೀಡಲಾಗಿದೆ. ಚಲನಚಿತ್ರ ರೆಕಾರ್ಡಿಂಗ್ ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದಂತೆ ಚಿತ್ರೋದ್ಯಮಕ್ಕೆ ಸಹ ಸೇವಾ ತೆರಿಗೆಯಿಂದ ವಿನಾಯ್ತಿ ಕಲ್ಪಿಸಲಾಗಿದೆ.
ಗೃಹ ಸಂಸ್ಥೆಗಳ ಸದಸ್ಯರು ಪಾವತಿಸುವ ಮಾಸಿಕ ಶುಲ್ಕದ ವಿನಾಯ್ತಿ ಮಿತಿಯನ್ನು ರೂ 3 ಸಾವಿರದಿಂದ ರೂ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜೀವ ವಿಮೆಯ ಒಟ್ಟು ಕಂತುಗಳು ಪರಿಹಾರ ಮೊತ್ತಕ್ಕೆ ಒಳಪಟ್ಟಿರದಿದ್ದರೆ, ಮೊದಲ ವರ್ಷದ ಪ್ರ್ರೀಮಿಯಂ ಪಾವತಿಯ ಮೇಲೆ ಶೇ 3ರಷ್ಟು ನಂತರದ ವರ್ಷಗಳಲ್ಲಿ ಶೇ 1.5ರಷ್ಟು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.
ಆದರೆ, ಗ್ರಾಮೀಣ ವಲಯದ ವಿಮಾ ಯೋಜನೆಗಳಿಗೆ ತೆರಿಗೆ ವಿನಾಯ್ತಿ ಕಲ್ಪಿಸಲಾಗಿದೆ. 2010-11ನೇ ಸಾಲಿನಲ್ಲಿ ಸೇವಾ ತೆರಿಗೆಯ ಮೂಲಕ ಸರ್ಕಾರ ಒಟ್ಟು ರೂ 70 ಸಾವಿರ ಕೋಟಿ ಸಂಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.