ADVERTISEMENT

ಸ್ಥಿರತೆ ಕಾಣದ ವಹಿವಾಟು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST
ಸ್ಥಿರತೆ ಕಾಣದ ವಹಿವಾಟು
ಸ್ಥಿರತೆ ಕಾಣದ ವಹಿವಾಟು   

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈ ವಾರ ಇನ್ನಷ್ಟು ಏರಿಕೆ ದಾಖಲಿಸಿ ಕೆಲಮಟ್ಟಿಗೆ ಸದೃಢಗೊಳ್ಳುವ ಮುನ್ನ ಕುಸಿತ ಕಾಣುವ ಸಾಧ್ಯತೆಗಳು ಇವೆ.

ವಹಿವಾಟಿನ ಗತಿ ಬಗ್ಗೆ ಜಾಗತಿಕ ಷೇರುಪೇಟೆಗಳತ್ತ ದೃಷ್ಟಿ ನೆಟ್ಟಿರುವ ಮುಂಬೈ ಪೇಟೆಯು, ಈ ತಿಂಗಳ 16ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಹಣಕಾಸು ನೀತಿಯ ಪರಾಮರ್ಶೆಯನ್ನೂ ಎದುರು ನೋಡುತ್ತಿದೆ.ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಸೋಮವಾರದ ವಹಿವಾಟಿನ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಈ ನಿರೀಕ್ಷೆಯ ಹೊರತಾಗಿಯೂ ಪೇಟೆಯ ವಹಿವಾಟು ಕೆಲಮಟ್ಟಿಗೆ ಬಲಗೊಳ್ಳುವ ಸಾಧ್ಯತೆಗಳೂ ಇವೆ ಎಂದು ಜಿಯೊಜಿತ್ ಬಿಎನ್‌ಪಿ ಪರಿಬಾಸ್ ಫೈನಾನ್ಶಿಯಲ್ ರಿಸರ್ಚ್‌ನ ಮುಖ್ಯಸ್ಥ ಅಲೆಕ್ಸ್ ಮ್ಯಾಥ್ಯೂ ಅಭಿಪ್ರಾಯಪಟ್ಟಿದ್ದಾರೆ.

ಗರಿಷ್ಠ ಮಟ್ಟದ ಹಣದುಬ್ಬರ ಮತ್ತು  ಜಾಗತಿಕ ಪೇಟೆಗಳಲ್ಲಿನ ಇಳಿಕೆಯು ಕಳವಳಕಾರಿಯಾಗಿದ್ದರೂ, ಹೂಡಿಕೆದಾರರ ಪಾಲಿಗೆ ಷೇರುಗಳು ಸದ್ಯಕ್ಕೆ ಆಕರ್ಷಕ ಬೆಲೆಗೆ ದೊರೆಯುತ್ತಿವೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್‌ನ ಸಹ ಉಪಾಧ್ಯಕ್ಷ ಪರಾಗ್ ಡಾಕ್ಟರ್ ಹೇಳಿದ್ದಾರೆ.
 
ಸೂಚ್ಯಂಕವು ಏರಿಕೆ ಹಾದಿಯಲ್ಲಿಯೇ ಮುನ್ನಡೆಯಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಬಹುತೇಕ ಬ್ಯಾಂಕ್, ಆಟೊಮೊಬೈಲ್, ತಂತ್ರಜ್ಞಾನ, ರಿಯಲ್ ಎಸ್ಟೇಟ್ ಷೇರುಗಳು ಆಕರ್ಷಕ  ಬೆಲೆಗೆ ವಹಿವಾಟು ನಡೆಸುತ್ತಿವೆ.
 
ಆದರೆ, ಅಮೆರಿಕದ ಅರ್ಥವ್ಯವಸ್ಥೆ ಕುರಿತ ಅನಿಶ್ಚಿತತೆ ಒಟ್ಟಾರೆ ವಹಿವಾಟಿನ ಗತಿ ನಿರ್ಧರಿಸಲಿದೆ. ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿಲ್ಲ. ಆಗಸ್ಟ್‌ನಲ್ಲಿ  ಉದ್ಯೋಗ ದರ ಶೇ 9.1ರಷ್ಟೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.