ADVERTISEMENT

ಹಣದುಬ್ಬರ ಅಲ್ಪ ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ತರಕಾರಿ ಧಾರಣೆ ಸ್ವಲ್ಪ ತಗ್ಗಿದ ಕಾರಣ ಸಗಟು ಬೆಲೆ ಸೂಚ್ಯಂಕ ಆಧರಿಸಿದ(ಡಬ್ಲ್ಯುಪಿಐ) ಹಣದುಬ್ಬರ ದರ ನವೆಂಬರ್‌ನಲ್ಲಿ 10 ತಿಂಗಳಲ್ಲೇ ಕನಿಷ್ಠ ಮಟ್ಟವಾದ ಶೇ 7.24ಕ್ಕೆ ಇಳಿದಿದೆ. `ಮುಂಬರುವ ದಿನಗಳಲ್ಲಿ ಹಣದುಬ್ಬರ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಹಣದುಬ್ಬರ ಶೇ 9.46ರಷ್ಟು ದಾಖಲಾಗಿತ್ತು. ತರಕಾರಿ ಬೆಲೆ ನವೆಂಬರ್‌ನಲ್ಲಿ ಶೇ 1.19ರಷ್ಟು ಕಡಿಮೆ ಆಗಿದೆ. ಉಳಿದಂತೆ ಅಕ್ಕಿ, ಗೋಧಿ, ಖಾದ್ಯ ತೈಲ, ಬೇಳೆಕಾಳು ಧಾರಣೆ ಹೆಚ್ಚಿದೆ.
`ಹಣದುಬ್ಬರ ತಗ್ಗುತ್ತಿರುವುದು ಸ್ವಾಗತಾರ್ಹ. ಇದು ಶೇ 5-6ರ ಆಸುಪಾಸಿಗೆ ಬಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿದರ ತಗ್ಗಿಸಬಹುದು' ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ. 

ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, `ಇದು ಧನಾತ್ಮಕ ಬೆಳವಣಿಗೆ' ಎಂದು ಪ್ರತಿಕ್ರಿಯಿಸಿದ್ದಾರೆ. `ಹಣದುಬ್ಬರ ಹಿತಕರ ಮಟ್ಟಕ್ಕೆ ಬರಲು ಇನ್ನೂ 2-3 ತಿಂಗಳು ಕಾಯಬೇಕಿದೆ' ಎಂದು `ಆರ್‌ಬಿಐ' ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.