ADVERTISEMENT

ಹಣದುಬ್ಬರ ತಗ್ಗಿಸಲು ‘ಆರ್‌ಬಿಐ’ಗೆ ಗುರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST
ನವದೆಹಲಿಯಲ್ಲಿ ಶುಕ್ರವಾರ ನಡೆದ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಕೇಂದ್ರೀಯ ಮಂಡಳಿ ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ನಮೋ ನಾರಾಯಣ ಮೀನಾ, ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಮತ್ತಿತರರು ಭಾಗವಹಿಸಿದ್ದರು 	– ಪಿಟಿಐ ಚಿತ್ರ
ನವದೆಹಲಿಯಲ್ಲಿ ಶುಕ್ರವಾರ ನಡೆದ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಕೇಂದ್ರೀಯ ಮಂಡಳಿ ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ನಮೋ ನಾರಾಯಣ ಮೀನಾ, ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಮತ್ತಿತರರು ಭಾಗವಹಿಸಿದ್ದರು – ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಆಹಾರ ಪದಾರ್ಥಗಳ ಬೆಲೆಗಳು ಸಹಜ ಮಟ್ಟಕ್ಕೆ ಇಳಿದಾಗ ಮಾತ್ರ ಆರ್ಥಿಕ ಸ್ಥಿರತೆ ಮೂಡುತ್ತದೆ. ಈ ನಿಟ್ಟಿನಲ್ಲಿ ಹಣ­ದುಬ್ಬರವನ್ನು ಹಿತಕರ ಮಟ್ಟಕ್ಕೆ ತಗ್ಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಸಂಸತ್ತು ನಿರ್ದಿಷ್ಟ ಗುರಿ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಆರ್ಥಿಕತೆ ಚೇತರಿಕೆ ಕಂಡಿದೆ. ಆದರೆ, ಆಹಾರ ಪದಾರ್ಥಗಳ ಬೆಲೆಯಲ್ಲಿ ಇನ್ನೂ ಸ್ಥಿರತೆ ಮೂಡ­ಬೇಕಿದೆ. ಈ ನಿಟ್ಟಿ ನಲ್ಲಿ ಸಂಸತ್ತು ‘ಆರ್‌ಬಿಐ’ಗೆ ನಿರ್ದಿಷ್ಟ ಗುರಿ ನೀಡಲಿದೆ. ಈ ಗುರಿ ತಲುಪುವ ಮಾರ್ಗವನ್ನು ಮತ್ತು ಅನು­ಸ­ರಿಸಬೇಕಾದ ಕ್ರಮವನ್ನು ‘ಆರ್‌­ಬಿಐ’ಯೇ ನಿರ್ಧರಿಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶುಕ್ರವಾರ ಇಲ್ಲಿ ಸಂಪ್ರದಾಯದಂತೆ, ಅವರು ಬಜೆಟ್‌ ಕುರಿತಂತೆ ‘ಆರ್‌ಬಿಐ’ ನಿರ್ದೇಶಕ ಮಂಡಳಿ ಸಭೆಯಲ್ಲಿ ಮಾತನಾಡಿದರು.
ವಿತ್ತೀಯ ಕೊರತೆ­ 2013–14ರಲ್ಲಿ ‘ಜಿಡಿಪಿ’­ಯ ಶೇ 4.6ಕ್ಕೆ ಇಳಿಯಲಿದೆ ಮತ್ತು  ಚಾಲ್ತಿ ಖಾತೆ ಕೊರತೆ (ಸಿಎಡಿ) 4000 ಕೋಟಿ ಡಾಲರ್‌ಗಿಂತ (ರೂ.2.48 ಲಕ್ಷ ಕೋಟಿ) ಕಡಿಮೆ ಇರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣನೀಯವಾಗಿ ತಗ್ಗಿರುವುದರಿಂದ ಭಾರಿ ವಿಶ್ವಾಸದಲ್ಲಿರುವ ಚಿದಂಬರಂ, ದೇಶದ ಅರ್ಥ ವ್ಯವಸ್ಥೆ 18 ತಿಂಗಳ ಹಿಂದಿಗಿಂತಲೂ ಈಗ ಹೆಚ್ಚು ಸ್ಥಿರವಾ­ಗಿದೆ. ಡಾಲರ್‌ ವಿರುದ್ಧ ರೂಪಾಯಿ ಮೌಲ್ಯವರ್ಧನೆ ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆ­ದಾರರ (ಎಫ್‌ ಐಐ) ಚಟವಟಿಕೆ ಹೆಚ್ಚಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯೂ (ಎಫ್‌ಡಿಐ) ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕ್‌ ಪರ­ವಾನಗಿ
ಸಭೆಯಲ್ಲಿ ಭಾಗವಹಿಸಿದ್ದ ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌, ನೀತಿ ಸಂಹಿತೆ ಜಾರಿಯಲ್ಲಿರು­ವುದರಿಂದ, ಔಪಚಾರಿಕವಾಗಿ ಚುನಾ­ವಣಾ ಆಯೋಗದಿಂದ ಅನುಮತಿ ಪಡೆದು ಕೆಲವೇ ವಾರಗಳಲ್ಲಿ ಹೊಸ ಬ್ಯಾಂಕ್‌ಗಳ ಸ್ಥಾಪನೆಗೆ ಪರ­ವಾನಗಿ ನೀಡಲಾಗುವುದು ಎಂದರು.

‘ಆರ್‌ಬಿಐ’ ನೇಮಿಸಿರುವ ಉರ್ಜಿತ್‌ ಪಟೇಲ್‌ ನೇತೃತ್ವದ ತಜ್ಞರ ಸಮಿತಿ 2015ರ ಜನವರಿ ವೇಳೆಗೆ ಚಿಲ್ಲರೆ  ಹಣದುಬ್ಬರ ದರವನ್ನು ಶೇ 8ಕ್ಕೆ ಮತ್ತು 2016ರ ಜನವರಿ ವೇಳೆಗೆ ಶೇ 6ಕ್ಕೆ ತಗ್ಗಿಸ ಬೇಕೆಂದು ಶಿಫಾರಸು ಮಾಡಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಜನವರಿಯಲ್ಲಿ ಶೇ 8.79ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.