ADVERTISEMENT

ಹಣದುಬ್ಬರ ವಾರ್ಷಿಕ ಗರಿಷ್ಠ ಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಹಣದುಬ್ಬರ ವಾರ್ಷಿಕ ಗರಿಷ್ಠ ಮಟ್ಟಕ್ಕೆ
ಹಣದುಬ್ಬರ ವಾರ್ಷಿಕ ಗರಿಷ್ಠ ಮಟ್ಟಕ್ಕೆ   

`ಆರ್‌ಬಿಐ~ ಹಣಕಾಸು ನೀತಿ ಮೇಲೆ ಪರಿಣಾಮ

ನವದೆಹಲಿ(ಪಿಟಿಐ): ಡೀಸೆಲ್, ಗೋಧಿ ಮತ್ತು ಬೇಳೆಕಾಳು ಬೆಲೆ ಏರಿಕೆಯಿಂದ ಸಗಟು ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ದರ ಸೆಪ್ಟೆಂಬರ್‌ನಲ್ಲಿ ಶೇ 7.81ಕ್ಕೆ ಏರಿಕೆ ಆಗಿದ್ದು, ಕಳೆದ 10 ತಿಂಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ.

ಹಣದುಬ್ಬರ ಹೆಚ್ಚಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಅ. 30ರಂದು ಪ್ರಕಟಿಸಲಿರುವ 2ನೇ ತ್ರೈಮಾಸಿಕದ `ಹಣಕಾಸು ನೀತಿ ಪರಾಮರ್ಶೆ~ಯಲ್ಲಿ ಅಲ್ಪಾವಧಿ ಬಡ್ಡಿ  ದರ ತಗ್ಗಿಸುವ ಸಾಧ್ಯತೆ ಕಡಿಮೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಆಗಸ್ಟ್‌ನಲ್ಲಿ `ಡಬ್ಲ್ಯಪಿಐ~ ಶೇ 7.55ರಷ್ಟಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 10ರಷ್ಟಿತ್ತು.
ಆಹಾರ ಧಾನ್ಯಗಳಲ್ಲಿ ಮುಖ್ಯವಾಗಿ ಗೋಧಿ ಶೇ 18.63 ಮತ್ತು ಬೇಳೆಕಾಳು ಶೇ 14.18ರಷ್ಟು ತುಟ್ಟಿಯಾಗಿವೆ.

ಸರ್ಕಾರ ಸೆ. 13ರಿಂದ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ್ಙ5ರಷ್ಟು ಹೆಚ್ಚಿಸಿತು. ಇದರಿಂದ ಡೀಸೆಲ್‌ನ  ಹಣದುಬ್ಬರ ಶೇ 8.94ರಷ್ಟು ಹೆಚ್ಚಿದೆ. ಆಗಸ್ಟ್‌ನಲ್ಲಿ ಶೇ 8.32ರಷ್ಟಿದ್ದ ತೈಲ ಮತ್ತು ಇಂಧನ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 11.88ರಷ್ಟಾಗಿದೆ. ಡೀಸೆಲ್ ಹೊರತುಪಡಿಸಿದರೆ ವೈಮಾನಿಕ ಇಂಧನ ಮತ್ತು ಸೀಮೆಎಣ್ಣೆ  ತುಟ್ಟಿಯಾಗಿವೆ.

ತುಸು ಸಮಾಧಾನದ ಸಂಗತಿ ಎಂದರೆ, ಆಗಸ್ಟ್‌ನಲ್ಲಿ ಶೇ 9.14ರಷ್ಟಿದ್ದ ಆಹಾರ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 7.86 ಕ್ಕೆ ತಗ್ಗಿದೆ. ಆದರೂ, ಆಲೂಗೆಡ್ಡೆ ಮತ್ತು ಅಕ್ಕಿ ಧಾರಣೆ ಕ್ರಮವಾಗಿ ಶೇ 52.20 ಮತ್ತು ಶೇ 12.41ರಷ್ಟು ಏರಿಕೆ ಕಂಡಿದೆ. `ಡಬ್ಲ್ಯುಪಿಐ~ಗೆ ಆಹಾರ ಹಣದುಬ್ಬರದ ಕೊಡುಗೆ ಶೇ 14.3ರಷ್ಟಿದೆ. ಹತ್ತಿ ಉಡುಪು, ಕಾಗದ, ರಬ್ಬರ್ ಮತ್ತು ಪ್ಲಾಸ್ಟಿಕ್ ಸರಕುಗಳ ದರ ಸರಾಸರಿ ಶೇ 6ರಷ್ಟು ಏರಿಕೆಯಾಗಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.