ADVERTISEMENT

ಹಾದಿ ತಪ್ಪಿದ ಸಂವೇದಿ ಸೂಚ್ಯಂಕ

ಷೇರುಪೇಟೆ ಆಶಾವಾದಕ್ಕೆ ತಣ್ಣೀರೆರಚಿದ ರಿಸರ್ವ್‌ ಬ್ಯಾಂಕ್‌ ನಿರ್ಧಾರ

ಪಿಟಿಐ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಹಾದಿ ತಪ್ಪಿದ ಸಂವೇದಿ ಸೂಚ್ಯಂಕ
ಹಾದಿ ತಪ್ಪಿದ ಸಂವೇದಿ ಸೂಚ್ಯಂಕ   

ಮುಂಬೈ: ನಾಲ್ಕು ವಾರಗಳಿಂದ ಸ್ಥಿರವಾಗಿದ್ದ ದೇಶದ ಷೇರುಪೇಟೆಗಳಲ್ಲಿ ಈ ವಾರ ಚಂಚಲ ವಹಿವಾಟು ನಡೆದು, ಸೂಚ್ಯಂಕಗಳು ಹಾದಿ ತಪ್ಪಿದವು.

ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸೋಮವಾರ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯ ಗೊಳಿಸಿದ್ದವು. ನಂತರ ಜಾಗತಿಕ ಮತ್ತು ದೇಶಿ ಮಟ್ಟದಲ್ಲಿ ನಡೆದ ವಿದ್ಯಮಾನಗಳ ಸೂಚ್ಯಂಕಗಳನ್ನು ಏರಿಳಿತ ಕಾಣುವಂತೆ ಮಾಡಿದವು.

ದೇಶದಲ್ಲಿ ಮೂಲಸೌಕರ್ಯ, ಕೈಗಾರಿಕಾ ವಲಯದ ಮೇ ತಿಂಗಳ ಪ್ರಗತಿ ಇಳಿಕೆ ಕಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಸಹ ಈ ಬಾರಿ ಬಡ್ಡಿದರ ಕಡಿತ ಆಗುವ ನಿರೀಕ್ಷೆ ವ್ಯಕ್ತಪಡಿಸಿತ್ತು. ಆದರೆ, ಹಣದುಬ್ಬರ ಏರಿಕೆಯ ಕಾರಣ ನೀಡಿ, ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದು, ಬಡ್ಡಿದರ ಇಳಿಕೆ ಅಗಬಹುದು ಎನ್ನುವ ಹೂಡಿಕೆದಾರರ ಆಶಾವಾದಕ್ಕೆ ತಣ್ಣೀರೆರಚಿದೆ.

ADVERTISEMENT

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ 11 ಅಂಶ ಇಳಿಕೆ ಕಂಡು, 31,430 ಅಂಶಗಳ ಹೊಸ ಮಟ್ಟವನ್ನು ತಲುಪಿ 31,262 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 15 ಅಂಶ ಏರಿಕೆ ಕಂಡು ಗರಿಷ್ಠ ಮಟ್ಟವಾದ 9,668 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ವಹಿವಾಟು ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 9,700ರ ಮಟ್ಟವನ್ನು ತಲುಪಿತ್ತು. ನಂತರ ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಗಿ ಸೂಚ್ಯಂಕಗಳು ಮತ್ತೆ ಇಳಿಮುಖ ಹಾದಿಗೆ ಮರಳುವಂತಾಯಿತು.

‘ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಭಾರತದ ಷೇರುಪೇಟೆಗಳಲ್ಲಿ ಈ ವಾರ ಬಹಳ ಸುರಕ್ಷಿತವಾಗಿ ವಹಿವಾಟು ನಡೆಯಿತು’ ಎಂದು ತಜ್ಞರು ಹೇಳಿದ್ದಾರೆ.

ಶುಕ್ರವಾರ ಹೊರಬಿದ್ದ ಬ್ರಿಟನ್‌ ಚುನಾವಣಾ ಫಲಿತಾಂಶ  ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಮೂಡಿಸಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಇಳಿಮುಖ ಹಾದಿಯಲ್ಲಿದ್ದ ಸೂಚ್ಯಂಕಗಳನ್ನು ಅಲ್ಪ ಏರಿಕೆ ಕಾಣುವಂತೆ ಮಾಡಿತು.

ವಾರದ ವಹಿವಾಟಿನಲ್ಲಿ ಮಾರುತಿ ಶೇ 4.73, ಸಿಪ್ಲಾ ಶೇ 4.04, ಡಾ. ರೆಡ್ಡೀಸ್‌ ಶೇ 3.03, ಟಾಟಾ ಸ್ಟೀಲ್‌ ಶೇ 2.99, ಎಚ್‌ಡಿಎಫ್‌ಸಿ ಶೇ 2.16, ಸನ್‌ಫಾರ್ಮಾ ಶೇ 1.94 ರಷ್ಟು ಗರಿಷ್ಠ ಏರಿಕೆ ಕಂಡುಕೊಂಡಿವೆ.

ವಲಯವಾರು ಐಪಿಒ, ಗ್ರಾಹಕ ಬಳಕೆ ವಸ್ತುಗಳು, ಲೋಹ, ಆರೋಗ್ಯ ಸೇವೆ, ರಿಯಲ್ ಎಸ್ಟೇಟ್‌ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳು ಉತ್ತಮ ಗಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.