ADVERTISEMENT

ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 19:30 IST
Last Updated 5 ಸೆಪ್ಟೆಂಬರ್ 2017, 19:30 IST
ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳು
ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳು   

–ಹಿಮಾನ್ಷು ಶ್ರೀವಾಸ್ತವ

*

ಮನುಷ್ಯ ತಪ್ಪುಗಳನ್ನು ಮಾಡುವುದು ಸಹಜ. ತಪ್ಪುಗಳ ಮೂಲಕವೇ ಆತ ಅನೇಕ ವಿಚಾರಗಳನ್ನು ಕಲಿಯುತ್ತಾನೆ ಎಂಬುದೂ ಅಷ್ಟೇ ನಿಜ. ಈ ಮಾತು ಹಣ ಹೂಡಿಕೆ ವಿಚಾರಕ್ಕೂ ಅನ್ವಯಿಸುತ್ತದೆ. ಹೂಡಿಕೆ ವಿಚಾರದಲ್ಲಂತೂ ತಪ್ಪು ಮಾಡದೇ ಇರಲು ಸಾಧ್ಯವೇ ಇಲ್ಲ. ಆದರೆ, ಸ್ವಲ್ಪ ಎಚ್ಚರ ವಹಿಸಿದರೆ ತಮ್ಮ ಹೂಡಿಕೆಗೆ ಮತ್ತು ಸಂಪತ್ತಿನ ಸೃಷ್ಟಿಗೆ ಎರವಾಗಬಲ್ಲ, ಸಾಮಾನ್ಯ ತಪ್ಪುಗಳನ್ನು ಮಾಡದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬಹುದು.

ADVERTISEMENT

ಹೂಡಿಕೆದಾರರು ಪದೇ ಪದೇ ಮಾಡುವ ಸಾಮಾನ್ಯ ತಪ್ಪುಗಳು ಯಾವುವು ಎಂದು ತಿಳಿಯುವುದು ಹೇಗೆ? ಅದೃಷ್ಟವಶಾತ್‌ ಈಗಾಗಲೇ ಅಂತಹ ತಪ್ಪುಗಳನ್ನು ಗುರುತಿಸಿ ದಾಖಲಿಸಲಾಗಿದೆ. ದುರದೃಷ್ಟವೆಂದರೆ ಆ ತಪ್ಪುಗಳೂ ಸಹ ಪುನರಾವರ್ತನೆ ಆಗುತ್ತಿವೆ. ಹಾಗಿದ್ದರೆ ಹೂಡಿಕೆದಾರರು ಮಾಡುವ (ಮಾಡಲೇ ಬಾರದಾದ) ಸಾಮಾನ್ಯ ತಪ್ಪುಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಯೋಜನಾರಹಿತ ಹೂಡಿಕೆ

ಹೂಡಿಕೆಗೆ ಭದ್ರ ಅಡಿಪಾಯವೆಂದರೆ ಸರಿಯಾದ ಯೋಜನೆ ರೂಪಿಸುವುದು. ಆದರೆ, ಹೆಚ್ಚಿನ ಹೂಡಿಕೆದಾರರು  ಇಲ್ಲೇ ಎಡವುತ್ತಾರೆ. ಹೂಡಿಕೆಯು ಕೆಲವು ಶಿಸ್ತುಗಳನ್ನೂ ಬಯಸುತ್ತದೆ. ಅದಕ್ಕೆ ಸರಿಯಾದ ಯೋಜನೆ ರೂಪಿಸುವುದು ಅಗತ್ಯ. ಒಂದು ಗುರಿ ನಿರ್ಧರಿಸುವುದು, ತಮ್ಮ ನಷ್ಟ ಧಾರಣೆಯ ಶಕ್ತಿಯನ್ನು ತಿಳಿದುಕೊಳ್ಳುವುದು, ಹೂಡಿಕೆಯ ಸರಿಯಾದ ವ್ಯವಸ್ಥೆಯನ್ನು ರೂಪಿಸಿ, ಮುಂದೆ ಅದನ್ನು ಜಾರಿಮಾಡುವುದು– ಇವೆಲ್ಲವೂ ಹೂಡಿಕೆಯ ಶಿಸ್ತು ಮತ್ತು ಕ್ರಮಬದ್ಧತೆಯ ನಿಯಮಗಳಾಗಿವೆ.

ಯಾವುದಾದರೂ ಒಂದು ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ ನಂತರವೇ ಯೋಜನೆ ರೂಪಿಸಬೇಕು ಎಂದು ಅನೇಕರು ಭಾವಿಸಿದ್ದಾರೆ. ತಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಇದ್ದಾಗ ಮಾತ್ರ ಯೋಜನಾಬದ್ಧ ಹೂಡಿಕೆ ಮಾಡಬೇಕು ಎಂಬುದು ಅನೇಕ ಹೂಡಿಕೆದಾರರ ಭಾವನೆ. ಇದು ತಪ್ಪು. ವಾಸ್ತವದಲ್ಲಿ ಹಣಕಾಸು ನಿರ್ವಹಣೆಯಲ್ಲಿ ಹೂಡಿಕೆ ಎಂಬುದು ಕೊನೆಯ ಹಂತ. ಹೂಡಿಕೆಗೂ ಮುನ್ನ ಸರಿಯಾಗಿ ಯೋಚಿಸದಿದ್ದರೆ ವಿಪರೀತ ಪರಿಣಾಮಗಳಾಗಬಹುದು. ದಿಕ್ಕು ದೆಸೆಯಿಲ್ಲದ ಹೂಡಿಕೆಯಿಂದಾಗಿ ನಿರೀಕ್ಷಿತ ಆದಾಯ ಬಾರದೆ ನಿರಾಸೆಯಾಗಬಹುದು. ಆದ್ದರಿಂದ ಹೂಡಿಕೆಯೇ ಗುರಿ ಅಲ್ಲ. ಅದು ಗುರಿಯೊಂದನ್ನು ಸಾಧಿಸುವ ಮಾರ್ಗ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಷೇರು ಮಾರುಕಟ್ಟೆ ಆಧಾರದಲ್ಲಿ ನಿರ್ಣಯ

ದೇಶಿ ಷೇರು ಮಾರುಕಟ್ಟೆಯ ಇಂದಿನ ಸ್ಥಿತಿಯನ್ನು ಗಮನಿಸಿದರೆ ಷೇರು ಮಾರುಕಟ್ಟೆ ಆಧಾರದ ಹೂಡಿಕೆ ಸೂಕ್ತ ಎನಿಸಬಹುದು. ದೀರ್ಘ ಅವಧಿಯಿಂದ ನಮ್ಮ ಷೇರು ಮಾರುಕಟ್ಟೆ ಏರಿಕೆಯನ್ನೇ ಕಾಣುತ್ತಿದೆ. ಆದರೆ, ಇದು ಹೂಡಿಕೆಗೆ ಸಕಾಲವೇ? ಅಥವಾ ಇನ್ನಷ್ಟು ಕಾಲ ಕಾಯುವುದು ಸೂಕ್ತವೇ ಎಂಬ ಗೊಂದಲವೂ ಹೂಡಿಕೆದಾರರಲ್ಲಿ ಸೃಷ್ಟಿಯಾಗಿದೆ.

ಹೂಡಿಕೆ ಮಾಡಲು ಯೋಚಿಸುತ್ತಿರುವವರು ಷೇರು ಮಾರುಕಟ್ಟೆ ಸ್ವಲ್ಪ ಕೆಳಗಿಳಿಯಲಿ ಎಂದು ಕಾಯುತ್ತಿದ್ದರೆ, ಈಗಾಗಲೇ ಹೂಡಿಕೆ ಮಾಡಿರುವವರು ತಮ್ಮ ಹಣವನ್ನು ವಾಪಸ್‌ ಪಡೆಯಲು ಮಾರುಕಟ್ಟೆ ಇನ್ನಷ್ಟು ಏರಿಕೆ ಆಗಲಿ ಎಂದು ಕಾಯುತ್ತಿದ್ದಾರೆ. ಆದರೆ, ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಚಲಿಸಲಿದೆ ಎಂಬುದನ್ನು ಯಾರೂ ಊಹಿಸಲಾಗದು.

ಮಾರುಕಟ್ಟೆ ಏರಿಳಿತದ ಆಧಾರದಲ್ಲಿ ಹೂಡಿಕೆ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಮಾರುಕಟ್ಟೆಯ ಈ ಅನಿಶ್ಚಿತತೆಯೂ ಕಾರಣ. ಹಿಂದುಮುಂದು ನೋಡದೆ ಹೂಡಿಕೆ ಮಾಡಿ, ಮಾರುಕಟ್ಟೆ ಮೇಲೆ ಸತತ ನಿಗಾ ಇಟ್ಟು ಸರಿಯಾದ ಸಮಯದಲ್ಲಿ ಲಾಭ ಮಾಡಿಕೊಳ್ಳುವುದು ಅಸಾಧ್ಯ. ಆದ್ದರಿಂದ ಇಂತಹ ಹೂಡಿಕೆಯ ಬದಲು ಹೂಡಿಕೆದಾರರು ಒಂದು ಗುರಿ ನಿರ್ಧರಿಸಿ ಬೇರೆಬೇರೆ ಕಡೆ ಹೂಡಿಕೆ ಮಾಡುವತ್ತ ಗಮನ ಕೊಡಬೇಕು. ಷೇರು ಮಾರುಕಟ್ಟೆ ಹುಟ್ಟಿಸುವ ಆಮಿಷಗಳಿಗೆ ಗುರಿಯಾಗದೆಯೇ ಹೆಚ್ಚು ಲಾಭ ಗಳಿಸಲು ವ್ಯವಸ್ಥಿತ ಹೂಡಿಕೆ ಯೋಜನೆಯು (ಸಿಸ್ಟಮೆಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲ್ಯಾನ್‌–ಎಸ್‌ಐಪಿ) ಒಂದು ಪರಿಣಾಮಕಾರಿ ಉಪಕ್ರಮ. ಇಲ್ಲಿ ಹೂಡಿಕೆಗೆ ಒಂದು ಶಿಸ್ತುಬದ್ಧತೆ ಇರುವುದರ ಜೊತೆಗೆ ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ನಷ್ಟವಾಗುವುದನ್ನು ತಪ್ಪಿಸುತ್ತದೆ.

ಆಕರ್ಷಿಸುವ ‘ಟ್ರೆಂಡ್‌’ಗಳು

ಏನಿದು ಟ್ರೆಂಡ್‌? ಮ್ಯೂಚುವಲ್‌ಫಂಡ್‌ ಉದ್ದಿಮೆ ಕಾಲಕಾಲಕ್ಕೆ ಇಂಥ ಟ್ರೆಂಡ್‌ಗಳನ್ನು ಎದುರಿಸುತ್ತ ಬಂದಿದೆ. ಒಂದು ನಿಗದಿತ ಸಮಯದಲ್ಲಿ ಯಾವುದೋ ಒಂದು ಉದ್ದಿಮೆ ಅಥವಾ ಕ್ಷೇತ್ರ ಮುನ್ನೆಲೆಗೆ ಬಂದು ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಇದರ ಪರಿಣಾಮವಾಗಿ ಈ ಕ್ಷೇತ್ರದ ಉದ್ದಿಮೆಗಳಿಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಹರಿದು ಬರುತ್ತದೆ. ಸ್ವಲ್ಪ ಕಾಲದ ಬಳಿಕ ಅದು ಮತ್ತೆ ಹಿನ್ನಡೆ ಕಾಣುತ್ತದೆ.

ಉದಾಹರಣೆಗೆ ಹೇಳುವುದಾದರೆ 1998–99ರ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳು ಭಾರಿ ಬೇಡಿಕೆ ಕುದುರಿಸಿದವು. ಈ ಸಂದರ್ಭದಲ್ಲಿ ಮ್ಯೂಚುವಲ್‌ ಫಂಡ್‌ ಕಂಪೆನಿಗಳು ತಂತ್ರಜ್ಞಾನ ಕ್ಷೇತ್ರದ ಫಂಡ್‌ಗಳನ್ನು ಆರಂಭಿಸಿದ್ದವು. ಜನರು ಇವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರು. ಅದರಂತೆ 2004–07ರವರೆಗಿನ ಅವಧಿಯಲ್ಲಿ ಮೂಲಸೌಲಭ್ಯ ಕ್ಷೇತ್ರ ಭಾರಿ ನಿರೀಕ್ಷೆ ಹುಟ್ಟಿಸಿ ಹೂಡಿಕೆಯನ್ನು ಆಕರ್ಷಿಸಿತ್ತು. ಇಂಥ ‘ಟ್ರೆಂಡ್‌’ಗಳ ಸಮಸ್ಯೆ ಎಂದರೆ, ಇವುಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳಾಗುತ್ತವೆ. ಆದರೆ, ನಿಜವಾಗಿಯೂ ಇವು ಹೂಡಿಕೆದಾರರಿಗೆ ಸೂಕ್ತವಾದವುಗಳೇ ಎಂಬ ಬಗ್ಗೆ ಚಿಂತನೆ ನಡೆಯುವುದಿಲ್ಲ. ಒಂದು ಕಾಲಮಿತಿಯಲ್ಲಿ ಮುನ್ನೆಲೆಗೆ ಬರುವ ಯಾವುದೇ ಕ್ಷೇತ್ರವಿರಲಿ, ಅದರಲ್ಲಿ ಯಾವಾಗ ಹೂಡಿಕೆ ಮಾಡಬೇಕು ಮತ್ತು ಯಾವಾಗ ಹೊರಗೆ ಬರಬೇಕು ಎಂಬ ಬಗ್ಗೆ ಸರಿಯಾದ ಜ್ಞಾನವಿಲ್ಲದಿದ್ದರೆ, ಹೂಡಿಕೆದಾರರಿಗೆ ನಿರೀಕ್ಷಿತ ಲಾಭ ಬರಲು ಸಾಧ್ಯವಿಲ್ಲ. ದೊಡ್ಡ ಆದಾಯ ತರುವ ಮತ್ತು ಅಷ್ಟೇ ಅಪಾಯವೂ ಇರುವ ಮಧ್ಯಮ ಮತ್ತು ಸಣ್ಣ ನಿಧಿಗಳಿಗೂ ಈ ಮಾತು ಅನ್ವಯಿಸುತ್ತದೆ.

‘ಟ್ರೆಂಡ್‌’ ಫಂಡ್‌ಗಳಲ್ಲಿ ಹಣ ಹೂಡುವವರಿಗೆ ಆ ಸಂಸ್ಥೆ ಅಥವಾ ಕ್ಷೇತ್ರದ ಉತ್ಪನ್ನಗಳ ಬಗ್ಗೆ ತಿಳಿವಳಿಕೆ ಇರುವುದು ಕಡಿಮೆ. ಅನೇಕ ಸಂದರ್ಭಗಳಲ್ಲಿ ಇಂಥ ಟ್ರೆಂಡ್‌ಗಳು ಆಕರ್ಷಕ ಎನಿಸಬಹುದು. ಆದರೆ, ಅವು ಭಾರಿ ಅಪಾಯವನ್ನೂ ತಂದೊಡ್ಡಬಲ್ಲವು. ಆದ್ದರಿಂದ ಇಂತಹ ಹೂಡಿಕೆಯಿಂದ ದೂರ ಉಳಿಯುವುದು ಕ್ಷೇಮ.

ಹಣ ಹೂಡಿ ಸುಮ್ಮನಿರುವುದು

ಮೊದಲೇ ಹೇಳಿರುವಂತೆ ಹೂಡಿಕೆ ಎಂದರೆ ಸತತವಾಗಿ ನಿಗಾ ಇಡಬೇಕಾದ ಕ್ರಿಯೆ. ಒಮ್ಮೆ ಹೂಡಿಕೆ ಮಾಡಿ ಮರೆಯುವುದಲ್ಲ. ಕಾಲಕಾಲಕ್ಕೆ ತಮ್ಮ ಹೂಡಿಕೆಯ ವಿಮರ್ಶೆ ನಡೆಸುವುದು ಅಗತ್ಯ. ನಿಗದಿತ ಸಮಯದಲ್ಲಿ ಹೂಡಿಕೆಯ ವಿಮರ್ಶೆ ಮಾಡುತ್ತಿದ್ದರೆ (ಅಗತ್ಯವಿದ್ದರೆ) ಹೂಡಿಕೆಯ ಪಥ ಬದಲಿಸುವ ಬಗ್ಗೆ ಚಿಂತಿಸಲೂ ಅವಕಾಶವಾಗಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ.

ಯಾವ ಹೂಡಿಕೆ ದರ್ಬಲವಾಗಿದೆ, ಯಾವ ಹೂಡಿಕೆಯನ್ನು ವಾಪಸ್‌ ಪಡೆಯಬೇಕು, ಬೇರೆ ಎಲ್ಲಿ ಹೂಡಿಕೆ ಮಾಡಬಹುದು, ಫಂಡ್‌ ಬದಲಾವಣೆ ಮಾಡಬೇಕೇ ಮುಂತಾದ ನಿರ್ಧಾರ ಕೈಗೊಳ್ಳಬೇಕಾದರೆ ಕಾಲ ಕಾಲಕ್ಕೆ ಹೂಡಿಕೆಯ ವಿಮರ್ಶೆ ನಡೆಸುವುದು ಅಗತ್ಯ. ಈ ವಿಮರ್ಶಾ ಪ್ರಕ್ರಿಯೆಯಲ್ಲಿ ಒಬ್ಬ ಒಳ್ಳೆಯ ಹೂಡಿಕೆ ಸಲಹೆಗಾರರ ಸಹಾಯ ಪಡೆದರೆ ಇನ್ನೂ ಉತ್ತಮ.

(ಮಾರ್ನಿಂಗಸ್ಟರ್‌ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರ್‌ ಪ್ರೈ.ಲಿ. ಸಂಸ್ಥೆಯ ವಿಶ್ಲೇಷಣಾ ವ್ಯವಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.