ADVERTISEMENT

ಹೂಡಿಕೆ ವಂಚನೆ: ತನಿಖೆಗೆ ಕೈ ಜೋಡಿಸಿದ `ಸೆಬಿ'

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ಆಕರ್ಷಕ ಕೊಡುಗೆಗಳು, ಆಮಿಷಗಳ ಮೂಲಕ ಹೂಡಿಕೆದಾರರನ್ನು ವಂಚಿಸುತ್ತಿರುವ ಅಕ್ರಮ ಹಣಕಾಸು ಮತ್ತು ಲೇವಾದೇವಿ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಪೊಲೀಸ್ ಇಲಾಖೆ, ಆರ್‌ಬಿಐ ಜತೆ ಕೈಜೋಡಿಸುವುದಾಗಿ `ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ'(ಸೆಬಿ) ಹೇಳಿದೆ.

ಒಂದೇ ವರ್ಷದಲ್ಲಿ ಹಣ ದ್ವಿಗುಣಗೊಳಿಸಲಾಗುವುದು, ಎರಡು ಪಟ್ಟು ಲಾಭಾಂಶ ನೀಡಲಾಗುವುದು ಮೊದಲಾದ ಆಮಿಷಗಳ ಮೂಲಕ ಬಡವರು, ಕೂಲಿ ಕಾರ್ಮಿಕರಿಂದ ಹಣ ಪಡೆದು ವಂಚಿಸುತ್ತಿರುವ ಹಣಕಾಸು ಸಂಸ್ಥೆಗಳ ಮೇಲೆ `ಸೆಬಿ' ತೀವ್ರ ನಿಗಾ ವಹಿಸಲಿದೆ. ಇಂತಹ ಅಕ್ರಮ ವಹಿವಾಟಿನಲ್ಲಿ ದೊಡ್ಡ ಮೊತ್ತವೇ ಸೇರಿಕೊಂಡಿದೆ.  `ಗಂಭೀರ ಸ್ವರೂಪದ ವಂಚನೆಗಳ ತನಿಖಾ ಸಂಸ್ಥೆ' (ಎಸ್‌ಎಫ್‌ಐಒ) ಜತೆಗೂಡಿ ಇಂತಹ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು `ಸೆಬಿ' ಅಧ್ಯಕ್ಷ ಯು.ಕೆ.ಸಿನ್ಹಾ ಹೇಳಿದ್ದಾರೆ.

ಕೆಲವು ಲೇವಾದೇವಿ ಸಂಸ್ಥೆಗಳು ಆಲೂಗಡ್ಡೆ ಬೆಳೆಗೆ, ಎಮು, ಕುರಿ ಸಾಕುವುದಕ್ಕೆ ಸಹಾಯದ ಆಮಿಷ ಸೇರಿದಂತೆ ವಿಭಿನ್ನ ಕೊಡುಗೆಗಳ ಮೂಲಕ ಜನರನ್ನು ವಂಚಿಸುತ್ತಿವೆ. ಪಶ್ಚಿಮ ಬಂಗಾಳ, ದೆಹಲಿ, ರಾಜಸ್ತಾನ, ಹರಿಯಾಣ, ಅಸ್ಸಾಂನಲ್ಲಿ ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಳು ಜಾರಿಗೆ ಬರಲಿವೆ ಎಂದು ಹೇಳಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿವೆ. ಹಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಅತಿ ಸಣ್ಣ ಹೂಡಿಕೆದಾರರು. ಹಾಗಾಗಿ ಇಂಥ ವಂಚನೆ ವಿರುದ್ಧ ಪೊಲೀಸರಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ ಎಂದೂ `ಸೆಬಿ' ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT