ADVERTISEMENT

ಹೂವು ಬಿಡದ ತಳಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಕೆರೂರ (ಚಿಕ್ಕೋಡಿ): ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಬ್ಬು ಸಂಶೋಧನಾ ಕೇಂದ್ರ `ಹೂವು ಬಿಡದ~ ಎರಡು ಕಬ್ಬಿನ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಈ ವರ್ಷಾಂತ್ಯದೊಳಗೆ ರೈತರಿಗೆ ವಿತರಿಸಲಿದೆ. 

ಸದ್ಯ ಲಭ್ಯವಿರುವ ಎಲ್ಲ ಕಬ್ಬಿನ ತಳಿಗಳು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುತ್ತವೆ. ಹೂವು ಬಿಡುವುದರಿಂದ ರೈತರಿಗೆ ಸಿಗುವ ಮೇವಿನ ಪ್ರಮಾಣ ಕಡಿಮೆಯಾಗಿ ಕಬ್ಬಿನ ಕಟಾವು ಮಾಡಲು ಖರ್ಚು ಸಹ ಹೆಚ್ಚುತ್ತದೆ. ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿ ಪ್ರಮಾಣವೂ ಕಡಿಮೆಯಾಗುತ್ತದೆ.ಕಬ್ಬಿನ ಕುಳೆ ಮೊಳಕೆ ಒಡೆಯುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಹೀಗಾಗಿ `ಹೂವು ಬಿಡುವುದು~ ಕಬ್ಬಿನ ಬೆಳೆಗಾರರ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ  `ಕೃಷಿ ಮೇಳ~ದಲ್ಲಿ ಸಂಕೇಶ್ವರದಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಬ್ಬು ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಕಬ್ಬು ತಳಿ ವರ್ಧಕರಾದ ಡಾ. ಸಂಜಯ ಪಾಟೀಲ ಅವರು ಹೊಸದಾಗಿ ಅಭಿವೃದ್ಧಿಪಡಿಸಿರುವ ಈ `ಹೂವು ನಿರೋಧಕ~ ತಳಿಗಳ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಕಬ್ಬು ಹೂವು ಬಿಡುತ್ತಿರುವುದರಿಂದ ಕಟಾವು ವಿಳಂಬವಾಗುತ್ತಿದೆ. ಜೊತೆಗೆ ಶೇ15ರಿಂದ ಶೇ25ರಷ್ಟು ಕಬ್ಬು ಹಾಗೂ ಸಕ್ಕರೆಯ ಇಳುವರಿಯೂ ಕಡಿಮೆಯಾಗುತ್ತಿದೆ. ಇದೊಂದು ರಾಷ್ಟ್ರೀಯ ಹಾನಿ~ಎನ್ನುತ್ತಾರೆ ಡಾ. ಸಂಜಯ ಪಾಟೀಲ. ಇದನ್ನು ತಪ್ಪಿಸಲು ಕಳೆದ ಆರು ವರ್ಷಗಳಿಂದ `ಹೂವು ನಿರೋಧಕ~ ತಳಿ ಅಭಿವೃದ್ಧಿ ಪಡಿಸುತ್ತ್ದ್ದಿದು, ಹೂವು ಬಿಡದ ಗಂಡು ಹಾಗೂ ಹೆಣ್ಣಿನ ಕೋಶವನ್ನು ಆಯ್ಕೆ ಮಾಡಿ, ಸಂಯೋಜಿಸಿ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ.

`ಎಸ್‌ಎನ್‌ಕೆ 07337~ ಮತ್ತು `ಎಸ್‌ಎನ್‌ಕೆ 07680~ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ತಳಿಗಳನ್ನು ಯಾವುದೇ ಕಾಲದಲ್ಲಿ ಬೇಕಾದರೂ ನಾಟಿ ಮಾಡಬಹುದು. 9 ತಿಂಗಳಿಗೇ ಕಟಾವಿಗೆ ಬರುತ್ತದೆ. ಇದರಿಂದ ಹೆಚ್ಚುವರಿಯಾಗಿ ಶೇ11 ರಿಂದ ಶೇ13ರಷ್ಟು ಸಕ್ಕರೆ ಮತ್ತು ಶೇ 14ರಷ್ಟು ಬೆಲ್ಲದ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದರು.

ಈ  ತಳಿ ಹೂವು ಬಿಡದಿರುವುದರಿಂದ ಸುಮಾರು 20 ತಿಂಗಳವರೆಗೂ ಕಟಾವು ಮಾಡದೇ ಬೆಲ್ಲಕ್ಕೆ ಸೂಕ್ತ ಬೆಲೆ ಬರುವವರೆಗೆ ರೈತರು ಕಾಯಲು ಅವಕಾಶವಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ `ಹೂವು ಬಿಡದ~ ಕಬ್ಬಿನ ತಳಿಯನ್ನು ನಾವು ಅಭಿವೃದ್ಧಿ ಪಡಿಸುತ್ತಿದ್ದೇವೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಈ ಎರಡು ತಳಿಗಳ ಬೀಜಗಳನ್ನು ರೈತರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ನೀಡಲಿದ್ದೇವೆ ಎಂದು ಡಾ. ಸಂಜಯ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.