ADVERTISEMENT

ಹೊಣೆಗಾರಿಕೆ ಪೂರ್ಣ: ಸಚಿನ್‌

ಫೇಸ್‌ಬುಕ್‌ನಲ್ಲಿ ವಿದಾಯದ ಭಾವುಕ ಹೇಳಿಕೆ

ಪಿಟಿಐ
Published 10 ಮೇ 2018, 19:35 IST
Last Updated 10 ಮೇ 2018, 19:35 IST
ಬಿನ್ನಿ ಬನ್ಸಲ್‌ ಮತ್ತು ಸಚಿನ್‌ ಬನ್ಸಲ್‌
ಬಿನ್ನಿ ಬನ್ಸಲ್‌ ಮತ್ತು ಸಚಿನ್‌ ಬನ್ಸಲ್‌   

ನವದೆಹಲಿ: ವಾಲ್‌ಮಾರ್ಟ್‌ ಜತೆಗಿನ ಒಪ್ಪಂದದ ಫಲವಾಗಿ ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕ ಸಚಿನ್‌ ಬನ್ಸಲ್‌ ಅವರು ಸಂಸ್ಥೆಯನ್ನು ತೊರೆಯಲಿದ್ದಾರೆ.

‘ದೀರ್ಘ ಸಮಯದವರೆಗೆ ಬಿಡುವು ಪಡೆದುಕೊಂಡು ಬಾಕಿ ಉಳಿದಿರುವ ಕೆಲ ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸಲು ಗಮನ ನೀಡುವೆ. ಇಲ್ಲಿಯವರೆಗೆ ಕ್ರೀಡೆಗಳತ್ತ ಗಮನ ನೀಡಲೂ ಸಾಧ್ಯವಾಗಿರಲಿಲ್ಲ. ಈಗ ಸಿಕ್ಕಿರುವ ಬಿಡುವಿನ ಅವಧಿಯಲ್ಲಿ ಆಟಗಳತ್ತ ಕೊಂಚ ಗಮನ ನೀಡುವೆ. ಈ ದಿನಗಳಲ್ಲಿ ಚಿಣ್ಣರು ಯಾವ ಆಟಗಳನ್ನು ಆಡುತ್ತಾರೆ ಎನ್ನುವುದನ್ನೂ ಗಮನಿಸುವೆ. ನನ್ನ ಕೋಡಿಂಗ್‌ ಕೌಶಲ ಹೆಚ್ಚಿಸಲು ಪ್ರಯತ್ನಿಸುವೆ’ ಎಂದು ಸಚಿನ್‌ ಬನ್ಸಲ್‌ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹೇಳಿಕೊಂಡಿದ್ದಾರೆ.

‘ಸಂಸ್ಥೆಯಲ್ಲಿನ ನನ್ನ ಹೊಣೆಗಾರಿಕೆ ಇಲ್ಲಿಗೆ ಪೂರ್ಣಗೊಳ್ಳುತ್ತಿದೆ. ಹತ್ತು ವರ್ಷಗಳ ನಂತರ ಅಧಿಕಾರವನ್ನು ಹಸ್ತಾಂತರಿಸಿ, ಸಂಸ್ಥೆಯಿಂದ ಹೊರನಡೆಯುತ್ತಿರುವೆ.

ADVERTISEMENT

‘ನೀವೆಲ್ಲ  ಉತ್ಸಾಹದಿಂದಲೇ ಕೆಲಸ ಮಾಡಿ. ಸಂಸ್ಥೆಯ ಹೊರಗೆ ಇದ್ದುಕೊಂಡೆ  ನಿಮ್ಮನ್ನು ಉತ್ತೇಜಿಸುವೆ. ನಿಮಗೆಲ್ಲ ಶುಭ ಕೋರುವೆ. ಉತ್ತಮ ಸಾಧನೆ ಮಾಡಿ’ ಎಂದು ಸಚಿನ್‌ ತಮ್ಮ ವಿದಾಯ ಹೇಳಿಕೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

‘ಇದುವರೆಗಿನ ಪಯಣದಲ್ಲಿ ನಾವು ಅನೇಕ ದೊಡ್ಡ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ’ ಎಂದೂ ಸಚಿನ್‌ ಸ್ಮರಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿನ ತಮ್ಮ ಶೇ 5.5 ಪಾಲನ್ನು ಸಚಿನ್‌ ಅವರು ₹ 6,700 ಕೋಟಿಗೆ ಮಾರಾಟ ಮಾಡಲಿದ್ದಾರೆ.

ಸ್ಟಾರ್ಟ್‌ಅಪ್‌ನ ಜೈ– ವೀರೂ: ಅವರಿಬ್ಬರೂ ದೇಶಿ ಸ್ಟಾರ್ಟ್‌ಅಪ್‌ ಲೋಕದ ‘ಜೈ– ವೀರೂ’ ಎಂದೇ ಖ್ಯಾತರಾಗಿದ್ದರು. ಅವರಲ್ಲೊಬ್ಬರು ಸಂಸ್ಥೆಯಿಂದ ಹೊರ ನಡೆಯುವ ಗಳಿಗೆ ಸಮೀಪಿಸಿದಾಗ ಇನ್ನೊಬ್ಬರಿಗೆ ಸಹಜವಾಗಿಯೇ ತುಂಬ ನೋವಾಗುತ್ತಿದೆ.

‘ಸಂಸ್ಥೆಯಿಂದ ಹೊರ ನಡೆಯುವ ಸಚಿನ್‌ ನಿರ್ಧಾರವು ನನ್ನ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ಸಹ ಸ್ಥಾಪಕ ಬಿನ್ನಿ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲಕ್ಕಿಂತ ಹೆಚ್ಚಾಗಿ ನಮಗೆಲ್ಲರಿಗೂ ಇದೊಂದು ನೋವಿನ ಕ್ಷಣ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ನಾವು ಪರಸ್ಪರ ಬೆಂಬಲಕ್ಕೆ ಇದ್ದೆವು. ಸಚಿನ್‌ ಅವರ ಭವಿಷ್ಯದ ಸಾಹಸಗಳಿಗೆ ಶುಭ ಕೋರುವೆ’ ಎಂದು ಬಿನ್ನಿ ಬನ್ಸಲ್ ಅವರು ಹೇಳಿದ್ದಾರೆ.

ವಾಲ್‌ಮಾರ್ಟ್‌ನಿಂದ 50 ಹೊಸ ಮಳಿಗೆ
ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಸಗಟು ಕ್ಯಾಷ್‌ ಆ್ಯಂಡ್‌ ಕ್ಯಾರಿ ವಹಿವಾಟನ್ನು ವಿಸ್ತರಿಸಲು ಮುಂದಾಗಿರುವ ವಾಲ್‌ಮಾರ್ಟ್‌ 50 ಹೊಸ ಮಳಿಗೆಗಳನ್ನು ತೆರೆಯಲಿದೆ.

‘ಸದ್ಯಕ್ಕೆ 21 ಮಳಿಗೆಗಳು ಇವೆ. 50 ಮಳಿಗೆಗಳನ್ನು ತೆರೆಯುವ ಯೋಜನೆ ಪ್ರಗತಿಯಲ್ಲಿ ಇದೆ’ ಎಂದು ವಾಲ್‌ಮಾರ್ಟ್‌ ಇಂಡಿಯಾದ ಸಿಇಒ ಕ್ರಿಶ್‌ ಅಯ್ಯರ್‌ ಹೇಳಿದ್ದಾರೆ.

ಇ–ಬೇ ಇಂಡಿಯಾ
ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ‍ಪಾಲನ್ನು ₹ 7,370 ಕೋಟಿಗೆ ಮಾರಾಟ ಮಾಡಲಿರುವ ಅಮೆರಿಕದ ಇ–ಬೇ, ಇಬೇ ಇಂಡಿಯಾ ಹೆಸರಿನಲ್ಲಿ ತನ್ನ ವಹಿವಾಟು ಪುನರಾರಂಭಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಫ್ಲಿಪ್‌ಕಾರ್ಟ್‌, ಇನ್ನು ಮುಂದೆ ‘ಇಬೇಡಾಟ್‌ಇನ್‌ (eBay.in) ಬ್ರ್ಯಾಂಡ್‌ ಬಳಸುವುದನ್ನು ಕೈಬಿಡಲಿದೆ.

ನೀತಿ ಆಯೋಗದ ಸ್ವಾಗತ
ವಾಲ್‌ಮಾರ್ಟ್‌ – ಫ್ಲಿಪ್‌ಕಾರ್ಟ್‌ ಒಪ್ಪಂದವು ವಿದೇಶಿ ಬಂಡವಾಳ ಹೂಡಿಕೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನೀತಿ ಆಯೋಗವು ಪ್ರತಿಕ್ರಿಯಿಸಿದೆ.

‘ಈ ಒಪ್ಪಂದವು ದೇಶದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನಿಯಮಗಳಿಗೆ ಅನುಗುಣವಾಗಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.