ADVERTISEMENT

ಹೊಸ ಕೈಗಾರಿಕಾ ವಸಾಹತು ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಬೆಂಗಳೂರು: ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನೆಲಮಂಗಲ ಸಮೀಪ ಮತ್ತೊಂದು ಕೈಗಾರಿಕಾ ವಸಾಹತು (ಗ್ರೇಟರ್ ಪೀಣ್ಯ) ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಂಗಳವಾರ ಇಲ್ಲಿ ತಿಳಿಸಿದರು.

ಈಗಾಗಲೇ 225 ಎಕರೆ ಭೂಮಿ ಗುರುತಿಸಲಾಗಿದೆ. ವಸಾಹತು ಸ್ಥಾಪನೆಗೆ 300 ಎಕರೆ ಭೂಮಿ ಬೇಕಾಗುತ್ತದೆ. ಎಕರೆಗೆ ರೂ 40 ಲಕ್ಷ ದರದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಬೆಲೆ ನಿಗದಿ ಮಾಡುತ್ತಿದೆ. ಮೂರು ತಿಂಗಳಲ್ಲಿ ಕೈಗಾರಿಕಾ ನಿವೇಶನಗಳನ್ನು ಹಂಚಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡಿದ್ದ 387 ಯೋಜನೆಗಳ ಪೈಕಿ 224 ಯೋಜನೆಗಳು (ಶೇ 62ರಷ್ಟು) 3-4 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. 27 ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಇವುಗಳಿಂದ ರೂ 17 ಸಾವಿರ ಕೋಟಿ  ಬಂಡವಾಳ ಹೂಡಿಕೆಯಾಗಲಿದೆ ಎಂದರು.

ಕೈಗಾರಿಕೆಗಳಿಗೆ ಒಂದು ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಶೇ 25ರಿಂದ 30ರಷ್ಟು ಭೂಮಿಯನ್ನು ಸಣ್ಣ ಕೈಗಾರಿಕೆಗಳಿಗೆ ನೀಡಲಾಗುವುದು. ಶೇ 10ರಿಂದ 15ರಷ್ಟು ನೀರಾವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯ. ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಕಬ್ಬಿನ ಗದ್ದೆಗಳು ಇರುವ ಕಡೆ ಭೂಮಿ ಬೇಕಾಗುತ್ತದೆ. ಹೀಗಾಗಿ ಫಲವತ್ತಾದ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಸಭಾಂಗಣ ಉದ್ಘಾಟನೆ: ಇದೇ 23ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು `ಕಾಸಿಯಾ~ದ ಸುಸಜ್ಜಿತವಾದ ನೂತನ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.