ADVERTISEMENT

₨2,000ಕೋಟಿ ಒಣದ್ರಾಕ್ಷಿ ಉತ್ಪಾದನೆಗೆ ಕುತ್ತು

ವಿಜಾಪುರದ ವಿಶಿಷ್ಟ ಒಣ ದ್ರಾಕ್ಷಿಗೂ ಕುತ್ತು ತಂದ ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ವಿಜಾಪುರ: ಅಕಾಲಿಕ ಮಳೆ ಒಣ ದ್ರಾಕ್ಷಿಗೂ ಕುತ್ತು ತಂದಿದೆ. ಜಿಲ್ಲೆಯಲ್ಲಿ ಕಟಾವಿಗೆ ಬಂದಿದ್ದ 26,000 ಮೆಟ್ರಿಕ್‌ ಟನ್‌ ದ್ರಾಕ್ಷಿ ತೋಟದಲ್ಲಿಯೇ ಹಾನಿಗೀಡಾಗಿರುವುದರಿಂದ ಒಣ ದ್ರಾಕ್ಷಿ ತಯಾರಿಸಲು ಹಸಿ ದ್ರಾಕ್ಷಿಯೇ ಇಲ್ಲದಂತಾಗಿದೆ.

ಇನ್ನು ಬಹುತೇಕ ಕಡೆಗಳಲ್ಲಿ ಒಣ ದ್ರಾಕ್ಷಿ ತಯಾರಿಸುವ ರ್‍್ಯಾಕ್‌ಗಳು ಆಲಿಕಲ್ಲು ಮಳೆ–ಬಿರುಗಾಳಿಯಿಂದ ಧ್ವಂಸಗೊಂಡಿವೆ. ಕೆಲವೆಡೆ ಈಗಾಗಲೆ ಕಟಾವು ಮಾಡಿ ರ್‍್ಯಾಕ್‌ಗಳಲ್ಲಿ ಹಾಕಿರುವ ದ್ರಾಕ್ಷಿ ಒಣಗುತ್ತಿಲ್ಲ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಪ್ರತಿ ವರ್ಷ ₨2,000 ಕೋಟಿ ಮೊತ್ತದ ಒಣ ದ್ರಾಕ್ಷಿ ಉತ್ಪಾದನೆಯಾಗುತ್ತಿತ್ತು. ಈಗ ಆ ವಹಿವಾಟು ಕೈತಪ್ಪಲಿದ್ದು, ಇದು ಜಿಲ್ಲೆಯ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಒಣ ದ್ರಾಕ್ಷಿಯ ಕೊರತೆಗೂ ಕಾರಣವಾಗಲಿದೆ.

ಕಡಿಮೆ ತೇವಾಂಶದ ವಿಶಿಷ್ಟ ಹವಾಗುಣ ಜಿಲ್ಲೆಯಲ್ಲಿರುವುದರಿಂದ ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸೋಲಾಪುರ ಮತ್ತಿತರ ಜಿಲ್ಲೆಗಳ ರೈತರು ಹಸಿ ದ್ರಾಕ್ಷಿಯನ್ನು ಇಲ್ಲಿಗೆ ತಂದು, ಅದನ್ನು ಒಣಗಿಸಿಕೊಂಡು (ಮಣೂಕು ತಯಾರಿಸಿಕೊಂಡು) ಹೋಗುವುದು ವಾಡಿಕೆ. ನಗರ ಹೊರ ವಲಯದ ಅಲಿಯಾಬಾದ್‌ನಲ್ಲಿ ನೆರೆ ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರೇ ಅಂದಾಜು 200 ಎಕರೆ ಜಮೀನು ಖರೀದಿಸಿ, ಅಲ್ಲಿ ಒಣ ದ್ರಾಕ್ಷಿ ತಯಾರಿಸುವ ಸಾವಿರಕ್ಕೂ ಹೆಚ್ಚು ರ್‍್ಯಾಕ್‌ (ಶೆಡ್‌)ಗಳನ್ನು ನಿರ್ಮಿಸಿಕೊಂಡಿದ್ದಾರೆ. ಒಣ ದ್ರಾಕ್ಷಿ ತಯಾರಿಕೆಗೆ ಯಂತ್ರೋಪಕರಣ ಬಳಸುತ್ತಿಲ್ಲ. ಎಲ್ಲರೂ ನೈಸರ್ಗಿಕವಾಗಿ ಒಣಗಿಸುವ ಪದ್ಧತಿಯನ್ನೇ ಅಳವಡಿಸಿಕೊಂಡಿರುವುದು ಹಾನಿ ಹೆಚ್ಚಳಕ್ಕೆ ಕಾರಣವಾಗಿದೆ.

‘ನಾವು 15 ವರ್ಷಗಳಿಂದ ದ್ರಾಕ್ಷಿಯನ್ನು ಇಲ್ಲಿಗೆ ತಂದು, ಒಣ ದ್ರಾಕ್ಷಿ ತಯಾರಿಸಿಕೊಂಡು ಹೋಗುತ್ತಿದ್ದೇವೆ. ರ್‍್ಯಾಕ್‌ನಲ್ಲಿ ಹಾಕಿರುವ ದ್ರಾಕ್ಷಿ 20 ದಿನವಾದರೂ ಒಣಗದೆ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಈ ವರ್ಷದಷ್ಟು ಹಾನಿ ಹಿಂದೆ ಯಾವತ್ತೂ ಆಗಿಲ್ಲ’ ಎಂದು ಇಲ್ಲಿಯ ಅಲಿಯಾಬಾದ್‌ನಲ್ಲಿ ಒಣ ದ್ರಾಕ್ಷಿ ತಯಾರಿಸುತ್ತಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಕುಳಲಿಯ ರೈತ ಕಾಡಪ್ಪ ರಾಮಪ್ಪ ತೇಲಿ, ಜಮಖಂಡಿ ತಾಲ್ಲೂಕು ಕಲಹಳ್ಳಿಯ ಎ.ಎನ್‌. ನಂದಗಾವ ಹೇಳಿದರು.

‘ರ್‍್ಯಾಕ್‌ನಲ್ಲಿ ಹಾಕಿರುವ ದ್ರಾಕ್ಷಿ ಒಣಗದೆ ಕೊಳೆಯುತ್ತಿದ್ದು, ಕಾಲು ಭಾಗದಷ್ಟು ಉತ್ಪನ್ನ ಬರುವ ಸಾಧ್ಯತೆಯೂ ಇಲ್ಲ’ ಎಂದು ಅಲಿಯಾಬಾದ್‌ನ ರೈತ ಕೇಸು ಹರಿಸಿಂಗ್‌ ಚವ್ಹಾಣ ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 22,000 ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ಈ ಬಾರಿ ಉತ್ತಮ ಫಸಲು ಬಂದಿತ್ತು. ಒಟ್ಟು ಉತ್ಪಾದನೆಯ ಶೇ.25ರಷ್ಟು ಮಾತ್ರ ಹಸಿ ದ್ರಾಕ್ಷಿ ಮಾರಾಟವಾಗುತ್ತಿದ್ದು, ಉಳಿದಿದ್ದನ್ನು ಒಣ ದ್ರಾಕ್ಷಿ ತಯಾರಿಕೆಗೆ ಬಳಸಲಾಗುತ್ತಿತ್ತು. ಒಂದು ಎಕರೆಯಲ್ಲಿ ಬೆಳೆದ ದ್ರಾಕ್ಷಿಯಿಂದ ಒಂದು ಮೆಟ್ರಿಕ್‌ ಟನ್‌ನಷ್ಟು ಒಣ ದ್ರಾಕ್ಷಿ ತಯಾರಾಗುತ್ತದೆ. ಆದರೆ, ಈ ಅಕಾಲಿಕ ಮಳೆ ಎಲ್ಲವನ್ನೂ ಬಲಿ ಪಡೆದಿದೆ’ ಎಂದು ತಿಡಗುಂದಿಯ ದ್ರಾಕ್ಷಿ ಬೆಳೆಗಾರ ವಿಠ್ಠಲಗೌಡ ಬಿರಾದಾರ ಹೇಳಿದರು.

‘ನಮ್ಮ ಜಿಲ್ಲೆಯ ವಾತಾವರಣಕ್ಕೆ 12 ದಿನಗಳಲ್ಲಿ ಒಣ ದ್ರಾಕ್ಷಿ ತಯಾರಾಗುತ್ತಿತ್ತು. ಈಗ 30 ದಿನಗಳಾದರೂ ದ್ರಾಕ್ಷಿ ಒಣಗುತ್ತಿಲ್ಲ. ಒಣಗಿಸುವ ಅವಧಿ  ಮತ್ತು ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ಅದು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಇದಕ್ಕೆ ಬೆಲೆ ಬರುವುದಿಲ್ಲ’ ಎಂದರು.

‘ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 35,000 ಮೆಟ್ರಿಕ್‌ ಟನ್‌ನಷ್ಟು ಒಣ ದ್ರಾಕ್ಷಿ ತಯಾರಾಗುತ್ತಿದ್ದು, ಆ ಪೈಕಿ ವಿಜಾಪುರ ಜಿಲ್ಲೆಯೊಂದರಲ್ಲಿಯೇ 20,000 ಮೆಟ್ರಿಕ್ ಟನ್‌ ಒಣ ದ್ರಾಕ್ಷಿ ತಯಾರಾಗುತ್ತದೆ. ಅದರಲ್ಲಿ ಶೇ.40ರಷ್ಟು ಕರ್ನಾಟಕದಲ್ಲಿಯೇ ಮಾರಾಟವಾದರೆ, ಉಳಿದದ್ದು ದೆಹಲಿ, ತಮಿಳುನಾಡು, ರಾಜಸ್ತಾನ ಮತ್ತಿತರ ರಾಜ್ಯಗಳಿಗೆ ಹಾಗೂ ದುಬೈ ಮತ್ತಿತರ ದೇಶಗಳಿಗೆ ರಫ್ತಾಗುತ್ತದೆ’ ಎಂದು ವಿಜಾಪುರ ತಾಲ್ಲೂಕಿನ ಶೇಗುಣಶಿಯ ರೈತ ಡಾ.ಕೆ.ಎಚ್‌. ಮುಂಬಾರಡ್ಡಿ ಹೇಳಿದರು.

‘ರ್‍್ಯಾಕ್‌ಗಳಲ್ಲಿ ಹಾಕಿರುವ ದ್ರಾಕ್ಷಿ ವಾತಾವರಣದ ವೈಪರೀತ್ಯದಿಂದ ಒಣಗುತ್ತಿಲ್ಲ. ತಡವಾಗಿ ಒಣಗಿದರೂ ಅದು ಕಪ್ಪು ಬಣ್ಣಕ್ಕೆ ತಿರುಗಿ ಗುಣಮಟ್ಟವೂ ಕಳಪೆಯಾಗುತ್ತದೆ.  ಅದನ್ನು ₨10 ಕೆ.ಜಿ.ಗೂ ಯಾರೂ ಕೇಳುವುದಿಲ್ಲ. ಮಳೆಯಿಂದ ಒಣ ದ್ರಾಕ್ಷಿಯ ಕೊರತೆ ಯಾಗಲಿರುವುದರಿಂದ, ಗುಣಮಟ್ಟ ಸರಿ ಇಲ್ಲದಿದ್ದರೂ ಈ ಒಣ ದ್ರಾಕ್ಷಿಗೆ ಪ್ರತಿ ಕೆ.ಜಿ.ಗೆ ₨40ರಿಂದ ₨50 ದರ ಬರಬಹುದು. ವರ್ತಕರು ಗಂಧಕವನ್ನು ಹೆಚ್ಚಾಗಿ ಮಿಶ್ರಣ ಮಾಡಿ ಬಣ್ಣ ಬದಲಿಸಿ ಗ್ರಾಹಕರನ್ನು ವಂಚಿಸುವ ಅಪಾಯವೂ ಇದೆ’ ಎಂದರು.

‘ವಿಜಾಪುರ ಜಿಲ್ಲೆಯಲ್ಲಿ ಒಣ ದ್ರಾಕ್ಷಿಯನ್ನು ವೈಜ್ಞಾನಿಕವಾಗಿ ತಯಾರಿಸುವ ಮತ್ತು ಸಂಸ್ಕರಿಸುವ ವ್ಯವಸ್ಥೆ ಇಲ್ಲ. ಬಹುಪಾಲು ಒಣ ದ್ರಾಕ್ಷಿಯನ್ನು ರೈತರು ಮಹಾರಾಷ್ಟ್ರದ ಸಾಂಗ್ಲಿ, ತಾಸಗಾಂವ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ವಾಡಿಕೆ. ಸದ್ಯ ಪ್ರತಿ ಕೆ.ಜಿ.ಗೆ ಸರಾಸರಿ  ₨160 ದರ ಇದ್ದರೂ, ಒಣ ದ್ರಾಕ್ಷಿಯ ಆವಕ ಇಲ್ಲ’ ಎಂದು ಇಲ್ಲಿಯ ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.