ADVERTISEMENT

1 ಸಾವಿರ ಬ್ಯಾಂಕ್‌ ಖಾತೆಗಳಿಗೆ ವಂಚನೆ

ಪಿಟಿಐ
Published 28 ಮಾರ್ಚ್ 2018, 19:34 IST
Last Updated 28 ಮಾರ್ಚ್ 2018, 19:34 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ಗ್ರಾಹಕರ ಮಾಹಿತಿ ಕದ್ದ ಸೈಬರ್‌ ವಂಚಕರು 1,020 ಬ್ಯಾಂಕ್‌ ಖಾತೆಗಳಿಂದ ಹಣ ಪಡೆದ ಘಟನೆಗಳು ನಡೆದಿವೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.

‘ಸರ್ಕಾರಿ ಮತ್ತು ಖಾಸಗಿ ವಲಯದ 13 ಬ್ಯಾಂಕ್‌ಗಳಿಗೆ ಸೇರಿದ 351 ಬ್ಯಾಂಕ್‌ ಶಾಖೆಗಳಲ್ಲಿನ ಖಾತೆಗಳಿಗೆ ಆನ್‌ಲೈನ್‌ನಲ್ಲಿ ಕನ್ನ ಹಾಕಿ ವಂಚನೆ ಎಸಗಿರುವ ಬಗ್ಗೆ ದೂರುಗಳು ದಾಖಲಾಗಿವೆ’ ಎಂದು ಐ.ಟಿ ರಾಜ್ಯ ಸಚಿವ ಕೆ. ಜೆ. ಅಲ್ಫನ್ಸ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸೈಬರ್‌ ಅಪರಾಧಿಗಳು ಗ್ರಾಹಕರ ಹೆಸರು, ರಹಸ್ಯ ಸಂಖ್ಯೆ, ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು  ಅಕ್ರಮವಾಗಿ ಪಡೆದುಕೊಂಡು ಈ ವಂಚನೆ ಎಸಗಿದ್ದಾರೆ. ಬ್ಯಾಂಕ್‌ ಹೆಸರಿನಲ್ಲಿ ನಕಲಿ ಇ–ಮೇಲ್‌ ಅಥವಾ ಎಸ್‌ಎಂಎಸ್‌ ಕಳಿಸಿ ಮಾಹಿತಿ ಪಡೆದು (ಫಿಶ್ಶಿಂಗ್) ವಂಚಿಸಲಾಗಿದೆ.

ADVERTISEMENT

ಡಿಜಿಟಲ್‌ ಪಾವತಿ ಸೇವೆ ಒದಗಿಸುವ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಸೈಬರ್‌ ಸುರಕ್ಷತೆಗೆ ಬೆದರಿಕೆ ಒಡ್ಡಿದ ಇಂತಹ ಘಟನೆಗಳನ್ನು ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯಾ (ಸಿಇಆರ್‌ಟಿ–ಇನ್‌) ತಂಡಕ್ಕೆ ವರದಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಸೈಬರ್‌ ಸುರಕ್ಷತೆಗೆ ಸಂಬಂಧಪಟ್ಟಂತೆ ಆಗುವ ಬೆಳವಣಿಗೆಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಲಕಾಲಕ್ಕೆ ಪರಾಮರ್ಶಿಸಲಿದೆ. ಈ ಮೂಲಕ ಬ್ಯಾಂಕ್‌ಗಳ ಸೈಬರ್‌ ದಾಳಿ ನಿಯಂತ್ರಿಸುವ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ  ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.