ADVERTISEMENT

18ರಿಂದ ಐ.ಟಿ ಮೇಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಬೆಂಗಳೂರು: ಹದಿನಾಲ್ಕನೇ ಐ.ಟಿ ಮೇಳ (ಐ.ಟಿ ಡಾಜ್ ಬಿಜ್-2011) ಇದೇ 18ರಿಂದ 20ರವರೆಗೆ ನಗರದಲ್ಲಿ ನಡೆಯಲಿದ್ದು, ಆರಂಭದ ವರ್ಷಗಳಲ್ಲಿನ ವೈಭವ ಮರಳಿ ತರಲಾಗುತ್ತಿದೆ ಎಂದು ಮೇಳದ ಸಂಘಟಕರು ಮಂಗಳವಾರ ಇಲ್ಲಿ ಪ್ರಕಟಿಸಿದರು.

ಮಾಜಿ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಮೇಳ ಉದ್ಘಾಟಿಸಲಿದ್ದು, ರುವಾಂಡಾದ ಪ್ರಧಾನಿ ಬರ್ನಾರ್ಡ್  ಮಕುಜಾ ಮುಖ್ಯ ಅತಿಥಿಗಳಾಗಲಿದ್ದಾರೆ.

ಈ ಬಾರಿಯ ಮೇಳವು `ಭಾರತದ ಹೊಸತನ~ ಪರಿಕಲ್ಪನೆಗೆ ಆದ್ಯತೆ ನೀಡಿದೆ. ಮಾಹಿತಿ, ಸಂಪರ್ಕ ಮತ್ತು ತಂತ್ರಜ್ಞಾನ ರಂಗದಲ್ಲಿನ ಹೊಸ ಸಂಶೋಧನೆಗಳಿಗೆ, ಸೌಲಭ್ಯಗಳಿಗೆ ಒತ್ತು ನೀಡಲಾಗುವುದು. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬೆಂಗಳೂರು ದೇಶದ ಹೆಬ್ಬಾಗಿಲಿನಂತೆ ವಿಶ್ವದ ಗಮನ ಸೆಳೆಯಬೇಕು ಎನ್ನುವುದು ನಮ್ಮ  ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಪ್ರಧಾನ ಕಾರ್ಯದರ್ಶಿ ಎಂ. ಎನ್. ವಿದ್ಯಾಶಂಕರ  ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಧಾರ್, ಮಾನವ ಸಂಪನ್ಮೂಲ ಕೌಶಲ ಅಭಿವೃದ್ಧಿ, ಆನಿಮೇಷನ್ - ಗೇಮಿಂಗ್, ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ - ತಯಾರಿಕೆ, ಪರಿಸರ ಸ್ನೇಹಿ ತಂತ್ರಜ್ಞಾನ, ಅಗ್ಗದ ದರದಲ್ಲಿ ಬಾಡಿಗೆಗೆ  ದೊರೆಯುವ ಸಾಫ್ಟ್‌ವೇರ್ (ಕ್ಲೌಡ್ ತಂತ್ರಜ್ಞಾನ) ಭವಿಷ್ಯ, ದೂರಸಂಪರ್ಕ, ಗ್ರಾಮೀಣ ಸಂಪರ್ಕ, ಮೊಬೈಲ್ ಸೌಲಭ್ಯಗಳಿಗೆ ಸಂಬಂಧಿಸಿದ ಹೊಸ ಸಂಶೋಧನೆಗಳ ಬಗ್ಗೆ ಮೇಳದಲ್ಲಿ ಹೆಚ್ಚು ಬೆಳಕು ಚೆಲ್ಲಲಾಗುವುದು ಎಂದರು.

ಮೂರು ದಿನಗಳವರೆಗೆ ಅಶೋಕ ಹೋಟೆಲ್ ಆವರಣದಲ್ಲಿ ನಡೆಯಲಿರುವ ಮೇಳಕ್ಕೆ ಐ.ಟಿ ಉದ್ಯಮವು ಅಗತ್ಯ ಸಹಕಾರ ಮತ್ತು ಬೆಂಬಲ ನೀಡಲು ಮುಂದೆ ಬಂದಿದೆ.

ಐ.ಟಿ, ಐ.ಟಿ ಆಧಾರಿತ ಸೇವೆ, ಹಾರ್ಡ್‌ವೇರ್ ಮತ್ತು ಸೆಮಿಕಂಡಕ್ಟರ್ ವಲಯಗಳಿಗೆ ಈ ಮೇಳವು ಹೆಚ್ಚು ಪ್ರಸ್ತುತವಾಗಿದೆ. ಸರಕು, ತಂತ್ರಜ್ಞಾನ ಮತ್ತು ಸೇವಾ ವಿಭಾಗದಲ್ಲಿ ನಾವೀನ್ಯತೆ ಅಭಿವೃದ್ಧಿಪಡಿಸಿದವರಿಗೆ ಮೇಳದಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು.

ಸಾಫ್ಟ್‌ವೇರ್ ಪಾರ್ಕ್ಸ್ ಆಫ್ ಇಂಡಿಯಾದ (ಎಸ್‌ಟಿಪಿಐ), ಐ.ಟಿ ರಫ್ತು  ಪ್ರಶಸ್ತಿಗಳನ್ನು ಮೇಳದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.

ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ಒಕ್ಕೂಟವು (ನಾಸ್ಕಾಂ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಒಒ) ಸಮಾವೇಶ ಸಂಘಟಿಸಲಿದ್ದು, ಅಧ್ಯಕ್ಷ ಸೋಮ್ ಮಿತ್ತಲ್ ಸೇರಿದಂತೆ ಅನೇಕ ಗಣ್ಣರು ಭಾಗವಹಿಸಲಿದ್ದಾರೆ. ಹತ್ತು ರಾಜ್ಯಗಳೂ ಮೇಳದಲ್ಲಿ ಪಾಲ್ಗೊಳ್ಳಲಿವೆ. ತುಂಬ ಜನಪ್ರಿಯವಾಗಿರುವ ರಾಷ್ಟ್ರೀಯ ಗ್ರಾಮೀಣ ಐ. ಟಿ ರಸಪ್ರಶ್ನೆಯೂ ನಡೆಯಲಿದೆ ಎಂದು ವಿದ್ಯಾಶಂಕರ ನುಡಿದರು.

ಹೊಸ ಹೊಸ ಸಂಶೋಧನೆಗಳು ಮತ್ತು ಸದಾ ಹೊಸತನ ಧ್ಯಾನಿಸುವ ಐ.ಟಿ ವೃತ್ತಿಪರರಿಂದಾಗಿ  ಬೆಂಗಳೂರು ಏಷ್ಯಾದಲ್ಲಿನ ಇತರ ನಗರಗಳಿಗೆ ಹೋಲಿಸಿದರೆ ಭಿನ್ನವಾಗಿ ಗಮನ ಸೆಳೆಯುತ್ತದೆ ಎಂದು ಇತ್ತೀಚೆಗಷ್ಟೇ ರಾಜ್ಯದ `ಐ.ಟಿ ಮುನ್ನೋಟ ಗುಂಪಿನ~ ಅಧ್ಯಕ್ಷರಾಗಿ ನೇಮಕಗೊಂಡಿರುವ ಇನ್ಫೋಸಿಸ್‌ನ ಸಹ ಅಧ್ಯಕ್ಷ ಕ್ರಿಸ್. ಗೋಪಾಲಕೃಷ್ಣನ್ ನುಡಿದರು.

 ಸರ್ಕಾರದ `ಮುನ್ನೋಟ 2020~ ಕನಸು ನನಸಾಗಲು ಹೊಸ ಆಲೋಚನೆಗಳು ಮತ್ತು ಸಂಶೋಧನೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.