ADVERTISEMENT

19 ಬ್ಯಾಂಕ್‌ಗಳ ನಷ್ಟ ₹ 87 ಸಾವಿರ ಕೋಟಿ

ಹೆಚ್ಚುತ್ತಿರುವ ವಸೂಲಿಯಾಗದ ಸಾಲ: ಹದಗೆಟ್ಟ ಹಣಕಾಸು ಸ್ಥಿತಿ

ಪಿಟಿಐ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ನವದೆಹಲಿ: 2017–18ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ 19 ಬ್ಯಾಂಕ್‌ಗಳ ಒಟ್ಟು ನಷ್ಟವು ₹ 87,357 ಕೋಟಿಗೆ ತಲುಪಿದೆ.

2016–17ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಒಟ್ಟು ನಿವ್ವಳ ಲಾಭ ₹ 474 ಕೋಟಿ ಇತ್ತು.

ಹಗರಣದಲ್ಲಿ ಸಿಲುಕಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಒಂದರ ನಷ್ಟದ ಮೊತ್ತವೇ ₹ 12,283 ಕೋಟಿ ಇದ್ದು, ಮೊದಲ ಸ್ಥಾನದಲ್ಲಿದೆ. ಐಡಿಬಿಐ ಎರಡನೇ ಸ್ಥಾನದಲ್ಲಿದೆ. ವಿಜಯ ಬ್ಯಾಂಕ್‌ (₹ 727 ಕೋಟಿ) ಮತ್ತು ಇಂಡಿಯನ್‌ ಬ್ಯಾಂಕ್‌ಗಳು (₹ 1,259 ಕೋಟಿ) ಮಾತ್ರವೇ ಲಾಭ ಗಳಿಸಿವೆ.

ADVERTISEMENT

ವಸೂಲಿಗೆ ಕ್ರಮ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲ ವಸೂಲಿ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿವೆ.

ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯ (ಐಬಿಸಿ) ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 30 ಸಾವಿರ ಕೋಟಿ ಸಾಲ ವಸೂಲಿ ಮಾಡುವ ನಿರೀಕ್ಷೆಯನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊಂದಿದೆ.

ದೊಡ್ಡ ಮೊತ್ತದ ವಸೂಲಾಗದ ಸಾಲಗಳನ್ನು (ಎನ್‌ಪಿಎ) ಕಾಲಮಿತಿ ಒಳಗೆ ಪರಿಹರಿಸಬೇಕು. ಇದು ಸಾಧ್ಯವಾಗದಿದ್ದರೆ ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಆದೇಶ ಹೊರಡಿಸಿದೆ.  ಅದರಂತೆ ಎಸ್‌ಬಿಐ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿದೆ.

12 ಎನ್‌ಪಿಎ ಖಾತೆಗಳನ್ನು ಹರಾಜು ಹಾಕುವ ಮೂಲಕ ಈ ತಿಂಗಳಿನಲ್ಲಿ ₹ 1,325 ಕೋಟಿ ಸಂಗ್ರಹಿಸಲು ಮುಂದಾಗಿದೆ. ಜೂನ್‌ 25 ರಂದು ಇ–ಹರಾಜು ನಡೆಸುವುದಾಗಿ ಎಸ್‌ಬಿಐ ಹೇಳಿದೆ.

ಹರಾಜು ಹಾಕಲಿರುವ ಪ್ರಮುಖ ಖಾತೆಗಳು: ಅಂಕಿತ್‌ ಮೆಟಲ್‌ ಆ್ಯಂಡ್‌ ಪವರ್‌ ಲಿ (₹ 690 ಕೋಟಿ), ಮಾಡರ್ನ್‌ ಸ್ಟೀಲ್ಸ್‌ ಲಿ (₹ 123 ಕೋಟಿ), ಗುಡ್ ಹೆಲ್ತ್‌ ಆಗ್ರೊಟೆಕ್‌ ಪ್ರೈವೇಟ್‌ ಲಿ (₹ 109 ಕೋಟಿ), ಅಮಿತ್‌ ಕಾಟನ್ಸ್‌ ಪ್ರೈವೇಟ್‌ ಲಿ (₹ 85 ಕೋಟಿ).

ಪಿಎನ್‌ಬಿ ಸಾಲ ವಸೂಲಿ: ಪಿಎನ್‌ಬಿ, ಏಪ್ರಿಲ್‌–ಜೂನ್ ಅವಧಿಯಲ್ಲಿ ₹ 8 ಸಾವಿರ ಕೋಟಿ ಸಾಲ ವಸೂಲಿ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.

ಸಾಲ ವಸೂಲಿ ಅಭಿಯಾನದ ಮೂಲಕ ಎರಡು ತಿಂಗಳಿನಲ್ಲಿ ರೆಲಿಗೇರ್‌, ಆರ್ಕೊಟೆಕ್‌ ಮತ್ತು ಸೂರ್ಯ ಅಲೋಯ್ಸ್‌ನಿಂದ ₹ 350 ಕೋಟಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.