ADVERTISEMENT

4ಐಟಿ ಕಂಪೆನಿಗಳ ಖಜಾನೆ ಭರ್ತಿ!

ಟಿಸಿಎಸ್, ಇನ್ಫೊಸಿಸ್, ವಿಪ್ರೊ, ಎಚ್‌ಸಿಎಲ್ ಬಳಿ ರೂ.43200 ಕೋಟಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST
4ಐಟಿ ಕಂಪೆನಿಗಳ ಖಜಾನೆ ಭರ್ತಿ!
4ಐಟಿ ಕಂಪೆನಿಗಳ ಖಜಾನೆ ಭರ್ತಿ!   

ಮುಖ್ಯಾಂಶಗಳು

-`ಇನ್ಫೊಸಿಸ್' ಬಳಿ ರೂ 23,436 ಕೋಟಿ ನಗದು
- ಟಿಸಿಎಸ್ ನಗದು ಸಂಪತ್ತು ರೂ 6,696 ಕೋಟಿ
- ವಿಪ್ರೊ ಬಳಿ ರೂ 8,424 ಕೋಟಿ ಹಣ
-`ಎಚ್‌ಸಿಎಲ್ ಬಳಿ ರೂ 4,115 ಕೋಟಿ ಹಣ

ನವದೆಹಲಿ(ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ನಾಲ್ಕು ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್), ಇನ್ಫೊಸಿಸ್, ವಿಪ್ರೊ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿರುವ ನಗದು ಸಂಪತ್ತಿನ ಪ್ರಮಾಣವೇ 800 ಕೋಟಿ ಡಾಲರ್. ಅಂದರೆ ಈ ಐ.ಟಿ ದಿಗ್ಗಜ ಸಂಸ್ಥೆಗಳ ದೊಡ್ಡ ಖಜಾನೆಯಲ್ಲಿ ಬ್ಯಾಂಕ್ ಠೇವಣಿ, ಹೂಡಿಕೆ ಪತ್ರಗಳು ಸೇರಿದಂತೆ ನಗದು ಹಣಕ್ಕೆ ಸಮನಾದ ರೂ 43,200 ಕೋಟಿ ಸಂಪತ್ತು ಇದೆ!

ಇತ್ತೀಚೆಗಷ್ಟೇ 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿರುವ `ಟಿಸಿಎಸ್' ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಪ್ರಗತಿಯ ಹಾದಿಯಲ್ಲಿ ಮತ್ತಷ್ಟು ಜೋರಾಗಿಯೇ ಹೆಜ್ಜೆ ಹಾಕಿವೆ. ಆದರೆ, ಇನ್ಫೊಸಿಸ್ ಮತ್ತು ವಿಪ್ರೊ 2013-14ನೇ ಸಾಲಿಗೆ ನಿರಾಶಾದಾಯಕ `ಮುನ್ನೋಟ' ಪ್ರಕಟಿಸಿದ್ದವು. ಇನ್ಫೊಸಿಸ್ ಫಲಿತಾಂಶದ ದಿನವಂತೂ ಷೇರುಪೇಟೆಯಲ್ಲಿ ಭಾರಿ (299 ಅಂಶಗಳ) ಕುಸಿತವಾಗಿತ್ತು.

ಅದೇನೇ ಇದ್ದರೂ 2013ರ ಮಾರ್ಚ್ 31ರ ವೇಳೆಗೆ ನಾಲ್ಕೂ ಪ್ರಮುಖ ಕಂಪೆನಿಗಳ ಬಳಿ ಬ್ಯಾಂಕ್ ಠೇವಣಿ ಸೇರಿದಂತೆ ಒಟ್ಟಾರೆ ನಗದು ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ.

ಎಸ್.ಡಿ.ಶಿಬುಲಾಲ್ ನೇತೃತ್ವದ `ಇನ್ಫೊಸಿಸ್' ಅತ್ಯಧಿಕ ಪ್ರಮಾಣದಲ್ಲಿ ನಗದು ಸಮಾನವಾದ ಧನ ಸಂಗ್ರಹ ಹೊಂದಿದೆ. ಅದರ ಬಳಿ ಸದ್ಯ 434 ಕೋಟಿ ಡಾಲರ್(ರೂ23436 ಕೋಟಿ) ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 30 ಕೋಟಿ ಡಾಲರ್ ಹೆಚ್ಚಳವಾಗಿದೆ.
`ಸಿಇಒ' ಎನ್.ಚಂದ್ರಶೇಖರನ್ ನೇತೃತ್ವದ `ಟಿಸಿಎಸ್', ನಗದು ಸಂಪತ್ತಿನಲ್ಲಿ ಈ ಬಾರಿ 10 ಕೋಟಿ ಡಾಲರ್ ಹೆಚ್ಚಳ ಕಂಡಿದೆ. ಮಾರ್ಚ್ 31ರಲ್ಲಿ ಒಟ್ಟು 124 ಕೋಟಿ ಡಾಲರ್(ರೂ6696 ಕೋಟಿ) ಕಂಪೆನಿ ಬಳಿ ಇತ್ತು.

ಇತ್ತೀಚೆಗೆ ಸಮಾಜ ಸೇವೆಗೆ ದೊಡ್ಡ ಮೊತ್ತದ ದಾನ ಮಾಡಿ ದೇಶದ ಗಮನ ಸೆಳೆದಿದ್ದ ಅಜೀಂ ಪ್ರೇಮ್‌ಜಿ ಅವರ ಒಡೆತನದ ಐ.ಟಿ ಕಂಪೆನಿ `ವಿಪ್ರೊ' ಬಳಿಯೂ ಮಾ. 31ರಲ್ಲಿ 156 ಕೋಟಿ ಡಾಲರ್(ರೂ8424 ಕೋಟಿ) ಹಣವಿತ್ತು.

ದೇಶದ ನಾಲ್ಕನೇ ಅತಿದೊಡ್ಡ ಐ.ಟಿ ಕಂಪೆನಿ `ಎಚ್‌ಸಿಎಲ್ ಟೆಕ್ನಾಲಜೀಸ್'  ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ  ನಗದು ಮೊತ್ತದಲ್ಲಿ ಒಮ್ಮೆಗೇ 39.80 ಕೋಟಿ ಡಾಲರ್‌ನಷ್ಟು ಹೆಚ್ಚಳ ಕಂಡಿದೆ. ಮಾ. 31ರಲ್ಲಿ ಕಂಪೆನಿ ಬಳಿ ಠೇವಣಿ ಸೇರಿದಂತೆ ನಗದು ಹಣದ ಸಂಗ್ರಹ 76.20 ಕೋಟಿ ಡಾಲರ್ (ರೂ4115 ಕೋಟಿ) ಇದ್ದಿತು.

ವರಮಾನ ಹೆಚ್ಚಳ
2012-13ನೇ ಹಣಕಾಸು ವರ್ಷದಲ್ಲಿ ಟಿಸಿಎಸ್' ವರಮಾನವೂ ಭಾರಿ (ರೂ50,000 ಕೋಟಿಗೂ ಅಧಿಕ) ಪ್ರಮಾಣದಲ್ಲಿ ಹೆಚ್ಚಿದೆ. ಇನ್ಫೊಸಿಸ್‌ನ ವಾರ್ಷಿಕ ವರಮಾನ ರೂ39,000 ಕೋಟಿ ಮತ್ತು ವಿಪ್ರೊ ವರಮಾನ ರೂ34,500 ಕೋಟಿಯಷ್ಟಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT