ADVERTISEMENT

ತೊಗರಿ ಖರೀದಿ ನೋಂದಣಿಗೆ ನೂಕುನುಗ್ಗಲು: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಸಿಂದಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಮಂಗಳವಾರ ನೂಕುನುಗ್ಗಲು ಉಂಟಾಗಿದ್ದರಿಂದ, ಪೊಲೀಸರು ಲಾಠಿ ಬೀಸಿ ರೈತರನ್ನು ಚದುರಿಸಿದರು.
ಸಿಂದಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಮಂಗಳವಾರ ನೂಕುನುಗ್ಗಲು ಉಂಟಾಗಿದ್ದರಿಂದ, ಪೊಲೀಸರು ಲಾಠಿ ಬೀಸಿ ರೈತರನ್ನು ಚದುರಿಸಿದರು.   

ಸಿಂದಗಿ (ವಿಜಯಪುರ ಜಿಲ್ಲೆ): ತೊಗರಿ ಖರೀದಿಗಾಗಿ ಹೆಸರು ನೋಂದಾಯಿಸಲು ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ನೂಕುನುಗ್ಗಲು ಉಂಟಾಗಿದ್ದು, ರೈತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ತಾಲ್ಲೂಕಿನಲ್ಲಿ 10 ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲೆಲ್ಲ ಮಂಗಳವಾರ ಏಕಕಾಲಕ್ಕೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಪ್ರಕ್ರಿಯೆ ವಾರದ ಹಿಂದೆಯೇ ಆರಂಭವಾಗಬೇಕಿತ್ತು. ಮೊದಲೇ ಹೆಸರು ಬರೆಯಿಸಿ, ಚೀಟಿ ಪಡೆಯಬೇಕು ಎಂದು ಹಲವಾರು ರೈತರು ಎರಡು ಮೂರು ದಿನಗಳಿಂದ ಕೇಂದ್ರದ ಎದುರೇ ಮಲಗಿದ್ದರು.

ನೋಂದಣಿ ಆರಂಭವಾಗುತ್ತಿದ್ದಂತೆಯೇ ಚೀಟಿ ಪಡೆಯಲು ಏಕಕಾಲಕ್ಕೆ ಮುಗಿಬಿದ್ದರು. ರೈತರ ಆತಂಕ ಹಾಗೂ ಧಾವಂತದಿಂದಾಗಿ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ರೈತರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.

ADVERTISEMENT

‘ಇಲ್ಲಿನ ಕೇಂದ್ರದಲ್ಲಿ 400 ರೈತರ ನೋಂದಣಿಗೆ ಅವಕಾಶವಿದೆ. ಇವತ್ತು 300 ಮಂದಿಗೆ ಚೀಟಿ ಕೊಟ್ಟಿದ್ದು ಸಂಜೆವರೆಗೂ ಕೇವಲ 45 ರೈತರ ನೋಂದಣಿ ಆಗಿದೆ. ಆನ್‌ಲೈನ್‌ನಲ್ಲಿ ಒಬ್ಬ ರೈತನ ನೋಂದಣಿ ಆಗಲು 20 ನಿಮಿಷ ಹಿಡಿಯುತ್ತದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಮುಖ ಅಶೋಕ ಅಲ್ಲಾಪುರ ‘ಪ್ರಜಾವಾಣಿ’ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.