ADVERTISEMENT

₹ 100 ಕೋಟಿಗೂ ಹೆಚ್ಚು ಸಾಲದ 1,463 ಖಾತೆ

ಪಿಟಿಐ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ನವದೆಹಲಿ: ಸರ್ಕಾರಿ ಸ್ವಾಮ್ಯದ 21  ಬ್ಯಾಂಕ್‌ಗಳಲ್ಲಿ ₹ 100 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ 1,463 ಖಾತೆಗಳಿವೆ. ವಸೂಲಿಯಾಗದ ಸಾಲ (ಎನ್‌ಪಿಎ) ಹೊಂದಿರುವ ಸಂಸ್ಥೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಈ ಮಾಹಿತಿ ನೀಡಿದೆ.

₹ 100 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಬಾಕಿ ಇರುವ ಖಾತೆಗಳಲ್ಲಿ ಎಸ್‌ಬಿಐ ಮೊದಲ ಸ್ಥಾನದಲ್ಲಿದೆ. ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಅಂತ್ಯಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಪಿಎ ₹ 7.34 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

ಎನ್‌ಪಿಎ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ವಿಪತ್ತು ನಿರ್ವಹಣೆಗಾಗಿ ತೆಗೆದಿರಿಸುವ ಮೊತ್ತದಲ್ಲಿ ಏರಿಕೆ ಕಾಣುತ್ತಿದೆ. ಇದು ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯವನ್ನು ತಗ್ಗಿಸುತ್ತಿದೆ.

2016ರ ಮಾರ್ಚ್‌ 31ರವರೆಗೆ ₹ 5,000 ಕೋಟಿಗೂ ಅಧಿಕ ಸಾಲ ಬಾಕಿ ಉಳಿಸಿಕೊಂಡಿರುವ ಹಾಗೂ ಶೇ 60ಕ್ಕೂ ಹೆಚ್ಚು ಎನ್‌ಪಿಎ ಇರುವ 12 ಖಾತೆಗಳ ಮಾಹಿತಿ ನೀಡುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೆಲವು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಅಂತಹ ಖಾತೆಗಳ ವಿರುದ್ಧ ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದೆ.

ವಸೂಲಾಗದ ಸಾಲದ ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್‌ಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ₹ 2.12 ಲಕ್ಷ ಕೋಟಿ ಪುನರ್ಧನ ಯೋಜನೆ ಘೋಷಿಸಿದೆ. ಪುನರ್ಧನ ಬಾಂಡ್‌ ರೂಪದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 80,000 ಕೋಟಿ ನೀಡಲು ಸಂಸತ್‌ನಿಂದ ಒಪ್ಪಿಗೆಯನ್ನೂ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.