ADVERTISEMENT

ಎಲ್‌ಐಸಿ ಎಂಎಫ್‌: ಪ್ರತಿ ದಿನ ‘ಎಸ್‌ಐಪಿ’

ಪಿಟಿಐ
Published 26 ಜನವರಿ 2018, 19:55 IST
Last Updated 26 ಜನವರಿ 2018, 19:55 IST
ಎಲ್‌ಐಸಿ ಎಂಎಫ್‌: ಪ್ರತಿ ದಿನ ‘ಎಸ್‌ಐಪಿ’
ಎಲ್‌ಐಸಿ ಎಂಎಫ್‌: ಪ್ರತಿ ದಿನ ‘ಎಸ್‌ಐಪಿ’   

ಮುಂಬೈ: ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಮ್ಯೂಚುವಲ್‌ ಫಂಡ್‌, ಪ್ರತಿ ದಿನ ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಯೋಜನೆ (ಎಸ್‌ಐಪಿ–ಸಿಪ್‌) ಜಾರಿಗೆ ತಂದಿದೆ.

ಹೂಡಿಕೆದಾರರು ಕನಿಷ್ಠ ₹ 300 ಹೂಡಿಕೆ ಮಾಡಲು ಈ ಯೋಜನೆಯಡಿ ಅವಕಾಶ ಮಾಡಿಕೊಡಲಾಗಿದೆ. ಇದು ಐದು ಷೇರು ಯೋಜನೆಗಳಲ್ಲಿ ಲಭ್ಯ ಇರಲಿದೆ.

ಎಲ್‌ಐಸಿ ಎಂಎಫ್‌ ಈಕ್ವಿಟಿ ಫಂಡ್‌, ಗ್ರೋತ್‌ ಫಂಡ್‌, ಮಿಡ್‌ಕ್ಯಾಪ್‌ ಫಂಡ್‌, ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌ ಮತ್ತು ಇಂಡೆಕ್ಸ್‌ ಫಂಡ್‌ಗಳಲ್ಲಿ ಪ್ರತಿ ದಿನ ಹೂಡಿಕೆ ಮಾಡಬಹುದಾಗಿದೆ. ಪ್ರತಿ ದಿನದ ‘ಎಸ್‌ಐಪಿ’ಯನ್ನು ಎರಡು ಹೈಬ್ರಿಡ್‌ ಯೋಜನೆಗಳಾದ ಬ್ಯಾಲನ್ಸ್ಡ್‌ ಫಂಡ್‌ ಮತ್ತು ಮಂತ್ಲಿ ಇನ್‌ಕಂ ಪ್ಲ್ಯಾನ್‌ನಲ್ಲಿಯೂ ತೊಡಗಿಸಬಹುದಾಗಿದೆ.

ADVERTISEMENT

ಸದ್ಯಕ್ಕೆ ಎಲ್‌ಐಸಿ ಎಂಎಫ್‌, ‘ಎಸ್‌ಐಪಿ’ ಮೂಲಕ ಪ್ರತಿ ತಿಂಗಳೂ ₹ 23 ಕೋಟಿ ಸಂಗ್ರಹಿಸುತ್ತಿದೆ. ಪ್ರತಿ ದಿನದ ಹೂಡಿಕೆ ಹೆಚ್ಚಿದರೆ ಈ ಮೊತ್ತ ₹ 30 ಕೋಟಿಗೆ (ಶೇ 30ರಷ್ಟು ಏರಿಕೆ) ಏರುವ ನಿರೀಕ್ಷೆ ಇದೆ.

ಜನರು ಪ್ರತಿ ದಿನ ಹೂಡಿಕೆ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳುವುದನ್ನು ಉತ್ತೇಜಿಸಲು ಈ ಯೋಜನೆ ಪರಿಚಯಿಸಲಾಗಿದೆ. 22 ಕೆಲಸದ  ದಿನಗಳಲ್ಲಿನ ಈ ಹೂಡಿಕೆಯಿಂದ ವ್ಯಕ್ತಿಯೊಬ್ಬನ ತಿಂಗಳ ಹೂಡಿಕೆ ಮೊತ್ತ ₹ 6,600ಕ್ಕೆ ಏರಲಿದೆ ಎಂದು ಎಲ್‌ಐಸಿ ಎಂಎಫ್‌, ಹೇಳಿಕೆಯಲ್ಲಿ ತಿಳಿಸಿದೆ.

‘ಮ್ಯೂಚುವಲ್‌ ಫಂಡ್‌ ‘ಎಸ್‌ಐಪಿ’ಯು ಹೂಡಿಕೆದಾರರಲ್ಲಿ ದಿನೇ ದಿನೇ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ. ಶಿಸ್ತುಬದ್ಧ ಹೂಡಿಕೆಗೆ ಇದು ಉತ್ತೇಜನ ನೀಡಲಿದೆ.ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಬಗ್ಗೆ ಚಿಂತಿತರಾಗದೇ ನಿಶ್ಚಿಂತೆಯಿಂದ ಇರಲು ಇದು ನೆರವಾಗಲಿದೆ’ ಎಂದು ಎಲ್‌ಐಸಿ ಎಂಎಫ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ರಾಜೇಶ್‌ ಪಟವರ್ಧನ್‌ ಹೇಳಿದ್ದಾರೆ.

‘ಷೇರುಗಳಲ್ಲಿ ಹಣ ಹೂಡಿಕೆ ಮಾಡಲು ‘ಎಸ್‌ಐಪಿ’ ಉತ್ತಮ ಮಾರ್ಗವಾಗಿದೆ ಎಂದು ನಾವು ಭಾವಿಸಿದ್ದರೆ, ಪ್ರತಿ ದಿನದ ‘ಸಿಪ್‌’ ಮಾರುಕಟ್ಟೆ ಏರಿಳಿತ ತಡೆಗೂ ನೆರವಾಗಲಿದೆ. ಇದರಿಂದ ನಮ್ಮ ಹೂಡಿಕೆದಾರರಿಗೂ ಪ್ರಯೋಜನ ಆಗಲಿದೆ’ ಎಂದು ಹೇಳಿದ್ದಾರೆ.

*
ಪ್ರಸಕ್ತ ಹಣಕಾಸು ವರ್ಷದಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಐಪಿ ಹೂಡಿಕೆಯು ಶೇ 56ರಷ್ಟು ಏರಿಕೆ ಕಂಡಿದೆ.
–ರಾಜೇಶ್‌ ಪಟವರ್ಧನ್‌,
ಎಲ್‌ಐಸಿ ಎಂಎಫ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.