ADVERTISEMENT

ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಲು ಮನವಿ

ಮುಖ್ಯಮಂತ್ರಿ ಜೊತೆ ಕೈಗಾರಿಕೋದ್ಯಮ ಸಂಘಟನೆಗಳ ಪ್ರತಿನಿಧಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಬೆಂಗಳೂರು: ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು, ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಬೇಕು ಎಂದು ಕೈಗಾರಿಕೋದ್ಯಮ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮನವಿ ಸಲ್ಲಿಸಿದ ಸಂಘಟನೆಗಳ ಪ್ರತಿನಿಧಿಗಳು, ಮುಖ್ಯಮಂತ್ರಿ ಜೊತೆ ಈ ಬಗ್ಗೆ ಚರ್ಚಿಸಿದರು. ಕೈಗಾರಿಕಾ ಟೌನ್‍ಷಿಪ್‍ ಘೋಷಿಸಬೇಕು, ಆಸ್ತಿ ತೆರಿಗೆ ಪರಿಷ್ಕರಿಸಬೇಕು, ಮಹಿಳಾ ಉದ್ಯಮಿಗಳಿಗೆ ಶೇ 4 ಬಡ್ಡಿ ದರದ ಸಾಲ ಯೋಜನೆಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಒತ್ತಾಯಿಸಿದೆ.

ಕನಿಷ್ಠ ವೇತನ ಮಾರ್ಗಸೂಚಿ ಪರಿಷ್ಕರಿಸಿ ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ರೂಪಿಸಬೇಕು, ನಗರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ಕೈಗಾರಿಕಾ ವಸಾಹತುಗಳ ನಿರ್ಮಿಸಬೇಕು, ಅತಿ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಬೇಕು, ಮೂಲಸೌಕರ್ಯ ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ ನೀತಿ ಘೋಷಿಸಬೇಕು ಎಂದೂ ಮನವಿ ಸಲ್ಲಿಸಿದೆ.

ADVERTISEMENT

‘ಶೇ 80ರಷ್ಟು ಗಾರ್ಮೆಂಟ್‌ಗಳು ಚಿಕ್ಕಪೇಟೆಯಲ್ಲಿವೆ. 15 ಸಾವಿರ ಅಂಗಡಿದಾರರು ವ್ಯವಹಾರ ನಡೆಸುತ್ತಿದ್ದು, ಮೂಲಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ ₹ 200 ಕೋಟಿ ಮೀಸಲಿಡಬೇಕು. ಇ–ವೇ ಬಿಲ್‌ನಲ್ಲಿರುವ ಸಮಸ್ಯೆ ಪರಿಹರಿಸಬೇಕು’ ಎಂದು ಕರ್ನಾಟಕ ಸಿದ್ಧ ಉಡುಪುಗಳ ಮತ್ತು ಗಾರ್ಮೆಂಟ್‌ ಅಸೋಸಿಯೇಷನ್‌ ಪರವಾಗಿ ಮಾಜಿ ಅಧ್ಯಕ್ಷ ಸಜ್ಜನ್‌ ರಾಜ್‌ ಮೆಹ್ತಾ ಮನವಿ ಸಲ್ಲಿಸಿದರು. ಸಣ್ಣ ಕೈಗಾರಿಕೆಗಳ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೈಗಾರಿಕೆಗಳ ಸಂಘ ಕೂಡಾ ಮನವಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.