ADVERTISEMENT

ಬಜೆಟ್‌ 2020: ಆದಾಯ ತೆರಿಗೆ ಕಡಿತಗೊಳಿಸಲು ಭಾರೀ ಚರ್ಚೆ, ಮಧ್ಯಮ ವರ್ಗ ಟಾರ್ಗೆಟ್ 

ಅನ್ನಪೂರ್ಣ ಸಿಂಗ್
Published 23 ಜನವರಿ 2020, 8:41 IST
Last Updated 23 ಜನವರಿ 2020, 8:41 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ:ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 8ರಂದು ಚುನಾವಣೆ ನಿಗದಿಯಾಗಿದೆ. ಅದಕ್ಕೂ ಮುನ್ನ ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ. ಮಧ್ಯಮ ವರ್ಗದ ಮತದಾರರನ್ನು ಸೆಳೆಯಲು ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವ ತಂತ್ರ ಬಳಸುವ ಸಾಧ್ಯತೆ ದಟ್ಟವಾಗಿದೆ.

ಬಜೆಟ್‌ ಪ್ರತಿ ಸಿದ್ಧಪಡಿಸುವುದಕ್ಕೂಮುನ್ನ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳ ನಡುವೆ ಹಲವು ಸುತ್ತುಗಳಉನ್ನತ ಮಟ್ಟದ ಚರ್ಚೆ ನಡೆದಿದ್ದು, ಸರ್ಕಾರ ತೆರಿಗೆ ಮಿತಿ ಪರಿಷ್ಕರಿಸಲು ಯೋಜಿಸಿದೆ. ವಾರ್ಷಿಕ ₹ 7 ಲಕ್ಷ ಆದಾಯ ಹೊಂದಿರುವವರಿಗೆ ಶೇ 5 ತೆರಿಗೆ, ₹ 7 ಲಕ್ಷದಿಂದ ₹ 10 ಲಕ್ಷದ ವರೆಗೂ ಆದಾಯ ಇರುವವರು ಶೇ 10, ₹ 10 ಲಕ್ಷದಿಂದ ₹ 20 ಲಕ್ಷ ಆದಾಯ ಪಡೆಯುವವರಿಗೆಶೇ 20ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಒಟ್ಟು ಆದಾಯ ₹ 20 ಲಕ್ಷಕ್ಕೂ ಅಧಿಕವಾದರೆ ಶೇ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ADVERTISEMENT

ಪ್ರಸ್ತುತ ₹ 2.5 ಲಕ್ಷದಿಂದ ₹ 5 ಲಕ್ಷ ವಾರ್ಷಿಕ ಆದಾಯ ಇರುವವರಿಗೆ ಶೇ 5ರಷ್ಟು ತೆರಿಗೆ, ₹ 5 ಲಕ್ಷದಿಂದ ₹ 10 ಲಕ್ಷದ ವರೆಗೂ ಶೇ 20 ಹಾಗೂ ₹ 10 ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವವರು ಶೇ 30 ತೆರಿಗೆ ವಿಧಿಸಲಾಗುತ್ತಿದೆ.

ಫೆಬ್ರುವರಿ 1ರಂದು ಬಜೆಟ್‌ ಮಂಡನೆಯಾಗಲಿದೆ. ಆದಾಯ ತೆರಿಗೆ ಮಿತಿ ಪರಿಷ್ಕರಿಸುವ ಪ್ರಸ್ತಾಪ ಇನ್ನೂ ಚರ್ಚೆಯ ಹಂತದಲ್ಲಿದೆ. ತೆರಿಗೆ ಕಡಿತಗೊಳಿಸುವ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಆರ್ಥಿಕ ಸ್ಥಿತಿಗತಿ ತುಲನೆ ಮಾಡುತ್ತಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ವೈಯಕ್ತಿಕ ಆದಾಯ ತೆರಿಗೆ ಇಳಿಸಲು ಕೋರಿ ಸಾರ್ವಜನಿಕರಿಂದ ಸರ್ಕಾರಕ್ಕೆ ಅತಿ ಹೆಚ್ಚು ಮನವಿ ಸಲ್ಲಿಕೆಯಾಗಿದೆ. ಆರ್ಥಿಕತೆಗೆ ಚೇತರಿಕೆ ನೀಡಲು ಬೇಡಿಕೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವೇತನ ವರ್ಗದವರಿಗೆ ಆದಾಯ ತೆರಿಗೆ ಕಡಿತಗೊಳಿಸಲು ಕೈಗಾರಿಕಾ ಮತ್ತು ವ್ಯಾಪಾರ ಸಂಘಗಳೂ ಒತ್ತಾಯಿಸಿವೆ.

ಕೇಂದ್ರ ಬಜೆಟ್‌ಗಾಗಿ ಆಲೋಚನೆಗಳು, ಯೋಜನೆಗಳ ಬಗ್ಗೆ ತಿಳಿಸುವಂತೆ 130 ಕೋಟಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಕೇಳಿದ್ದರು. ಅದಕ್ಕೂ ಮುನ್ನ 2019ರ ನವೆಂಬರ್‌ನಲ್ಲಿ ಕಂದಾಯ ಇಲಾಖೆಮೊದಲ ಬಾರಿಗೆ ಆದಾಯ ತೆರಿಗೆ, ಅಬಕಾರಿ ತೆರಿಗೆ ದರದಲ್ಲಿ ತರಬಹುದಾದ ಬದಲಾವಣೆಗಳಿಗಾಗಿ ಸಲಹೆ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.