ADVERTISEMENT

ಬಜೆಟ್ ವಿಶ್ಲೇಷಣೆ | ಸವಾಲುಗಳ ನಡುವೆಯೂ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 20:00 IST
Last Updated 5 ಮಾರ್ಚ್ 2020, 20:00 IST
.
.   

ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020–21ನೇ ಸಾಲಿಗೆ ₹2.37 ಲಕ್ಷ ಕೋಟಿಯ ಬಜೆಟ್‌ ಮಂಡಿಸಿದ್ದಾರೆ. ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್‌ ಮಂಡಿಸುವ ಪರಂಪರೆಗೆ ನಾಂದಿ ಹಾಡಿದ ಯಡಿಯೂರಪ್ಪ ಅವರು ಮಂಡಿಸಿರುವ ಏಳನೇ ಬಜೆಟ್‌ ಇದು.

ರಾಜ್ಯದ ಅರ್ಥವ್ಯವಸ್ಥೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿ ಮಂದವಾಗಿರುವ, ಕೇಂದ್ರದ ತೆರಿಗೆಗಳು ಮತ್ತು ಅನುದಾನದಲ್ಲಿ (₹9,434 ಕೋಟಿ) ಖೋತಾ ಆಗಿರುವ ಹಾಗೂ ಪ್ರವಾಹ, ಬರದಿಂದ ತತ್ತರಿಸಿರುವ ರೈತರಿಗೆ ಆದಾಯ ಮತ್ತು ಮೂಲಸೌಕರ್ಯ ಬೆಂಬಲ ನೀಡಬೇಕಿರುವ ಈ ಹೊತ್ತಿನಲ್ಲಿ ಹಣಕಾಸು ಲೆಕ್ಕಾಚಾರ ಬಹುದೊಡ್ಡ ಸವಾಲೇ ಆಗಿತ್ತು.

ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಮೊತ್ತದ (₹3,000 ಕೋಟಿ) ಬಿಡುಗಡೆಯಲ್ಲಿ ವಿಳಂಬವಾಗಿದೆ. ಅಷ್ಟೇ ಅಲ್ಲ, ಈ ಮೊತ್ತ ಬಿಡುಗಡೆ ಆಗುತ್ತದೆಯೇ ಎಂಬ ಬಗ್ಗೆ ಅನಿಶ್ಚಿತ ಸ್ಥಿತಿ ಇದೆ. 15ನೇ ಹಣಕಾಸು ಆಯೋಗದ ವರದಿಯ ಪರಿಣಾಮವಾಗಿ, ಕೇಂದ್ರದ ತೆರಿಗೆ ವರಮಾನ ಹಂಚಿಕೆಯಲ್ಲಿಯೂ ರಾಜ್ಯದ ಪಾಲು (₹9,000 ಕೋಟಿಯಿಂದ ₹11,000 ಕೋಟಿಯಷ್ಟು) ದೊಡ್ಡ ಪ್ರಮಾಣದಲ್ಲಿ ಕಡಿತವಾಗಿದೆ. ಹಾಗಾಗಿ, ಮುಂದಿನ ಐದು ವರ್ಷದಲ್ಲಿ ವರಮಾನ ಸಂಗ್ರಹ ಹಾಗೂ ವಿವಿಧ ವಲಯಗಳ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ರಾಜ್ಯದ ಚಿಂತೆ ಹೆಚ್ಚಲಿದೆ.

ADVERTISEMENT

ಕೃಷಿ ಕ್ಷೇತ್ರ ಮತ್ತು ರೈತರಿಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿಯವರು ತಮ್ಮ ರಾಜಕೀಯ ನಿಷಿತಮತಿಯನ್ನು ಪ್ರದರ್ಶಿಸಿದ್ದಾರೆ. ಉತ್ಪಾದಕತೆಗೆ ಸಂಬಂಧಿಸಿ ಸಣ್ಣ ಮತ್ತು ಅತಿಸಣ್ಣ ರೈತರ ಆದಾಯ ಭದ್ರತೆ ಹಾಗೂ ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಲು ಯತ್ನ ನಡೆಸಿದ್ದಾರೆ.

ಕೃಷಿ ಮತ್ತು ತೋಟಗಾರಿಕಾ ವಲಯಕ್ಕೆ ಈ ವರ್ಷದ ಬಜೆಟ್‌ನಲ್ಲಿ ನೀಡಿರುವ ಅನುದಾನ ಶೇ 12ರಷ್ಟು ಏರಿಕೆಯಾಗಿ, ₹7,889ರಷ್ಟಾಗಿದೆ. ಕೃಷಿ ಮತ್ತು ಸಂಬಂಧಿತ ವಲಯದ ಅಭಿವೃದ್ಧಿ, ರೈತರಿಗೆ ಆದಾಯ ವರ್ಗಾವಣೆ, ನೀರಾವರಿ ಇತ್ಯಾದಿ ಮೂಲಕ ರೈತರ ಕಲ್ಯಾಣಕ್ಕಾಗಿ ಒಟ್ಟು ₹32,295 ಕೋಟಿ ಮೀಸಲು ಇರಿಸಲಾಗಿದೆ. ಸಂಕಷ್ಟಕ್ಕೀಡಾಗಿರುವ ರೈತರ ನೋವು ನಿವಾರಿಸುವಲ್ಲಿ ಯಡಿಯೂರಪ್ಪನವರ ರಾಜಕೀಯ ಚಾಣಾಕ್ಷತನ ಇಲ್ಲಿ ಎದ್ದು ಕಾಣುತ್ತದೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುವ ₹6,000 ನೆರವಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹4,000 ನೆರವು ನೀಡುತ್ತದೆ. ಅದಕ್ಕಾಗಿ, ₹2,600 ಕೋಟಿ ತೆಗೆದಿರಿಸಲಾಗಿದೆ. ಬೆಲೆ ಏರಿಳಿತವನ್ನು ನಿಭಾಯಿಸುವುದಕ್ಕಾಗಿ ₹2,000 ಕೋಟಿ ಮತ್ತು ಬೆಳೆ ವಿಮೆಗಾಗಿ ₹900 ಕೋಟಿ ಮೀಸಲಿರಿಸಲಾಗಿದೆ. ಪ್ರವಾಹ ಮತ್ತು ಬರದಿಂದ ಕಂಗೆಟ್ಟಿರುವುದರಿಂದ ಹಾಗೂ ಕೃಷಿ ಉತ್ಪನ್ನ ಬೆಲೆಯ ಏರಿಳಿತವು ಸದಾ ಸವಾಲಾಗಿ ಇರುವುದರಿಂದ ಇವು ಖಂಡಿತವಾಗಿಯೂ ಸ್ವಾಗತಾರ್ಹ ಕ್ರಮಗಳು.

ಏತ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ₹5,627 ಕೋಟಿ, ಮಹದಾಯಿ ಯೋಜನೆಗೆ ₹500 ಕೋಟಿ ಮತ್ತು ಎತ್ತಿನಹೊಳೆ ಕುಡಿಯುವ ನೀರು ಯೋಜನೆಗೆ ₹1,500 ಕೋಟಿ ನೀಡಲಾಗಿದೆ. ಆದರೆ, ಇದು ಬಹಳ ಸಣ್ಣ ಮೊತ್ತ. ಹಾಗಾಗಿ, ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳು ವಿಳಂಬವಾಗುತ್ತವೆ.

ಬರ ನಿರೋಧಕ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಿಗಾಗಿ ಪ್ರತಿ ಹೆಕ್ಟೇರ್‌ಗೆ ₹20 ಸಾವಿರ ಪ್ರೋತ್ಸಾಹಧನ ನೀಡಿಕೆ ಕೂಡ ಉತ್ತಮ ಕ್ರಮ. ಆದರೆ, ಈ ವಿಚಾರದಲ್ಲಿ ಅನುದಾನ ಹಂಚಿಕೆ ನಿರ್ದಿಷ್ಟವಾಗಿಲ್ಲ. ಹಾಗೆಯೇ, ತೋಟಗಾರಿಕೆಯನ್ನು ಉದ್ಯಮವಾಗಿ ಪರಿವರ್ತಿಸುವ ಉಪಕ್ರಮ ಉತ್ತಮವೇ ಆಗಿದ್ದರೂ ದೊಡ್ಡ ಸಂಖ್ಯೆಯ ರೈತರು ಮತ್ತು ವ್ಯಾಪಾರಿಗಳು ಇದರಿಂದ ಹೊರಗೆ ಉಳಿಯಬಹುದು.ಅದರ ಬದಲಿಗೆ, ಔಪಚಾರಿಕ ವಲಯದಿಂದ ಸಾಲ ದೊರೆಯದ ಮತ್ತು ಭಾರಿ ಬಡ್ಡಿದರದ ಹೊರೆಯಿಂದ ಬಳಲಿರುವ ಕೃಷಿ ಕ್ಷೇತ್ರವನ್ನು ಉದ್ಯಮ ಎಂದು ಘೋಷಿಸುವ ಪ್ರಸ್ತಾವವನ್ನು ಮುಂದಿಡಬಹುದಿತ್ತು.2006ರ ಕೃಷಿ ನೀತಿಯೇ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಹಾಗಿರುವಾಗ, ಕೃಷಿ, ರಸಗೊಬ್ಬರ ಮತ್ತು ಬಿತ್ತನೆ ಬೀಜದ ಹೊಸ ನೀತಿ ತರುವ ಭರವಸೆಗೆ ಹೆಚ್ಚಿನ ಅರ್ಥವೇನೂ ಇಲ್ಲ.

ಲೇಖಕ:ಇನ್ಸ್‌ಟಿಟ್ಯೂಟ್‌ ಫಾರ್‌ ಸೋಷಿಯಲ್‌ ಎಂಡ್‌ ಎಕನಾಮಿಕ್‌ ಚೇಂಜ್‌ನಲ್ಲಿ ಸಂಶೋಧಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.