ADVERTISEMENT

Karnataka Budget 2021: ಅನಗತ್ಯ ಯೋಜನೆಗಳಿಗೆ ಕತ್ತರಿ ಹಾಕಲು ಸೂಚನೆ

ವಿವಿಧ ಇಲಾಖೆಗಳೊಂದಿಗೆ ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 10:53 IST
Last Updated 5 ಮಾರ್ಚ್ 2021, 10:53 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2021–22 ರ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ ಸೋಮವಾರದಿಂದ ಆರಂಭಿಸಲಿದ್ದಾರೆ.

‘ಈ ಸಭೆಗೆ ಹಾಜರಾಗುವ ಮುನ್ನ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಅಗತ್ಯ ಪ್ರಸ್ತಾವನೆಗಳನ್ನು ಮಾತ್ರ ಸಿದ್ಧಪಡಿಸಿಕೊಂಡು ತರಬೇಕು. ಅನಗತ್ಯ ಖರ್ಚು–ವೆಚ್ಚಗಳಿಗೆ ದಾರಿ ಮಾಡಿಕೊಡುವ ಕಾರ್ಯಕ್ರಮ ಮತ್ತು ಯೋಜನೆಗಳಿಗೆ ನಿಮ್ಮ ಹಂತದಲ್ಲೇ ಕತ್ತರಿ ಹಾಕಿ’ ಎಂದು ಹಣಕಾಸು ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ.

ಆರ್ಥಿಕ ಹಿಂಜರಿತ ಮತ್ತು ಕೋವಿಡ್‌ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಬಜೆಟ್‌ ಗಾತ್ರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ತಕ್ಕಂತೆ ಖರ್ಚು–ವೆಚ್ಚಗಳಿಗೆ ನಿರ್ದಾಕ್ಷಿಣ್ಯವಾಗಿ ಕತ್ತರಿ ಹಾಕಬೇಕು ಎಂದು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಇತ್ತೀಚೆಗೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಹೇಳಿದ್ದಾರೆ.

ADVERTISEMENT

2020–21 ಸಾಲಿನ ಆಯವ್ಯಯ ಅಂದಾಜು ₹2.37 ಲಕ್ಷ ಕೋಟಿ ಇತ್ತು. ಹೊಸ ಬಜೆಟ್‌ನ ಗಾತ್ರ ₹ 2 ಲಕ್ಷ ಕೋಟಿಗೆ ಸೀಮಿತಗೊಳಿಸುವ ಸಾಧ್ಯತೆ ಇದ್ದು. ಈ ತಿಂಗಳ ಅಂತ್ಯದ ವೇಳೆಗೆ ತೆರಿಗೆ ಸಂಗ್ರಹ ಹೆಚ್ಚಾದರೆ ಬಜೆಟ್‌ ಗಾತ್ರ ಸ್ವಲ್ಪ ಮಟ್ಟಿಗೆ ಹೆಚ್ಚಿಸಲೂಬಹುದು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರ ತೆರಿಗೆ ಸಂಗ್ರಹಕ್ಕೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡ ಕಾರಣ, ಕಳೆದ ಡಿಸೆಂಬರ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ತೆರಿಗೆ ಸಂಗ್ರಹ ಸ್ವಲ್ಪ ಏರಿಕೆ ಆಗಿತ್ತು. ಆದರೆ, ತೆರಿಗೆ ಸಂಗ್ರಹದಲ್ಲಿ ನಷ್ಟ ಆಗಿರುವುದನ್ನು ತುಂಬಿಕೊಳ್ಳುವುದಕ್ಕಂತೂ ಸಾಧ್ಯವಿಲ್ಲ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಮತ್ತು ಆರ್ಥಿಕ ಹಿಂಜರಿತದ ಪರಿಣಾಮ ತೆರಿಗೆ ಸಂಗ್ರಹ ನೆಲಕಚ್ಚಿತ್ತು ಮತ್ತು ಕೇಂದ್ರದಿಂದ ಬರಬೇಕಾದ ಅನುದಾನವೂ ಬರಲಿಲ್ಲ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವು ಉತ್ತೇಜನ ಕ್ರಮಗಳನ್ನು ಕೈಗೊಂಡಿದ್ದರೂ, ರಾಜ್ಯದ ಆರ್ಥಿಕ ಬೆಳವಣಿಗೆ ಹಳಿ ಮೇಲೆ ತರಲು ಇನ್ನಷ್ಟು ಸಮಯ ಬೇಕಾಗುತ್ತದೆ.

ರಾಜ್ಯಸ್ವದ ಸಂಗ್ರಹಣೆ ಕುಸಿತದಿಂದ ಆಗಿರುವ ನಷ್ಟವನ್ನು ತುಂಬಿ ಅಗತ್ಯ ಕೆಲಸಗಳಿಗೆ ಬೇಕಾಗಿರುವ ಸಂಪನ್ಮೂಲ ಒದಗಿಸಲು ಸಾಲ ಮಾಡುವುದು ಅನಿವಾರ್ಯ ಈ ಕಾರಣಕ್ಕಾಗಿ ಸುಮಾರು ₹33 ಸಾವಿರ ಕೋಟಿ ಹೆಚ್ಚುವರಿ ಸಾಲ ಸೇರಿ ಸುಮಾರು ₹97 ಸಾವಿರ ಕೋಟಿ ಸಾಲ ಪಡೆಯುವ ಅನಿವಾರ್ಯತೆ ಬಂದಿದೆ.

ಯಾವ ಇಲಾಖೆಗಳ ಜತೆ ಚರ್ಚೆ

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ, ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.