ADVERTISEMENT

ಜಿಡಿಪಿ: ಇಳಿಕೆ ಅಂದಾಜು ; ವಿವೇಕಯುತ ಹಣಕಾಸು ನೀತಿಗೆ ಆರ್ಥಿಕ ಸಮೀಕ್ಷೆ ಸಲಹೆ

ವಿವೇಕಯುತ ಹಣಕಾಸು ನೀತಿಗೆ ಆರ್ಥಿಕ ಸಮೀಕ್ಷೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 3:58 IST
Last Updated 1 ಫೆಬ್ರುವರಿ 2023, 3:58 IST
ನಿರ್ಮಲ ಸೀತಾರಾಮನ್‌
ನಿರ್ಮಲ ಸೀತಾರಾಮನ್‌   

ನವದೆಹಲಿ (ಪಿಟಿಐ): ಏಪ್ರಿಲ್‌ 1ರಿಂದ ಶುರುವಾಗುವ ಹೊಸ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಶೇಕಡ 6 ರಿಂದ ಶೇ 6.8ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯು ಅಂದಾಜಿಸಿದೆ.

ಹಿಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡ 8.7ರಷ್ಟು ಬೆಳವಣಿಗೆ ಕಂಡಿತ್ತು. ಮಾರ್ಚ್‌ 31ಕ್ಕೆ ಕೊನೆಗೊಳ್ಳುವ
ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 7ರಷ್ಟು ಇರುವ ನಿರೀಕ್ಷೆ ಇದೆ. ಈ ಎರಡು ವರ್ಷಗಳ ಬೆಳವಣಿಗೆಗೆ ಹೋಲಿಸಿದರೆ ಮುಂದಿನ ವರ್ಷದ ಅಂದಾಜು ಕಡಿಮೆ ಇದೆ. ಹೀಗಿದ್ದರೂ, ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಯು ಭಾರತದ್ದೇ ಆಗಿರಲಿದೆ.

‘ಜಗತ್ತನ್ನು ಕಾಡುತ್ತಿರುವ ಅಸಾಮಾನ್ಯ ಸವಾಲುಗಳು ಭಾರತದಿಂದ ಆಗುವ ರಫ್ತುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ’ ಎಂದು ಸಮೀಕ್ಷೆಯು ಅಂದಾಜಿಸಿದೆ. ಸಮೀಕ್ಷೆಯ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿದರು.

ADVERTISEMENT

ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ ತಂಡವು ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿದೆ. ‘2020ರ ನಂತರದಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯು ಕನಿಷ್ಠ ಮೂರು ಆಘಾತಗಳನ್ನು ಎದುರಿಸಿದೆ’ ಎಂದು ವರದಿ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಜಾಗತಿಕ ಉತ್ಪಾದನೆ ಕುಸಿಯಿತು, ರಷ್ಯಾ–ಉಕ್ರೇನ್ ಯುದ್ಧವು ಜಗತ್ತಿನಾದ್ಯಂತ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಯಿತು, ಹಣದುಬ್ಬರ ಪ್ರಮಾಣವನ್ನು ತಗ್ಗಿಸಲು ಅಮೆರಿಕದ ಫೆಡರಲ್ ರಿಸರ್ವ್‌ ಮುಂದಾಳತ್ವದಲ್ಲಿ ಜಗತ್ತಿನಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ರೆಪೊ ದರ ಹೆಚ್ಚಿಸಿದವು ಎಂದು ಸಮೀಕ್ಷೆಯು ವಿವರಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.8ರಷ್ಟು ಇರಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಈ ಪ್ರಮಾಣದ ಚಿಲ್ಲರೆ ಹಣದುಬ್ಬರ ದರವು ಖಾಸಗಿ ಹೂಡಿಕೆಗಳು ಹಾಗೂ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಹಾಳು ಮಾಡುವಂಥದ್ದಲ್ಲ ಎಂದು ಸಮೀಕ್ಷೆಯು ಭರವಸೆ ವ್ಯಕ್ತಪಡಿಸಿದೆ.

ಬೇಡಿಕೆ ಹೆಚ್ಚಾಗಿರುವ ಕಾರಣದಿಂದಾಗಿ ಉದ್ಯೋಗದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಹೀಗಿದ್ದರೂ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಬೇಕು ಎಂದಾದರೆ ಖಾಸಗಿ ಹೂಡಿಕೆಗಳು ಹೆಚ್ಚಾಗುವುದು ಅಗತ್ಯ ಎಂದು ಹೇಳಿದೆ.

ಸಿಗುವುದೇ ಹೆಚ್ಚಿನ ತೆರಿಗೆ ವಿನಾಯಿತಿ?

ನವದೆಹಲಿ (ಪಿಟಿಐ): ಮಧ್ಯಮ ವರ್ಗಕ್ಕೆ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿಗಳು ಇನ್ನಷ್ಟು ಸಿಗಬಹುದು ಎಂಬ ನಿರೀಕ್ಷೆ ತೀವ್ರವಾಗಿರುವ ಹೊತ್ತಿನಲ್ಲಿ ಆರ್ಥಿಕ ಸಮೀಕ್ಷೆ ವರದಿಯು, ‘ಹಣಕಾಸಿನ ವಿವೇಕದ ಹಾದಿಯಲ್ಲಿ ಸಾಗಬೇಕು. ಇದರಿಂದ ಬಡ್ಡಿ ದರಗಳು ಕಡಿಮೆ ಮಟ್ಟದಲ್ಲಿ ಉಳಿದು, ಎಲ್ಲ ವರ್ಗಗಳಿಗೂ ಅನುಕೂಲ ಆಗಲಿದೆ’ ಎಂದು ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

ಆರ್ಥಿಕ ವಿಚಾರಗಳಲ್ಲಿ ವಿವೇಕಯುತವಾಗಿ ನಡೆದುಕೊಳ್ಳುವುದರಿಂದ ಅನಿಶ್ಚಿತ ಸಂದರ್ಭಗಳಲ್ಲಿ ಸೂಕ್ತ ಹಣಕಾಸಿನ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ ಎಂದು ಅದು ಹೇಳಿದೆ.

‘ಹಣಕಾಸಿನ ವಿಚಾರಗಳಲ್ಲಿ ಶಿಸ್ತು ಪಾಲಿಸಿದರೆ, ಕಡಿಮೆ ಬಡ್ಡಿ ದರದ ಕಾರಣದಿಂದಾಗಿ ಅರ್ಥ ವ್ಯವಸ್ಥೆಯ ಎಲ್ಲ ವರ್ಗಗಳಿಗೂ ಉತ್ತೇಜನ ಸಿಕ್ಕಂತೆ ಆಗುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಹಣಕಾಸಿನ ಶಿಸ್ತು ಪಾಲನೆಯಿಂದ ಶಿಕ್ಷಣ ಸಾಲ, ಗೃಹ ಸಾಲ, ವಾಹನ ಸಾಲ ಮತ್ತು ವಾಣಿಜ್ಯ ಉದ್ದೇಶದ ಸಾಲಗಳ ಬಡ್ಡಿಯನ್ನು ಕಡಿಮೆ ಮಟ್ಟದಲ್ಲಿ ಇರಿಸಲು ಸಾಧ್ಯವಾಗುತ್ತದೆ. ಆಗ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ’ ಎಂದು ವರದಿಯು ಅಭಿಪ್ರಾಯ ವ್ಯಕ್ತಪಡಿಸಿದೆ.

ಹೀಗಿದ್ದರೂ, ಹೆಚ್ಚಿನ ಬಡ್ಡಿ ದರದ ಪರಿಸ್ಥಿತಿಯು ಹೆಚ್ಚು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೂಡ ಸಮೀಕ್ಷೆಯ ವರದಿಯು ಸೂಚ್ಯವಾಗಿ ಹೇಳಿದೆ.

ಸಮೀಕ್ಷೆ ಶಿಫಾರಸು

ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲು, ಹೆಚ್ಚಿನ ವೇಗವನ್ನು ಕಾಯ್ದುಕೊಳ್ಳಲು ಪರವಾನಗಿ, ತಪಾಸಣೆ ಹಾಗೂ ನಿಯಮಪಾಲನೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕು ಎಂದು ಆರ್ಥಿಕ ಸಮೀಕ್ಷೆಯು ಶಿಫಾರಸು ಮಾಡಿದೆ.

ಬೆಳಿಗ್ಗೆ 11ಕ್ಕೆ ಕೇಂದ್ರ ಬಜೆಟ್ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023–24ನೆಯ ಸಾಲಿನ ಬಜೆಟ್‌ಅನ್ನು ಲೋಕಸಭೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.