ADVERTISEMENT

ಬಜೆಟ್‌; ಮಹದಾಯಿಗೆ ಸಿಗುವ ಪಾಲೆಷ್ಟು?

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಜೆಟ್‌ ಮೇಲೆ ಜಿಲ್ಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆ

ಶ್ರೀಕಾಂತ ಕಲ್ಲಮ್ಮನವರ
Published 4 ಮಾರ್ಚ್ 2020, 7:37 IST
Last Updated 4 ಮಾರ್ಚ್ 2020, 7:37 IST
ಬೆಳಗಾವಿಯ ಸುವರ್ಣ ವಿಧಾನಸೌಧ
ಬೆಳಗಾವಿಯ ಸುವರ್ಣ ವಿಧಾನಸೌಧ   

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರವು ಈ ಭಾಗದ ಜನರ ಬಹುದಿ ನಗಳ ನಿರೀಕ್ಷೆಯನ್ನು ಈಡೇರಿಸಿದೆ. ಅದರ ಬೆನ್ನಲ್ಲೆ, ಈಗ ಮಹದಾಯಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಕನಸುಗಳು ಗರಿಗೆದರಿವೆ. ಇದಕ್ಕಾಗಿ ₹ 2,000 ಕೋಟಿ ಅನುದಾನದ ಅವಶ್ಯಕತೆ ಇದ್ದು, 2020–21ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇದೇ 5ರಂದು ಬಜೆಟ್‌ ಮಂಡಿಸಲಿದ್ದು, ಜಿಲ್ಲೆಯ ಜನರು ಮಹದಾಯಿ ಸೇರಿದಂತೆ ಹಲವು ಕೊಡುಗೆಗಳ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಹರಿ ಯುವ ಮಹದಾಯಿ ನದಿಯ ಜಲಮೂಲ ಗಳಾದ ಕಳಸಾ ನಾಲಾ ಹಾಗೂ ಬಂಡೂರಿ ನಾಲಾಗಳಿಂದ ನೀರನ್ನು ಮಲಪ್ರಭಾ ನದಿಗೆ ಜೋಡಿಸುವ ಯೋಜನೆ ಇದಾಗಿದೆ. ಈ ಯೋಜನೆ ಅನುಷ್ಠಾನವಾದರೆ ಮಲಪ್ರಭಾ ನದಿಗೆ ಸುಮಾರು 4 ಟಿ.ಎಂ.ಸಿ ನೀರು ಹರಿಯಲಿದೆ. ಇದರಿಂದ ನದಿ ಮೈದುಂಬಿ ಹರಿಯಲಿದೆ.

ADVERTISEMENT

‘ಕಳಸಾ ನಾಲಾದ ಸುರಂಗ ಮಾರ್ಗವು ಬಹುತೇಕ ಪೂರ್ಣಗೊಂ ಡಿದೆ, ಬಂಡೂರಿ ನಾಲಾ ಸುರಂಗ ಮಾರ್ಗದ ಕಾಮಗಾರಿ ಇನ್ನಷ್ಟೇ ಕೈಗೊಳ್ಳಬೇಕಾಗಿದೆ. ಮಲಪ್ರಭಾ ಕಾಲುವೆಗಳ ನಿರ್ಮಾಣ ಕಾಮಗಾರಿ ಯೂ ನಡೆಸಬೇಕಾಗಿದೆ. ಇವೆಲ್ಲ ಕಾಮಗಾರಿಗಳಿಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ನಮ್ಮ ಮೊದಲ ಬೇಡಿಕೆ ಇರುವುದು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಹಣ ಸಿಗಲಿ’ ಎಂದು ಜಿಲ್ಲಾ ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಸುವರ್ಣ ವಿಧಾನಸೌಧ ಸದ್ಬಳಕೆ: ಸುಮಾರು ₹ 480 ಕೋಟಿ ವೆಚ್ಚ ಮಾಡಿ ನಿರ್ಮಿಸಲಾಗಿರುವ ಸುವರ್ಣ ವಿಧಾನಸೌಧದ ಸದ್ಬಳಕೆ ಮಾಡಲು ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವ ಕೂಗು ಮತ್ತೆ ಕೇಳಿಬಂದಿದೆ.

ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸ ಬೇಕು. ನೀರಾವರಿ ಸೇರಿದಂತೆ ಇನ್ನಿತರ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಹಾಗೂ ಪ್ರಾದೇಶಿಕ ವಲಯದ ಕಚೇರಿಗಳನ್ನೂ ಇಲ್ಲಿಗೆ ಸ್ಥಳಾಂತರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.

ಸಾಲ ಮನ್ನಾ ಯೋಜನೆ: ನೆರೆ ಹಾವಳಿಯಿಂದಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದಾಗಿ ಸಾಲದ ಸುಳಿಗೆ ಸಿಲುಕಿ, ಪರದಾಡುತ್ತಿದ್ದಾರೆ. ಇವ ರಲ್ಲಿ ಬಹಳಷ್ಟು ರೈತರು ಕ್ರೆಡಿಟ್‌ ಸೊಸೈಟಿ ಹಾಗೂ ಕೋ–ಆಪರೇಟಿವ್‌ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಸಲಾಗದೇ ಕಷ್ಟದಲ್ಲಿ ಸಿಲುಕಿದ್ದಾರೆ. ಇವರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ರೈತ ಮುಖಂಡ ಬಾಬಾಗೌಡ ಪಾಟೀಲ ಆಗ್ರಹಿಸಿದ್ದಾರೆ.

ರೈಲು ಮಾರ್ಗಕ್ಕೆ ಜಮೀನು: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪ್ರಯತ್ನದ ಫಲವಾಗಿ ಬೆಳಗಾವಿ– ಚನ್ನಮ್ಮನ ಕಿತ್ತೂರು– ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ರೈಲು ಮಾರ್ಗ ಅಳವಡಿಸಲು ಜಮೀನು ನೀಡುವ ಹಾಗೂ ಆರ್ಥಿಕ ಸಹಾಯ ನೀಡುವ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಸಾರ್ವಜನಿಕರು ಕೋರಿಕೊಂಡಿದ್ದಾರೆ.

‘ಘಟಪ್ರಭಾ ಅಭಿವೃದ್ಧಿ; ಟೆಂಡರ್‌ ಹಂತದಲ್ಲಿ’
‘ಘಟಪ್ರಭಾ ಯೋಜನಾ ಕ್ಷೇತ್ರದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ 2019–20ರ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿತ್ತು. ಅದರ ಡಿಪಿಆರ್‌ ತಯಾರಿಸಲಾಗಿದ್ದು, ಸರ್ಕಾರದಿಂದ ಅನುಮೋದನೆ ಕೂಡ ಸಿಕ್ಕಿದೆ. ಟೆಂಡರ್‌ ಕರೆಯುವ ಹಂತದಲ್ಲಿದೆ’ ಎಂದು ಹಿರಿಯ ನೀರಾವರಿ ಅಧಿಕಾರಿಗಳು ತಿಳಿಸಿದರು.

ಅರಭಾವಿ ಕ್ಷೇತ್ರದ ಕಲ್ಮಡ್ಡಿ ಏತ ನೀರಾವರಿ ಯೋಜನೆಯು ಕೂಡ ಟೆಂಡರ್‌ ಹಂತದಲ್ಲಿದೆ. ಅಥಣಿ ತಾಲ್ಲೂಕಿನ 23 ಕೆರೆಗಳಿಗೆ ಕೃಷ್ಣಾ ನದಿ ನೀರು ತುಂಬಿಸುವ ಹಾಗೂ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರು ನಡುವಿನ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗೆ ಕಳೆದ ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದುವರೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿಲ್ಲ.

**

ಚಿಕ್ಕೋಡಿ ಜಿಲ್ಲೆ ಘೋಷಿಸಲಿ
18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯು ದೊಡ್ಡ ಜಿಲ್ಲೆಯಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜಿಲ್ಲಾ ಕೇಂದ್ರವಾದ ಬೆಳಗಾವಿಗೆ ಹೋಗಿಬರಲು ಗಡಿಭಾಗದ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಆಡಳಿತವು ಬಿಗಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಅಧಿಕಾರ ವೀಕೇಂದ್ರಿಕರಣವಾಗಬೇಕು. ಸಣ್ಣ ಸಣ್ಣ ಜಿಲ್ಲೆಗಳಾದಾಗ, ಆಡಳಿತ ಬಿಗಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯನ್ನು ವಿಭಜಿಸಿ, ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ಘೋಷಿಸಬೇಕು.
-ಬಿ.ಆರ್‌. ಸಂಗಪ್ಪಗೋಳ, ಚಿಕ್ಕೋಡಿ ಜಿಲ್ಲಾ ಹೋರಾಟಗಾರ

**

ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ನೀಡಲಿ
ಅತಿವೃಷ್ಟಿ ಹಾಗೂ ನೆರೆಯಿಂದ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಂಪೂರ್ಣವಾಗಿ ಸಿಕ್ಕಿಲ್ಲ. ಮನೆ ಕಳೆದುಕೊಂಡವರಿಗೆ ಮೊದಲ ಹಂತದ ಚೆಕ್‌ ಮಾತ್ರ ಬಂದಿದೆ. ಎರಡು ಹಾಗೂ ಮೂರನೇ ಹಂತದ ಚೆಕ್‌ ಬಂದಿಲ್ಲ. ಮನೆಗಳ ನಿರ್ಮಾಣ ಕೂಡ ಪ್ರಗತಿಯಲ್ಲಿಲ್ಲ. ಬೆಳೆ ಪರಿಹಾರ ಹಾಗೂ ಮನೆ ಪರಿಹಾರ ನೀಡಲು ವಿಶೇಷ ಪ್ಯಾಕೇಜ್‌ ಘೋಷಿಸಬೇಕು.
-ಬಾಬಾಗೌಡ ಪಾಟೀಲ, ರೈತ ಮುಖಂಡ

**
ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ
ನವೋದ್ಯಮಿ ಹಾಗೂ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಆರ್ಥಿಕ ನೆರವನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಬೆಳಗಾವಿ ಹಾಗೂ ಸುತ್ತಮುತ್ತಲು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವಂತಹ ಯೋಜನೆ ನೀಡಬೇಕು.
-ಸೋನಾಲಿ ಸರ್ನೊಬತ್‌, ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.