ADVERTISEMENT

ರಾಜ್ಯ ಬಜೆಟ್ 2022: ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದೇನು?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 10:21 IST
Last Updated 4 ಮಾರ್ಚ್ 2022, 10:21 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ 2022–23ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಕೆಲವು ಕೊಡುಗೆಗಳನ್ನು ನೀಡಿದ್ದಾರೆ.

₹ 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಆಸ್ಪತ್ರೆ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಲಾಗಿದೆ. ಇದರಿಂದ ಈ ಭಾಗದ ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲವಾಗಲಿದೆ. ಈವರೆಗೆ ಇಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇರಲಿಲ್ಲ.

ಮಹದಾಯಿ ನ್ಯಾಯಮಂಡಳಿಯ ತೀರ್ಪಿನ ಅನ್ವಯ ಹಂಚಿಕೆಯಾದ ನೀರಿನ ಬಳಕೆಗೆ ರಾಜ್ಯದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ಅಗತ್ಯ ತೀರುವಳಿಗಳನ್ನು ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದಿರುವ ಮುಖ್ಯಮಂತ್ರಿ, ಅನುಷ್ಠಾನಕ್ಕೆ ಪ್ರಸಕ್ತ ಸಾಲಿನಲ್ಲಿ ₹ 1000 ಕೋಟಿ ಅನುದಾನ ಘೋಷಿಸಿದ್ದಾರೆ.

ADVERTISEMENT

₹ 150 ಕೋಟಿ ವೆಚ್ಚದಲ್ಲಿ ಜಾಗತಿಕ ಎಂಜಿನಿಯರಿಂಗ್‌ ತಂತ್ರಜ್ಞಾನ ವಿನ್ಯಾಸ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಲಾಗಿದೆ.

₹ 927 ಕೋಟಿ ವೆಚ್ಚದ ಧಾರವಾಡ–ಕಿತ್ತೂರು–ಬೆಳಗಾವಿ ನೂತನ ರೈಲು ಮಾರ್ಗ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ.

ಅಥಣಿ ತಾಲ್ಲೂಕಿನಲ್ಲಿ ನೂತನ ಕೃಷಿ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ಜಾಂಬೋಟಿ ಜೇನು ಬ್ರ್ಯಾಂಡಿಂಗ್

ಖಾನಾಪುರ ತಾಲ್ಲೂಕಿನ ಜಾಂಬೋಟಿ ಜೇನು ತುಪ್ಪ ಜನಪ್ರಿಯಗೊಳಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಈ ಯೋಜನೆಗೆ ₹ 5 ಕೋಟಿ ನೀಡಲಾಗಿದೆ (ಇದರಲ್ಲಿ ಕೊಡಗು ಕೂಡ ಸೇರಿದೆ).

ಬೆಳಗಾವಿಯ ಪ್ರಮುಖ ಸೀರೆ ಬ್ರ್ಯಾಂಡ್‌ ಆಗಿರುವ ‘ಶಹಾಪುರ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ’ ಪಡಿಸಲಾಗುವುದು ಎಂದು ಘೋಷಿಸಿರುವುದರಿಂದ, ಆ ಸೀರೆಗಳನ್ನು ತಯಾರಿಸುವ ನೇಕಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಖಾಸಗಿ, ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಯೋಜನೆಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ ಬಗ್ಗೆ ಹೇಳಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಮತ್ತು ಇತರ ವರ್ಗಗಳ ಮಕ್ಕಳಿಗೆ ತಲಾ 1,000 ಸಾಮರ್ಥ್ಯದ ಬಹುಮಹಡಿ ದೀನದಯಾಳ್ ಸೌಹಾರ್ದ ವಿದ್ಯಾರ್ಥಿನಿಲಯ ಸಮುಚ್ಛಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಜಿಲ್ಲೆಯ ಒಂದು ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎಪಿಜೆ ಅಬ್ದುಲ್‌ ಕಲಾಂ ವಸತಿ ಶಾಲೆಯಾಗಿ ನಾಮಕರಣ ಮಾಡಿ, ಅಲ್ಲಿ ಪದವಿಪೂರ್ವ ತರಗತಿಗಳನ್ನು ಪ್ರಾರಂಭಿಸಲಾಗುವುದು ಮತ್ತು ಸಿಬಿಎಸ್‌ಇ ಮಾನ್ಯತೆ ಪಡೆಯಲು ಕ್ರಮ ವಹಿಸಲಾಗುವುದು ಎಂದು ಹೇಳಲಾಗಿದೆ.

ಎಲ್ಲ ಕಾರಾಗೃಹಗಳಲ್ಲಿ ಅತ್ಯಾಧುನಿಕ ಮಾದರಿಯ ಉಪಕರಣ, ಮೊಬೈಲ್‌ ಜಾಮರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ. ಈ ಸೌಲಭ್ಯವು ಬೆಳಗಾವಿಯಲ್ಲಿರುವ ಕೇಂದ್ರ ಕಾರಾಗೃಹಕ್ಕೂ ಸಿಗುವ ನಿರೀಕ್ಷೆಇದೆ.

ಎಲ್ಲ ತಾಲ್ಲೂಕುಗಳಲ್ಲೂ ‘ನೀಟ್‌’ ಪರೀಕ್ಷಾ ತರಬೇತಿ ಕೊಡಲಾಗುವುದು ಎಂದು ತಿಳಿಸಲಾಗಿದ್ದು, ಜಿಲ್ಲೆಯ 15 ತಾಲ್ಲೂಕುಗಳ ಅಭ್ಯರ್ಥಿಗಳಿಗೂ ಅನುಕೂಲ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ನಡೆಯುತ್ತಿರುವ ಸಹಕಾರಿ ವಲಯದ ಆಸ್ಪತ್ರೆಗಳನ್ನು ಬಲಪಡಿಸಲು ವಿಶೇಷ ನೆರವು ನೀಡಲಾಗುವುದು ಎಂದು ಘೋಷಿಸಲಾಗಿದೆ. ದೇಶದ ಮೊದಲ ಸಹಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಘಟಪ್ರಭಾದ ಜೆ.ಜಿ. ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ನೆರವು ಸಿಗಬಹುದು.

* ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಹಾಗೂ ಬೆಳಗಾವಿ ತಾಲ್ಲೂಕಿನ ಕಿಣಯೆ ನಾಲಾಗಳ ಆಧುನೀಕರಣ ಯೋಜನೆ ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ.

* ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಬೆಳಗಾವಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ.

* ಕುಡಚಿ–ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಚೆನ್ನೆ-ಬೆಂಗಳೂರು-ಮುಂಬೈ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವ ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಲಾಗಿದೆ.

* ಹಿಡಕಲ್‌ನಲ್ಲಿ ಪಕ್ಷಿಧಾಮ, ಚಿಟ್ಟೆ ಉದ್ಯಾನ

* ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ಒಳಗೊಂಡ ಬಹುಮಹಡಿ ಕಾರ್ಖಾನೆಯ ಪರಿಕಲ್ಪನೆಯ ಅವಶ್ಯಕ ಪ್ಲಗ್ ಮತ್ತು ಪ್ಲೇ ಮೂಲ ಸೌಲಭ್ಯಗಳನ್ನು ಬೆಳಗಾವಿಯಲ್ಲಿ ಕೇಂಧ್ರ ಸರ್ಕಾರದ ಟಿಐಇಎಸ್‌ ಯೋಜನೆ ಸಹಯೋಗದೊಂದಿಗೆ ರೂಪಿಸಲಾಗುವುದು.

* ಜಿಲ್ಲೆಯ ಹಿಡಕಲ್‌ ಅಣೆಕಟ್ಟು ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಪಕ್ಷಿಗಳ ಹಾಗೂ ಚಿಟ್ಟೆಗಳ ಸಂರಕ್ಷಣೆಗಾಗಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಕ್ಷಿಧಾಮ ಹಾಗೂ ಚಿಟ್ಟೆಗಳ ಉದ್ಯಾನ ಸ್ಥಾಪನೆ.

*ಬಂದೋಬಸ್ತ್ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಂಗಲು ಅನುಕೂಲವಾಗುವಂತೆ ಬೆಳಗಾವಿಯಲ್ಲಿ ಬ್ಯಾರಕ್ ನಿರ್ಮಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.