ADVERTISEMENT

ಜಿಲ್ಲೆ ಮರೆತ ಸರ್ಕಾರ: ವಿಶೇಷ ಯೋಜನೆ ಇಲ್ಲ

ಕಾಫಿ ನಾಡಿನ ಜನರಿಗೆ ನಿರಾಸೆ ಮೂಡಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಅದಿತ್ಯ ಕೆ.ಎ.
Published 5 ಮಾರ್ಚ್ 2020, 19:30 IST
Last Updated 5 ಮಾರ್ಚ್ 2020, 19:30 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ರಾಜ್ಯ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಕಾಫಿ ನಾಡಿನ ಜನರಿಗೆ, ತೀವ್ರ ನಿರಾಸೆ ಉಂಟಾಗಿದೆ. ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೊಡಗು ಜಿಲ್ಲೆಗೆ ’ಬಂಪರ್‌ ಕೊಡುಗೆ‘ ಸಿಗಲಿದೆ ಎಂದೇ ಭಾವಿಸಿದ್ದ ಜಿಲ್ಲೆಯ ಜನರಿಗೆ ಈಗ ನಿರಾಸೆಯಾಗಿದೆ. ಕೊಡಗು ಬಿಜೆಪಿ ಭದ್ರಕೋಟೆ. ಹೀಗಾಗಿಯೇ ನಿರೀಕ್ಷೆ ಬೆಟ್ಟದಷ್ಟಿತ್ತು. ಆ ನಿರೀಕ್ಷೆ ಹುಸಿಗೊಂಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ನಿರ್ದಿಷ್ಟವಾದ ಯೋಜನೆಯನ್ನೂ ನೀಡುವ ಮನಸ್ಸು ಮಾಡಿಲ್ಲ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.

ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದರು. ಬೋಪಯ್ಯ ಅವರು ದೀರ್ಘವಾದ ಪತ್ರವನ್ನೇ ಬರೆದಿದ್ದರು. ಅದಕ್ಕೂ ಬಜೆಟ್‌ನಲ್ಲಿ ಕಿಮ್ಮತ್ತು ಸಿಕ್ಕಿಲ್ಲ.

ADVERTISEMENT

ಕೇಂದ್ರ ಹಾಗೂ ರಾಜ್ಯ ಆರ್ಥಿಕ ಸಂಕಷ್ಟದಲ್ಲಿದೆ ಎಂಬುದು ಕಾರಣವಾದರೂ ಕೊಡಗು ಸಹ ಮಳೆಯಿಂದ ತತ್ತರಿಸಿ ಹೋಗಿದೆ. ಎರಡು ವರ್ಷದಿಂದ ಹಲವರು ಸಂತ್ರಸ್ತರಾಗಿದ್ದರು. ಅವರಿಗೆ ಇನ್ನೂ ಶಾಶ್ವತ ಸೂರು ಸಿಕ್ಕಿಲ್ಲ. ಅವರ ಪುನರ್ವಸತಿಗೆ ಹೊಸ ಯೋಜನೆ ಪ್ರಕಟಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಅದರ ಪ್ರಸ್ತಾಪವೇ ಇಲ್ಲ.

‘ವಿಶೇಷ ಪ್ಯಾಕೇಜ್‌’ ಮರೆತ ಸಿ.ಎಂ:ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಜಿಲ್ಲೆಗೆ ’ವಿಶೇಷ ಪ್ಯಾಕೇಜ್‌ ಘೋಷಣೆ‘ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರು ಪ್ಯಾಕೇಜ್‌ ಮುಂದುವರಿಸಿದ್ದರು. ಈಗ ಅದರ ಪ್ರಸ್ತಾಪ ಇಲ್ಲ.

ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ‘ವಿಶೇಷ ಪ್ಯಾಕೇಜ್’ಗೆ ₹ 100 ಕೋಟಿ, ಗೋಣಿಕೊಪ್ಪದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹ 1 ಕೋಟಿ, ಜಿಲ್ಲೆಯ ವಿವಿಧ ಜನಾಂಗಗಳು ನಡೆಸುತ್ತಿರುವ ಹಾಕಿ, ಕ್ರಿಕೆಟ್ ಮುಂತಾದ ಕ್ರೀಡೆಗಳಿಗೆ ₹ 1 ಕೋಟಿ, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿ ಅಳವಡಿಕೆಗೆ ₹ 25 ಕೋಟಿ, ಕೊಡವ, ಅರೆಭಾಷೆಗೌಡ, ಒಕ್ಕಲಿಗ, ಬಿಲ್ಲವ, ಬಂಟ ಮತ್ತಿತರ ಹಿಂದುಳಿದ ಸಮುದಾಯ ಭವನಗಳ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ ₹ 15 ಕೋಟಿ ನೀಡುವಂತೆ ಬೋಪಯ್ಯ ಕೋರಿದ್ದರು. ಅದರಲ್ಲಿ ಒಂದಕ್ಕೂ ಮನ್ನಣೆ ಸಿಕ್ಕಿಲ್ಲ.

ಮೈಸೂರು ಹಾಗೂ ಕುಶಾಲನಗರದ ನಡುವೆ ರೈಲ್ವೆ ಯೋಜನೆಗೆ ಅನುದಾನ ಮೀಸಲಿಡುವ ನಿರೀಕ್ಷೆಯಿತ್ತು. ಅದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಆಗಿಲ್ಲ.

ಸಿಕ್ಕಿದಾದರೂ ಏನು?: ಬೆಟ್ಟದಷ್ಟು ನಿರೀಕ್ಷೆಯಿದ್ದರೂ ಸಿಕ್ಕಿದ್ದು ಮಾತ್ರ ಅಲ್ಪ. ಗೋಣಿಕೊಪ್ಪಲಿಗೆ ಅಗ್ನಿಶಾಮಕ ದಳ ಮಂಜೂರಾತಿ ಬಿಟ್ಟರೆ ಬೇರೇನೂ ಇಲ್ಲ. ಅಂಗನವಾಡಿ ಕೇಂದ್ರಗಳ ಪುನರ್‌ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯ ಮಟ್ಟಿಗೆ ಅದು ಅನುಕೂಲ. ಕಾರ್ಮಿಕರ ಮಕ್ಕಳ ಪಾಲನೆಗೆ ಕಟ್ಟಡ ನಿರ್ಮಿಸುವ ಯೋಜನೆ ಘೋಪಿಸಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಕೊಡಗು ಜಿಲ್ಲೆಗೆ ಕೂಲಿ ಅರಸಿ ಸಾಕಷ್ಟು ಮಂದಿ ಬರುತ್ತಾರೆ. ಜಿಲ್ಲೆಗೂ ಒಂದು ಕಟ್ಟಡ ಮಂಜೂರಾದರೆ ಅನುಕೂಲ.

ರಾಜ್ಯದ 17 ನದಿ ಪಾತ್ರಗಳ ಮಾಲಿನ್ಯ ತಡೆಗೆ ₹ 1,690 ಕೋಟಿ ಅನುದಾನ ಘೋಷಿಸಲಾಗಿದೆ. ಕಾವೇರಿ ನದಿಯೂ ಬೇಸಿಗೆಯಲ್ಲಿ ಕಲುಷಿತಗೊಳ್ಳುತ್ತದೆ. ಅದಕ್ಕೂ ಅನುದಾನ ಲಭ್ಯವಾದರೆ ಕಾವೇರಿ ನದಿ ಪುನಶ್ಚೇತನ ಆಗಲಿದೆ.

ಬೆಳೆಗಾರರಿಗೆ ನಿರಾಸೆ:ಕಾಫಿ ಬೆಳೆಗಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಒಂದು ಬೇಡಿಕೆಯೂ ಈಡೇರಿಲ್ಲ. ಗ್ರಾಮೀಣ ರಸ್ತೆಗಳ ಅಬಿವೃದ್ಧಿಗೆ ಅನುದಾನ ಸಿಗುವ ನಿರೀಕ್ಷೆಯೂ ಹುಸಿಯಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ಗಳಲ್ಲಿ ಸಾಕಷ್ಟು ಯೋಜನೆಗಳು ಸಿಕ್ಕಿದ್ದವು. ಆದರೆ, ಯಡಿಯೂರಪ್ಪ ಅವರು ಜಿಲ್ಲೆಯನ್ನೇ ಕಡೆಗಣಿಸಿದ್ದಾರೆ ಎಂದು ಆಪಾದನೆ ವಿರೋಧ ಪಕ್ಷಗಳ ಮುಖಂಡರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.