ADVERTISEMENT

Union Budget 2025: 50 ಪ್ರವಾಸಿ ತಾಣಗಳ ಅಭಿವೃದ್ಧಿ; ₹2,541 ಕೋಟಿ

₹2,541 ಕೋಟಿ: 2025–26ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿರುವ ಹಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 13:50 IST
Last Updated 1 ಫೆಬ್ರುವರಿ 2025, 13:50 IST
<div class="paragraphs"><p> ಪ್ರವಾಸಿ ತಾಣ.</p></div>

ಪ್ರವಾಸಿ ತಾಣ.

   

ನವದೆಹಲಿ: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ವಿವಿಧ ರಾಜ್ಯಗಳ ಸಹಕಾರದೊಂದಿಗೆ ದೇಶದ 50 ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಘೋಷಣೆ ಮಾಡಲಾಗಿದೆ. 

ಪ್ರವಾಸೋದ್ಯಮ ಮೂಲಸೌಕರ್ಯ ಹೆಚ್ಚಿಸುವುದು, ದೇಶಿ ಮತ್ತು ಅಂತರರಾಷ್ಟ್ರೀಯ ಪ್ರಯಾಣವನ್ನು ಉತ್ತೇಜಿಸುವುದು ಹಾಗೂ ಪ್ರವಾಸಿಗರು, ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ಪ್ರವಾಸೋದ್ಯಮ ಸಚಿವಾಲಯಕ್ಕೆ 2025–26ರ ಹಣಕಾಸು ವರ್ಷದಲ್ಲಿ ₹2,541.06 ಕೋಟಿ ಹಂಚಿಕೆ ಮಾಡಲಾಗಿದೆ. 2024-25ರಲ್ಲಿನ ಪರಿಷ್ಕೃತ ಅಂದಾಜು ಮೊತ್ತಕ್ಕಿಂತ (₹850.36 ಕೋಟಿ) ಗಣನೀಯ ಏರಿಕೆಯಾಗಿದೆ.

ADVERTISEMENT

ಮುದ್ರಾ ಸಾಲ ಯೋಜನೆಯನ್ನು ವಿಸ್ತರಿಸುವ ಮೂಲಕ ಸರ್ಕಾರವು ಹೋಂಸ್ಟೇಗಳನ್ನು ಉತ್ತೇಜಿಸುವ ಮತ್ತು ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸುವ ಕೆಲಸ ಮಾಡಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

‘ಪ್ರವಾಸೋದ್ಯಮದ ಉತ್ತೇಜನಕ್ಕೆ ಅಗತ್ಯ ಮೂಲಸೌಕರ್ಯ ನಿರ್ಮಿಸಲು ಜಮೀನು ಒದಗಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ವಹಿಸಿಕೊಳ್ಳಲಿವೆ. ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಹೋಟೆಲ್‌ಗಳನ್ನು ಮೂಲಸೌಕರ್ಯಗಳ ಪಟ್ಟಿಯಲ್ಲಿ ಸೇರಿಸಲಾಗುವುದು ಮತ್ತು ಅವುಗಳ ಅಭಿವೃದ್ಧಿಗೆ ನೆರವು ನೀಡಲಾಗುವುದು’ ಎಂದರು.

ಇತರ ಕ್ರಮಗಳು

* ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಆಯ್ದ ಪ್ರವಾಸಿ ಗುಂಪುಗಳಿಗೆ ವ್ಯವಸ್ಥಿತ ಇ-ವೀಸಾ ಸೌಲಭ್ಯಗಳು ಮತ್ತು ವೀಸಾ ಶುಲ್ಕ ವಿನಾಯಿತಿಗಳನ್ನು ಸರ್ಕಾರ ನೀಡಲಿದೆ

* ‘ಹೀಲ್‌ ಇನ್‌ ಇಂಡಿಯಾ’ ಉಪಕ್ರಮದಡಿ ಮೆಡಿಕಲ್‌ ಟೂರಿಸಂಗೆ ಇನ್ನಷ್ಟು ಉತ್ತೇಜನ

* ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಲಾಗಿರುವ ‘ಪ್ರಸಾದ್’ (ಪಿಲಿಗ್ರಿಮೇಜ್‌ ರಿಜುವೆನೇಷನ್ ಆ್ಯಂಡ್‌ ಸ್ಪಿರಿಚುಯಲ್‌ ಆಗ್‌ಮೆಂಟೇಷನ್‌ ಡ್ರೈವ್) ಯೋಜನೆಗೆ ಹೆಚ್ಚಿನ ಅನುದಾನ

* ಸ್ಪೇನ್‌, ಚೀನಾ, ಫ್ರಾನ್ಸ್‌ ಸೇರಿದಂತೆ ಕೆಲವು ದೇಶಗಳಲ್ಲಿ ಭಾರತದ ಪ್ರವಾಸೋದ್ಯಮದ ಬಗ್ಗೆ ಅಭಿಯಾನ ಕೈಗೊಳ್ಳಲು ಯೋಜನೆ

* ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ಮತ್ತು ಮಹಿಳಾ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಗುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.