ದಾವೋಸ್: ಭಾರತದ 63 ಮಂದಿ ಆಗರ್ಭ ಸಿರಿವಂತರ ಬಳಿ ಇರುವ ಸಂಪತ್ತು, ಕೇಂದ್ರ ಸರ್ಕಾರದ 2018–19ನೇ ಹಣಕಾಸು ವರ್ಷದ ಬಜೆಟ್ ಮೊತ್ತವಾದ ₹ 24.42 ಲಕ್ಷ ಕೋಟಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ.
ದೇಶದ ಒಟ್ಟಾರೆ ಜನಸಂಖ್ಯೆಯ ಶೇ 70ರಷ್ಟು ಇರುವ 95.30 ಕೋಟಿ ಜನರು ಹೊಂದಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು, ಶೇ 1ರಷ್ಟು ಮಾತ್ರ ಇರುವ ಕುಬೇರರ ತಿಜೋರಿಯಲ್ಲಿ ಇದೆ.
ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 50ನೇ ವಾರ್ಷಿಕ ಸಭೆಗೆ ಮುಂಚೆ ‘ಆಕ್ಸ್‌ಫ್ಯಾಮ್’ ಸಂಸ್ಥೆ ಬಿಡುಗಡೆ ಮಾಡಿರುವ ‘ಟೈಮ್ ಟು ಕೇರ್’ ವರದಿಯಲ್ಲಿ ಈ ಕುತೂಹಲಕರ ಮಾಹಿತಿ ಇದೆ.
ದುಪ್ಪಟ್ಟಾದ ಕುಬೇರರ ಸಂಖ್ಯೆ: ವಿಶ್ವದ 2,153 ಕುಬೇರರು ಜಾಗತಿಕ ಜನಸಂಖ್ಯೆಯ ಶೇ 60ರಷ್ಟಿರುವ 460 ಕೋಟಿ ಜನರು ಹೊಂದಿರುವ ಸಂಪತ್ತಿಗಿಂತ ಹೆಚ್ಚು ಶ್ರೀಮಂತಿಕೆ ಹೊಂದಿದ್ದಾರೆ. ಒಂದು ದಶಕದ ಅವಧಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಅವಧಿಯಲ್ಲಿ ಜಾಗತಿಕ ಸಂಪತ್ತಿನ ಅಸಮಾನತೆಯೂ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.
‘ನಮ್ಮ ಭಗ್ನಗೊಂಡಿರುವ ಆರ್ಥಿಕತೆಗಳು ಜನಸಾಮಾನ್ಯರು ಮತ್ತು ಮಹಿಳೆಯರ ಹಿತಾಸಕ್ತಿ ಬಲಿಕೊಟ್ಟು ಕೋಟ್ಯಧಿಪತಿಗಳ ಕಿಸೆ ಭರ್ತಿ ಮಾಡುತ್ತಿವೆ. ಬೃಹತ್ ಉದ್ದಿಮೆಗಳ ವರಮಾನವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸುತ್ತಿವೆ. ಸಂಪತ್ತಿನ ಅಸಮಾನತೆ ದೂರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಸಿರಿವಂತರು ಮತ್ತು ಬಡವರ ನಡುವಣ ಅಂತರ ತಗ್ಗಿಸಲು ಸಾಧ್ಯವೇ ಇಲ್ಲ. ಕೆಲವೇ ಕೆಲ ದೇಶಗಳು ಮಾತ್ರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ’ ಎಂದು ಆಕ್ಸ್‌ಫ್ಯಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್ ಹೇಳಿದ್ದಾರೆ.
ವರದಿ ಪ್ರಕಾರ, ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಯ ಸಿಇಒ ಪಡೆಯುವ ವಾರ್ಷಿಕ ವೇತನ ಗಳಿಸಲು ಮನೆಗೆಲಸದ ಮಹಿಳೆಯೊಬ್ಬಳು 22,277 ವರ್ಷಗಳವರೆಗೆ ದುಡಿಯಬೇಕಾಗುತ್ತದೆ! ಪ್ರತಿ ಸೆಕೆಂಡ್‌ಗೆ ₹ 106 ಗಳಿಸುವ ಸಿಇಒ, ಮನೆ ಕೆಲಸ ಮಾಡುವ ಮಹಿಳೆಯು ಒಂದು ವರ್ಷಕ್ಕೆ ಪಡೆಯುವ ವೇತನವನ್ನು ಕೇವಲ 10 ನಿಮಿಷಗಳಲ್ಲಿ ಗಳಿಸುತ್ತಾನೆ.
‘ಅಡುಗೆ, ಸ್ವಚ್ಛತೆ, ಮಕ್ಕಳು ಹಾಗೂ ಹಿರಿಯರ ಕಾಳಜಿಗೆ ಸಂಬಂಧಿಸಿದಂತೆ ಮಹಿಳೆಯರ ದುಡಿಮೆಯ ಲೆಕ್ಕ ಕೋಟ್ಯಂತರ ಗಂಟೆಗಳವರೆಗೆ ಇದೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ದುಡಿಮೆಗೆ ಸೂಕ್ತ ವೇತನ ನೀಡದಿರುವುದು ‘ಮರೆಮಾಚಿದ ಎಂಜಿನ್’ ಆಗಿದೆ.
‘ಇದೇ ಎಂಜಿನ್ ನಮ್ಮ ಸಮಾಜ, ವಹಿವಾಟು ಮತ್ತು ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಸರ್ಕಾರಗಳು ಸಿರಿವಂತರು ಮತ್ತು ಕಾರ್ಪೊರೇಟ್‌ಗಳಿಗೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿವೆ. ಇದರಿಂದಾಗಿ ಮಹಿಳೆಯರ ಉನ್ನತಿ, ಬಡತನ ಹಾಗೂ ಅಸಮಾನತೆ ನಿವಾರಣೆ ಉದ್ದೇಶದ ಕಾರ್ಯಕ್ರಮಗಳಿಗೆ ಅದರ ಬಳಿ ಹೆಚ್ಚಿನ ವರಮಾನವೇ ಇರುವುದಿಲ್ಲ’ ಎಂದೂ ಬೆಹರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.