ADVERTISEMENT

ಎಪಿಎಂಸಿ ಬಂದ್‌: ಮಿಶ್ರ ಪ್ರತಿಕ್ರಿಯೆ

ಪ್ಯಾಕ್ ಮಾಡಿರುವ ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:49 IST
Last Updated 15 ಜುಲೈ 2022, 18:49 IST
ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿ ಎಪಿಎಂಸಿ ಪ್ರಾಂಗಣ ಶುಕ್ರವಾರ ಬಿಕೋ ಎನ್ನುತ್ತಿತ್ತು. –ಪ್ರಜಾವಾಣಿ ಚಿತ್ರ
ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿ ಎಪಿಎಂಸಿ ಪ್ರಾಂಗಣ ಶುಕ್ರವಾರ ಬಿಕೋ ಎನ್ನುತ್ತಿತ್ತು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ಯಾಕ್ ಮಾಡಿರುವ, ಲೇಬಲ್ ಇರುವ ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ವಿಧಿಸುವ ಶಿಫಾರಸು ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿ ಎಪಿಎಂಸಿ ವರ್ತಕರ ಸಂಘ ಕರೆ ನೀಡಿದ್ದ ಎರಡು ದಿನಗಳ ಎಪಿಎಂಸಿ ಬಂದ್‌ಗೆ ರಾಜ್ಯದಲ್ಲಿ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರು, ಉಡುಪಿ, ವಿಜಯಪುರ, ಉತ್ತರ ಕನ್ನಡ, ಹೊಸಪೇಟೆ, ಬಾಗಲಕೋಟೆ, ಹಾವೇರಿ, ಚಾಮರಾಜನಗರ ಹಾಗೂ ಹಾಸನದಲ್ಲಿ ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತಗೊಂಡಿರಲಿಲ್ಲ. ಮಂಡ್ಯದಲ್ಲಿ ಬಂದ್ ಕರೆಗೆ ಸ್ಪಂದನ ಸಿಗಲಿಲ್ಲ. ವರ್ತಕರ ಸಂಘದವರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ಸಗಟು ವ್ಯಾಪಾರದ ಅಂಗಡಿಗಳು ತೆರೆದಿದ್ದವು. ಈರುಳ್ಳಿ ವ್ಯಾಪಾರ ಹಾಗೂ ಹರಾಜು ಪ್ರಕ್ರಿಯೆ ಸಹ ಮುಕ್ತವಾಗಿ ನಡೆಯಿತು. ಆದರೆ, ಅಕ್ಕಿ, ಬೇಳೆ ಕಾಳುಗಳ ವ್ಯಾಪಾರ ಮಾತ್ರ ಸಂಪೂರ್ಣ ಸ್ಥಗಿತವಾಗಿತ್ತು.

ADVERTISEMENT

ಬೆಂಗಳೂರು ಮತ್ತು ಬೆಳಗಾವಿ ಎಪಿಎಂಸಿ ಸಂಪೂರ್ಣ ಬಂದ್‌ ಆಗಿತ್ತು. ಶನಿವಾರ ಕೂಡ ಎಪಿಎಂಸಿ ಬಂದ್‌ ಮುಂದುವರಿಯಲಿದೆ. ಶಿವಮೊಗ್ಗದಲ್ಲಿ ವರ್ತಕರು ಶನಿವಾರ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ತುಮಕೂರಿನಲ್ಲಿ ವರ್ತಕರು ಮತ್ತು ರೈತರು ಪ್ರತಿಭಟನಾ ರ‍್ಯಾಲಿ ನಡೆಸಿದರು.

ಮೈಸೂರಿನಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದಿಂದ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು. ‘ಜನಸಾಮಾನ್ಯರಿಗೆ ಹೊರೆಯಾಗುವ ನಿರ್ಧಾರ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಎಪಿಎಂಸಿಗಳು ಬಂದ್ ಇದ್ದವು. ‘ಜಿಎಸ್‌ಟಿ ವಿಧಿಸಿರುವುದನ್ನು ಕೇಂದ್ರ ಸರ್ಕಾರ ಕೈಬಿಡಬೇಕು’ ಎಂದು ಒತ್ತಾಯಿಸಿ ಎಪಿಎಂಸಿ ವರ್ತಕರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ದಾವಣಗೆರೆಯಲ್ಲಿ ರೈಸ್‌ಮಿಲ್‌ಗಳು ಬಂದ್ ಆಗಿದ್ದವು. ಅಕ್ಕಿ ಮತ್ತು ರಾಗಿ ಸಗಟು ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿದ್ದರು.

ಚಿತ್ರದುರ್ಗದಲ್ಲಿ ವರ್ತಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಕೋಲಾರ ಮತ್ತು ಬಂಗಾರಪೇಟೆಯ ಎಪಿಎಂಸಿಯಲ್ಲಿ ಕೆಲವು ವರ್ತಕರು ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.