ADVERTISEMENT

ಆಯುರ್ವೇದಕ್ಕೆ ಮಾರುಕಟ್ಟೆವಿಸ್ತರಿಸಿದ ನವೋದ್ಯಮ

​ಕೇಶವ ಜಿ.ಝಿಂಗಾಡೆ
Published 15 ಜನವರಿ 2019, 19:30 IST
Last Updated 15 ಜನವರಿ 2019, 19:30 IST
ಆಯುರ್‌ಯುನಿವರ್ಸಿಟಿ ಸಿಇಒ ವಿಜಯ್‌ ಕುಮಾರ್‌ ಕರೈ
ಆಯುರ್‌ಯುನಿವರ್ಸಿಟಿ ಸಿಇಒ ವಿಜಯ್‌ ಕುಮಾರ್‌ ಕರೈ   

ಯೋಗ ಮತ್ತು ಧ್ಯಾನದ ತರಬೇತಿ ಮತ್ತು ಆಯುರ್ವೇದ ಚಿಕಿತ್ಸಾ ಸೇವೆ ಒದಗಿಸುವ ದೇಶದಲ್ಲಿನ ನೋಂದಾಯಿತ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಒಂದೆಡೆಯೇ ಒದಗಿಸುವ ಆನ್‌ಲೈನ್‌ ಸ್ಟಾರ್ಟ್‌ಅಪ್‌ ಆಯೂರ್‌ಯೂನಿವರ್ಸ್‌ (AyurUniverse) ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಯುರ್ವೇದ, ಯೋಗ, ಧ್ಯಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒದಗಿಸುವ ನವೋದ್ಯಮ ಇದಾಗಿದೆ.

ದೇಶಿ ಸಾಂಪ್ರದಾಯಿಕ ಯೋಗ, ಧ್ಯಾನ ತರಬೇತಿ ಮತ್ತು ಆಯುರ್ವೇದ ಚಿಕಿತ್ಸೆಗೆ ವಿಶ್ವದಾದ್ಯಂತ ಮಾರುಕಟ್ಟೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆಯುರ್ವೇದ ಚಿಕಿತ್ಸಾ ಕೇಂದ್ರಗಳ ವಹಿವಾಟಿಗೆ ಮಾರುಕಟ್ಟೆ ಪರಿಚಯಿಸಿ, ವಿಸ್ತರಿಸಿದ ಹೆಗ್ಗಳಿಕೆ ಇದರದ್ದು. ವಿಜಯ್‌ ಕುಮಾರ್‌ ಕರೈ ಅವರು ಈ ನವೋದ್ಯಮ ಸ್ಥಾಪಿಸಿದ್ದಾರೆ. ಆರಂಭದಲ್ಲಿ ಇವರೊಬ್ಬರೇ ಹಣ ಹೂಡಿಕೆ ಮಾಡಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆನಂತರ ಇತರರು ಹಣ ತೊಡಗಿಸಿ ಇವರೊಂದಿಗೆ ಕೈಜೋಡಿಸಿದ್ದಾರೆ.

ತಮಗೆ ಇಷ್ಟವಾಗುವ, ತಮ್ಮ ಹಣಕಾಸಿನ ಅಗತ್ಯಗಳಿಗೆ ಸೂಕ್ತ ಹೊಂದಾಣಿಕೆಯಾಗುವ ಚಿಕಿತ್ಸಾ ವಿಧಾನ, ಆಯುರ್ವೇದ ಕೇಂದ್ರಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಶೋಧಿಸಲು, ಮೂರನೇಯವರ ಹಸ್ತಕ್ಷೇಪ ಇಲ್ಲದೆ ಸರಳವಾಗಿ ಮತ್ತು ಸ್ವತಂತ್ರವಾಗಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲು ನೆರವಾಗುವ ವಿಶಿಷ್ಟ ತಾಣ ಇದಾಗಿದೆ.

ADVERTISEMENT

ಇಲ್ಲಿ ಇರುವ ‍ಪರಿಣತ ಸಿಬ್ಬಂದಿ ಆನ್‌ಲೈನ್‌ನಲ್ಲಿಯೇ ಗ್ರಾಹಕರಿಗೆ ಸಲಹೆ ಮತ್ತು ಅಗತ್ಯ ಮಾರ್ಗದರ್ಶನ ಮಾಡುತ್ತಾರೆ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆಯುರ್ವೇದ ಕೇಂದ್ರಗಳಲ್ಲಿ ಲಭ್ಯ ಇರುವ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳಲು ಸಲಹೆ ನೀಡುತ್ತಾರೆ.

ಪ್ರತಿಯೊಬ್ಬರ ಅಗತ್ಯ ಮತ್ತು ಉದ್ದೇಶ ಆಧರಿಸಿ ಸೂಕ್ತ ಕೇಂದ್ರದಲ್ಲಿ ಸಮರ್ಪಕ ಪ್ಯಾಕೇಜ್‌ ಪಡೆಯಲೂ ಇವರು ನೆರವಾಗುತ್ತಾರೆ. ಬಳಕೆದಾರರು ಆಯುರ್ವೇದ ಚಿಕಿತ್ಸಾ ಕೇಂದ್ರಗಳಿಗೆ ನೀಡಿದ ಮಾನದಂಡ ಅಥವಾ ಅಂಕಗಳನ್ನು ಹೊಸ ಗ್ರಾಹಕರಿಗೆ ತಾರತಮ್ಯರಹಿತ ರೀತಿಯಲ್ಲಿ ಒದಗಿಸಲು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ವಿಶ್ಲೇಷಣೆಯನ್ನು ಇಲ್ಲಿ ಬಳಕೆ ಮಾಡಲಾಗುತ್ತದೆ.

ದೇಶಿ ಆಯುರ್ವೇದ ಕೇಂದ್ರಗಳು ಮತ್ತು ಯೋಗ ಗುರುಗಳಿಗೆ ಸಿಗಬೇಕಾದ ಪ್ರಮಾಣದಲ್ಲಿ ಮಾರುಕಟ್ಟೆ ದೊರೆಯುತ್ತಿಲ್ಲ. ಈ ಕೊರತೆಯನ್ನು ಈ ತಾಣವು ತುಂಬಿಕೊಟ್ಟಿದೆ. ಆಯುರ್ವೇದ ಕೇಂದ್ರಗಳಿಗೆ ನಿರಂತರವಾಗಿ ವಹಿವಾಟು ಸಿಗದಿದ್ದರೆ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟ. ಈ ಸಮಸ್ಯೆಗೆ ‘ಆಯುರ್‌ಯುನಿವರ್ಸ್‌’ನಿಂದ ಪರಿಹಾರ ದೊರೆತಿದೆ.

ವಿದೇಶಿ ಟ್ರಾವೆಲ್‌ ಏಜೆನ್ಸಿಗಳು ಯುರೋಪ್‌ ಮತ್ತಿತರ ಕಡೆಗಳಲ್ಲಿ ಚಳಿಗಾಲ ಇದ್ದಾಗ ಮಾತ್ರ ಗ್ರಾಹಕರನ್ನು ಭಾರತದತ್ತ ಕಳಿಸಿಕೊಡುತ್ತವೆ. ಉಳಿದ ಸಮಯದಲ್ಲಿ ವಿದೇಶಗಳಲ್ಲಿನ ಯೋಗ ಕೇಂದ್ರಗಳಿಗೆ ಮಾರುಕಟ್ಟೆ ದೊರಕಿಸುತ್ತವೆ. ಇದರಿಂದ ದೇಶಿ ಯೋಗ ತರಬೇತಿ, ಆಯುರ್ವೇದ ಚಿಕಿತ್ಸಾ ಕೇಂದ್ರಗಳು ವರ್ಷಪೂರ್ತಿ ಗ್ರಾಹಕರು ಮತ್ತು ವಹಿವಾಟು ಇಲ್ಲದೆ ತೊಂದರೆಗೆ ಒಳಗಾಗುತ್ತಿದ್ದವು. ಈಗ ಈ ಸಮಸ್ಯೆ ದೂರವಾಗಿದೆ.

‘ಭಾರತದ ಪರಂಪರಾಗತ ಸಂಸ್ಕೃತಿಯ ಭಾಗವಾಗಿರುವ ಯೋಗವನ್ನು ವಿದೇಶಿ ಸಂಸ್ಥೆಗಳು ಚೆನ್ನಾಗಿ ಮಾರುಕಟ್ಟೆ ಮಾಡಿಕೊಂಡು ಹಣ ಗಳಿಸುತ್ತಿವೆ. ಇದರಿಂದ ದೇಶಿ ಸಂಸ್ಥೆಗಳಿಗೆ ಆಗುವ ನಷ್ಟ ತುಂಬಿ ಕೊಡಲು ಈ ಸಾಹಸಕ್ಕೆ ಕೈಹಾಕಿದೆ. ಮೊದಲ ವರ್ಷದಲ್ಲಿಯೇ ಲಾಭ ಬಂದಿತು. ಈಗ ವಹಿವಾಟು ಕುದುರಿದೆ. ವಿಸ್ತರಣೆಗೆ ಬಂಡವಾಳ ಹೂಡಲಾಗುತ್ತಿದೆ. ಗ್ರಾಹಕರನ್ನು ಒದಗಿಸಿದ್ದಕ್ಕೆ ಕೇಂದ್ರಗಳಿಂದ ಸೇವಾ ಶುಲ್ಕ ಪಡೆಯಲಾಗುತ್ತದೆ. ಗ್ರಾಹಕರಿಗೆ ಯಾವುದೇ ಹೊರೆ ಇರುವುದಿಲ್ಲ. ದೇಶದಲ್ಲಿನ 300 ಕ್ಕೂ ಹೆಚ್ಚು ಕೇಂದ್ರಗಳಿಗೆ ಇದು ವಿಶ್ವದಾದ್ಯಂತ ಮಾರುಕಟ್ಟೆ ವಿಸ್ತರಣೆ ಮಾಡಿಕೊಡಲು ನೆರವಾಗಿದೆ’ ಎಂದು ಸ್ಟಾರ್ಟ್‌ಅಪ್‌ನ ಸಿಇಒ ವಿಜಯ್‌ ಕುಮಾರ್‌ ಕರೈ ಹೇಳುತ್ತಾರೆ.

ಪ್ರತಿಯೊಂದು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯ, ಸಿಬ್ಬಂದಿ, ಸಂಸ್ಥೆ ನಡೆಸುವವರ ಪದವಿ ಮತ್ತಿತರ ಅರ್ಹತೆ ಮತ್ತು ಮಾನದಂಡ ಆಧರಿಸಿಯೇ ಈ ತಾಣಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಕಲಿಕೆ ಮತ್ತು ಚಿಕಿತ್ಸೆಗೆ ಬರುವ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುವುದು. ಆಯುರ್ವೇದ ಕೇಂದ್ರಗಳ ಸಮೀಪದ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿದೇಶಿಗರನ್ನು ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಮರಳಿ ನಿಲ್ದಾಣಕ್ಕೆ ಬಿಡುವವರೆಗೆ ಅವರ ಸುರಕ್ಷತೆ ಬಗ್ಗೆ ಗಮನ ನೀಡಲಾಗುವುದು. ಯೋಗ ಪರಿಣತರು ಪಡೆದ ಪದವಿ, ಅಷ್ಟಾಂಗ, ಹಠಯೋಗ ಪರಿಣತಿ ಆಧರಿಸಿ ಅವರ ಬಗ್ಗೆ ಮಾಹಿತಿ ನೀಡಲಾಗುವುದು. ಈ ಕಾರಣಕ್ಕೆ ಈ ತಾಣದಲ್ಲಿ ಲಭ್ಯ ಇರುವ ಮಾಹಿತಿ ಹೆಚ್ಚು ಖಚಿತತೆ ಮತ್ತು ವಿಶ್ವಾಸಾರ್ಹತೆ ಹೊಂದಿದೆ.

ಪ್ರವಾಸಿಗರಲ್ಲಿ ಕೆಲವರು ಕಡಲತಡಿಯ ಕೇಂದ್ರಗಳನ್ನೇ ಇಷ್ಟಪಟ್ಟರೆ, ಹಲವರಿಗೆ ರೆಸಾರ್ಟ್‌ ಮಾದರಿಯ ಕೇಂದ್ರಗಳ ಬಗ್ಗೆ ಒಲವು ಇರುತ್ತದೆ. ಅವರೆಲ್ಲರ ಅಗತ್ಯಗಳು, ಬಜೆಟ್‌ಗೆ ತಕ್ಕಂತೆ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಈ ತಾಣದಲ್ಲಿ ವಿಪುಲ ಅವಕಾಶಗಳು ಇವೆ. ಶುದ್ಧ ಆಯುರ್ವೇದ ಆಸ್ಪತ್ರೆಗಳ ಪಟ್ಟಿಯೂ ಇದೆ.

ಗ್ರಾಹಕರ ಜತೆ ವ್ಯವಹರಿಸುವ ಬಗ್ಗೆ ಸಂಸ್ಥೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗ್ರಾಹಕರಿಗೆ ನೆರವಾಗಲು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ್‌ ಸೆಂಟರ್‌ ಕೂಡ ಇಲ್ಲಿದೆ.

ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆಯಲು ಬಯಸುವವರಿಗೆ ಅವರ ವೈದ್ಯಕೀಯ ದಾಖಲೆ ಆಧರಿಸಿ ಇಂತಿಂತಹ ಆಸ್ಪತ್ರೆಗಳಲ್ಲಿ ಈ ಬಗೆಯ ಸೇವೆಗಳು ಈ ದರಗಳಲ್ಲಿ ಲಭ್ಯ ಇರುವ ಮಾಹಿತಿ ಇಲ್ಲಿ ದೊರೆಯುತ್ತದೆ. ಸೌಲಭ್ಯಗಳ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗುತ್ತದೆ. ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಗ್ರಾಹಕರಿಗೆ ಇರುತ್ತದೆ. 2 ವರ್ಷಗಳ ಹಿಂದೆ ಆರಂಭಗೊಂಡಿರುವ ಈ ನವೋದ್ಯಮಕ್ಕೆ ಈಗ 45 ದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಯಾಗಿದೆ. ಪ್ರತಿ ತಿಂಗಳೂ ಹೊಸ ಹೊಸ ‍ಪ್ರದೇಶ ಸೇರ್ಪಡೆಯಾಗುತ್ತಿದೆ.

ದೇಶದಾದ್ಯಂತ ಇರುವ ನೋಂದಾಯಿತ 300 ಕೇಂದ್ರಗಳಲ್ಲಿ ಕೇರಳದ ಪಾಲು ಗರಿಷ್ಠ ಮಟ್ಟದಲ್ಲಿ ಇದೆ. ಕರ್ನಾಟಕದ 12 ಕೇಂದ್ರಗಳು ಈ ತಾಣದಲ್ಲಿ ನೋಂದಾವಣೆಗೊಂಡಿವೆ. ಮುಂದಿನ 3 ವರ್ಷಗಳಲ್ಲಿ 50 ದೇಶಗಳಲ್ಲಿ ವಹಿವಾಟು ವಿಸ್ತರಣೆಗೆ ಉದ್ದೇಶಿಸಲಾಗಿದೆ.

ಕೈಹಿಡಿದ ಮಾರುಕಟ್ಟೆ ಅನುಭವ

ಕೋಕಾಕೋಲಾ, ಪೆಪ್ಸಿ ಮತ್ತಿತರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಅನೇಕ ನವೋದ್ಯಮಗಳ ಸಿಇಒ ಆಗಿದ್ದ ವಿಜಯ ಕುಮಾರ್‌ ಕರೈ ತಮ್ಮೆಲ್ಲ ಅನುಭವ ಬಳಸಿಕೊಂಡು ಈ ವಿಶಿಷ್ಟ ನವೋದ್ಯಮ ಸ್ಥಾಪಿಸಿದ್ದಾರೆ. ಹೈದರಾಬಾದ್‌ನಲ್ಲಿ ವಿಜ್ಞಾನ ಪದವಿ ಪಡೆದ ವಿಜಯ್‌ ಕುಮಾರ್‌, ಅಮೆರಿಕದ ಯುನಿವರ್ಸಿಟಿ ಆಫ್‌ ಸದರ್ನ ಕ್ಯಾಲಿಫೋರ್ನಿಯಾದಿಂದ ಎಂಬಿಎ ಪದವಿ ಪಡೆದಿದ್ದಾರೆ.

ಮೈಸೂರಿನ ‘ಆಯುರ್ವೇದಿಕ್‌ ಸ್ಪಾ’ದ ಸಹಸ್ಥಾಪಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುವಾಗ, ಆಯುರ್ವೇದ ಚಿಕಿತ್ಸಾ ಕೇಂದ್ರಗಳ ವಹಿವಾಟನ್ನು ವಿಶ್ವದಾದ್ಯಂತ ವಿಸ್ತರಿಸಲು ಅಂತರ್ಜಾಲ ತಾಣದ ಅಗತ್ಯ ಇರುವುದನ್ನು ಮನಗಂಡಿದ್ದರು. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುರ್ವೇದ ಚಿಕಿತ್ಸಾ ಕೇಂದ್ರಗಳ ಮಾಹಿತಿ ಒಂದೆಡೆಯೇ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಈ ನವೋದ್ಯಮ ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.