ADVERTISEMENT

ಬಯೋಕಾನ್ ಲಾಭದಲ್ಲಿ ಶೇ 26ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 10:58 IST
Last Updated 24 ಜುಲೈ 2020, 10:58 IST
ಕಿರಣ್ ಮಜುಂದಾರ್ ಶಾ
ಕಿರಣ್ ಮಜುಂದಾರ್ ಶಾ   

ನವದೆಹಲಿ : ಜೈವಿಕ ತಂತ್ರಜ್ಞಾನ (ಬಿ.ಟಿ.) ಕಂಪನಿ ಬಯೋಕಾನ್‌, ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕದ ಲಾಭದಲ್ಲಿ ಶೇಕಡ 26.30ರಷ್ಟು ಇಳಿಕೆ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಒಟ್ಟು ₹ 167.8 ಕೋಟಿ. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹಣ ವಿನಿಯೋಗಿಸಿದ್ದುಲಾಭ ಕಡಿಮೆ ಆಗಿರುವುದಕ್ಕೆ ಒಂದು ಕಾರಣ.

ಈ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು ₹ 1,671.3 ಕೋಟಿ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 227.7 ಕೋಟಿ ಲಾಭ ಗಳಿಸಿತ್ತು.

‘ಬಯೋಸಿಮಿಲರ್ಸ್‌ (ಒಂದು ಬಗೆಯ ಜೈವಿಕ ಉತ್ಪನ್ನ) ವಹಿವಾಟಿನಲ್ಲಿ ಲಾಭದ ಪ್ರಮಾಣ ಕಡಿಮೆ ಇದ್ದುದು, ಸಂಶೋಧನಾ ಸೇವೆ ವಿಭಾಗದಲ್ಲಿ ಕಡಿಮೆ ಲಾಭಾಂಶ ಇದ್ದುದು ಒಟ್ಟು ಲಾಭದ ಮೇಲೆ ಪರಿಣಾಮ ಉಂಟುಮಾಡಿದವು’ ಎಂದು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದರು.

ADVERTISEMENT

ಈ ತ್ರೈಮಾಸಿಕವು ಕಂಪನಿಯ ಪಾಲಿಗೆ ಬಹಳ ಮಹತ್ವದ್ದಾಗಿತ್ತು. ಸಾಂಕ್ರಾಮಿಕವನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಕಂಪನಿಯು ಗಣನೀಯ ಕೊಡುಗೆ ನೀಡಿದೆ ಎಂದೂ ಶಾ ಹೇಳಿದರು.

ಹಿಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ₹ 110 ಕೋಟಿ ವೆಚ್ಚ ಮಾಡಲಾಗಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಮೊತ್ತವನ್ನು ₹ 142 ಕೋಟಿಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.