ADVERTISEMENT

ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ

ಅಮೆಜಾನ್‌ ಸಲ್ಲಿಸಿದ್ದ ಅರ್ಜಿ: ಸಿಂಗಪುರದ ಮಧ್ಯಸ್ಥಿಕೆ ಕೇಂದ್ರದ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 18:56 IST
Last Updated 26 ಅಕ್ಟೋಬರ್ 2020, 18:56 IST
   

ನವದೆಹಲಿ: ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ (ಆರ್‌ಐಎಲ್‌) ₹ 24,713 ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಆದರೆ, ಈ ತಡೆಯಾಜ್ಞೆಯನ್ನು ಪ್ರಶ್ನಿಸುವ ಸೂಚನೆಯನ್ನು ‘ಫ್ಯೂಚರ್’ ಸೋಮವಾರ ನೀಡಿದೆ.

ಅಮೆಜಾನ್‌ ಕಂಪನಿಯು ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿಯು ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗೀದಾರ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಅಮೆಜಾನ್ ಕಂಪ
ನಿಯು ಕಳೆದ ವರ್ಷ ಫ್ಯೂಚರ್ ಕಂಪನಿಯಲ್ಲಿ ಪರೋಕ್ಷವಾಗಿ ಸಣ್ಣ ಪ್ರಮಾಣದ ಷೇರುಗಳನ್ನು ಖರೀದಿಸಿದೆ.

ರಿಟೇಲ್ ಮತ್ತು ಸಗಟು ವ್ಯಾಪಾರ, ಸರಕು ಸಾಗಣೆ, ಗೋದಾಮು ವಹಿವಾಟುಗಳನ್ನು ಫ್ಯೂಚರ್‌ ಕಂಪನಿಯು, ರಿಲಯನ್ಸ್‌ ಕಂಪನಿಗೆ ಮಾರಲು ಮುಂದಾಗಿರುವುದು ಈಗಾಗಲೇ ಇರುವ ಒಪ್ಪಂದದ ಉಲ್ಲಂಘನೆ ಎಂದು ಅಮೆಜಾನ್ ಹೇಳುತ್ತಿದೆ. ಅಂತಿಮ ತೀರ್ಪು ಬರುವವರೆಗೆ ಫ್ಯೂಚರ್ ಗ್ರೂಪ್ ಹಾಗೂ ಅದರ ಪ್ರವರ್ತಕರು ಈ ಮಾರಾಟದ ವಿಚಾರವಾಗಿ ಮುಂದಡಿ ಇರಿಸುವಂತೆ ಇಲ್ಲ ಎಂದು ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವು (ಎಸ್‌ಐಎಸಿ) ಭಾನುವಾರ ಆದೇಶಿಸಿದೆ.

ADVERTISEMENT

ತಾನು ಕೈಗೊಂಡಿರುವ ತೀರ್ಮಾನವು ಒಪ್ಪಂದಗಳ ಉಲ್ಲಂಘನೆ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಸೂಕ್ತ ರೀತಿಯಲ್ಲಿ ಕಾನೂನು ಸಲಹೆ ಪಡೆದ ನಂತರವೇ ಫ್ಯೂಚರ್ ಕಂಪನಿಯ ಕೆಲವು ವಹಿವಾಟುಗಳನ್ನು ಖರೀದಿಸುವ ತೀರ್ಮಾನ ಕೈಗೊಂಡಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ. ಮಧ್ಯಸ್ಥಿಕೆ ಕೇಂದ್ರದ ತೀರ್ಮಾನವನ್ನು ಸ್ವಾಗತಿಸುವುದಾಗಿ ಅಮೆಜಾನ್ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.