ADVERTISEMENT

₹114 ಕೋಟಿ ಉಳಿಸಿದ ಕಾಗ್ನಿಜಂಟ್‌

ಕ್ಯಾಂಪಸ್‌ ನಿರ್ಮಾಣಕ್ಕಾಗಿ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣ

ಮಹೇಶ ಕುಲಕರ್ಣಿ
Published 22 ಫೆಬ್ರುವರಿ 2019, 20:00 IST
Last Updated 22 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಅಕ್ರಮ ಮಾರ್ಗ ಅನುಸರಿಸಿದ ಅಮೆರಿಕದ ಐ.ಟಿ ಸಂಸ್ಥೆ ಕಾಗ್ನಿಜಂಟ್‌ ಟೆಕ್ನಾಲಜಿ ಸೊಲುಷನ್ಸ್‌ ಕಾರ್ಪೊರೇಷನ್‌, ಯೋಜನಾ ವೆಚ್ಚದಲ್ಲಿ ₹ 114 ಕೋಟಿ ಉಳಿಸಿದೆ.

ಚೆನ್ನೈ ಮತ್ತು ಪುಣೆಯಲ್ಲಿ ಸಂಸ್ಥೆಯ ತಂತ್ರಜ್ಞಾನ ಕ್ಯಾಂಪಸ್‌ಗಳ ನಿರ್ಮಾಣಕ್ಕೆ ಪರಿಸರ, ವಿದ್ಯುತ್‌ ಮತ್ತಿತರ ಇಲಾಖೆಗಳ ಅನುಮತಿ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಕಾರಣಕ್ಕೆ ಅಮೆರಿಕದ ನ್ಯಾಯಾಂಗ ಇಲಾಖೆಯಿಂದ ಸಂಸ್ಥೆಯು ದಂಡನೆಗೆ ಒಳಗಾಗಿತ್ತು.

ಕಟ್ಟಡ ನಿರ್ಮಾಣದ ಬೃಹತ್‌ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ, ಕಾಗ್ನಿಜಂಟ್‌ ಪರವಾಗಿ ಅಧಿಕಾರಿಗಳಿಗೆ ಅಂದಾಜು ₹ 25 ಕೋಟಿಗಳಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ಪಾವತಿಸಿತ್ತು ಎಂದು ವಾಣಿಜ್ಯ ದಿನಪತ್ರಿಕೆ ಮಿಂಟ್‌ ವರದಿ ಮಾಡಿತ್ತು.

ADVERTISEMENT

ಈ ಕಾನೂನುಬಾಹಿರ ಹಣ ಪಾವತಿಯು ಕಾಗ್ನಿಜಂಟ್‌ನ ಭಾರತದಲ್ಲಿನ ಬ್ಯಾಂಕ್‌ ಖಾತೆಗಳಿಂದ ಪಾವತಿಸಲಾಗಿತ್ತು. ಆದರೆ, ಈ ಲಂಚ ಪಾವತಿಯ ವಿವರಗಳನ್ನು ಸಂಸ್ಥೆಯ ಲೆಕ್ಕಪತ್ರಗಳಲ್ಲಿ ಸೂಕ್ತವಾಗಿ ನಮೂದಿಸಿರಲಿಲ್ಲ. ಈ ಬಗ್ಗೆ ಸಂಸ್ಥೆಯ ಆಂತರಿಕ ಲೆಕ್ಕಪತ್ರ ತಪಾಸಣೆಯನ್ನೂ ಸಮರ್ಪಕವಾಗಿ ನಡೆಸಿರಲಿಲ್ಲ. ಇದರಿಂದ ಸಂಸ್ಥೆಯು ಭ್ರಷ್ಟಾಚಾರ ವಿರೋಧಿ ನೀತಿಯನ್ನು ಸರಿಯಾಗಿ ಜಾರಿಗೆ ತರುವಲ್ಲಿ ವಿಫಲಗೊಂಡಿತ್ತು. ಸರ್ಕಾರಿ ಅಧಿಕಾರಿಗಳಿಗೆ ಲಂಚ ಪಾವತಿಸಿರುವುದು ಅಮೆರಿಕದ ಭ್ರಷ್ಟಾಚಾರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸಂಸ್ಥೆಯ ಪರವಾಗಿ ಹಣ ಪಾವತಿಸಲು ಕಾಗ್ನಿಜಂಟ್‌ ಅನುಮತಿ ನೀಡಿತ್ತು. ಇದರಿಂದ ಸಂಸ್ಥೆಗೆ ₹ 114 ಕೋಟಿ ಉಳಿತಾಯವಾಗಿದೆ. ಆದರೆ ಈ ಉಳಿತಾಯ ಹೇಗೆ ಸಾಧ್ಯವಾಯಿತು ಎನ್ನುವುದರ ಬಗ್ಗೆ ವಿವರಣೆ ಇಲ್ಲ.

ಲಂಚ ನೀಡಿದ್ದಕ್ಕೆ ಅಮೆರಿಕದ ನ್ಯಾಯಾಂಗ ಇಲಾಖೆಯು ಕಾಗ್ನಿಜಂಟ್‌ಗೆ ದಂಡ ವಿಧಿಸಿತ್ತು.

ಪ್ರಕರಣದಲ್ಲಿ ಸಂಸ್ಥೆಯ ಕೆಲ ಅಧಿಕಾರಿಗಳು ಭಾಗವಹಿಸಿದ್ದರೂ, ಕಾನೂನು ಕ್ರಮ ಕೈಗೊಳ್ಳುವುದನ್ನು ಕೈಬಿಡಲಾಗಿತ್ತು. ಲಂಚ ನೀಡಲಾಗಿರುವುದನ್ನು ಸಕಾಲದಲ್ಲಿ ಸ್ವಯಂ ಪ್ರೇರಣೆಯಿಂದ ಬಹಿರಂಗಪಡಿಸಿದ್ದರಿಂದ ದಂಡವನ್ನಷ್ಟೇ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.