ADVERTISEMENT

ಜಿಡಿಪಿ ವೃದ್ಧಿ: ಅಂದಾಜು ತಗ್ಗಿಸಿದ ಬ್ರೋಕರೇಜ್ ಸಂಸ್ಥೆಗಳು

ಪಿಟಿಐ
Published 18 ಏಪ್ರಿಲ್ 2021, 14:41 IST
Last Updated 18 ಏಪ್ರಿಲ್ 2021, 14:41 IST

ನವದೆಹಲಿ: ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದು ಆರ್ಥಿಕ ಚೇತರಿಕೆಗೆ ಅಪಾಯ ತಂದೊಡ್ಡುತ್ತಿರುವ ಕಾರಣ, ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣದ ಅಂದಾಜನ್ನು ತಗ್ಗಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 12.6ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ನೊಮುರ ಅಂದಾಜಿಸಿದೆ. ಈ ಮೊದಲು ಸಂಸ್ಥೆಯು, ಭಾರತದ ಜಿಡಿಪಿ ಬೆಳವಣಿಗೆ ಶೇ 13.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಜಿಡಿಪಿಯು ಶೇ 13ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಈ ಮೊದಲು ಅಂದಾಜಿಸಿದ್ದ ಜೆಪಿ ಮಾರ್ಗನ್, ಈಗ ಬೆಳವಣಿಗೆಯು ಶೇ 11ರಷ್ಟು ಆಗಬಹುದು ಎಂದು ಹೇಳಿದೆ. ಯುಬಿಎಸ್‌ ಸಂಸ್ಥೆಯು ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 10ಕ್ಕೆ ತಗ್ಗಿಸಿದೆ. ಅದು ಈ ಮೊದಲು ಶೇ 11.5ರ ಬೆಳವಣಿಗೆ ಇರಲಿದೆ ಎಂದು ಅಂದಾಜು ಮಾಡಿತ್ತು.

ಕೋವಿಡ್–19 ಸಾಂಕ್ರಾಮಿಕ ಹರಡಲು ಆರಂಭಿಸುವ ಮೊದಲೂ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯು ಮಂದಗತಿಗೆ ತಿರುಗಿತ್ತು. 2016–17ರಲ್ಲಿ ಶೇ 8.3ರಷ್ಟಿದ್ದ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು 2019–20ರಲ್ಲಿ ಶೇ 4ಕ್ಕೆ ಇಳಿಕೆ ಕಂಡಿತ್ತು. ಈ ವರ್ಷದ ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯು ಶೇ (–)8ರಷ್ಟು ಕುಸಿತ ಕಂಡಿರುವ ಅಂದಾಜು ಇದೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಅಂದಾಜಿನ ಅನ್ವಯ ದೇಶದ ಜಿಡಿಪಿ ಬೆಳವಣಿಗೆಯು 2021–22ರಲ್ಲಿ ಶೇ 10.5ರಷ್ಟು ಇರಲಿದೆ. ಜಿಡಿಪಿ ಬೆಳವಣಿಗೆ ಶೇ 12.5ರಷ್ಟಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ.

‘ಬಹುತೇಕ ಜಿಲ್ಲೆಗಳಲ್ಲಿ ಈಗ ವರದಿಯಾಗುತ್ತಿರುವ ಕೋವಿಡ್–19 ಪ್ರಕರಣಗಳು ಆತಂಕ ಹುಟ್ಟಿಸುತ್ತಿವೆ. ಪ್ರಕರಣಗಳು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿವೆ, ಹಾಗೆಯೇ ಅವು ಬಹಳ ಬೇಗ ಕಡಿಮೆ ಆಗುತ್ತವೆ ಕೂಡ’ ಎಂದು ಕ್ರೆಡಿಟ್ ಸ್ಯೂಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.