ADVERTISEMENT

ವಾರ್ಷಿಕ ರಿಟರ್ನ್ಸ್‌: ಬೇಕಿಲ್ಲ ಲೆಕ್ಕ ಪರಿಶೋಧಕರ ಪ್ರಮಾಣಪತ್ರ

ಪಿಟಿಐ
Published 1 ಆಗಸ್ಟ್ 2021, 17:01 IST
Last Updated 1 ಆಗಸ್ಟ್ 2021, 17:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾರ್ಷಿಕ ವಹಿವಾಟು ಮೊತ್ತವು ₹ 5 ಕೋಟಿಗಿಂತ ಹೆಚ್ಚು ಇರುವ ಉದ್ಯಮಗಳು ತಮ್ಮ ವಾರ್ಷಿಕ ಜಿಎಸ್‌ಟಿ ವಿವರಗಳನ್ನು ತಾವೇ ಪ್ರಮಾಣೀಕರಿಸಬಹುದು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೇಳಿದೆ.

ಈ ಜಿಎಸ್‌ಟಿ ವಿವರಗಳಿಗೆ ಕಂಪನಿಗಳು ಲೆಕ್ಕ ಪರಿಶೋಧಕರಿಂದ ಪ್ರಮಾಣೀಕರಣ ನೀಡಬೇಕಿಲ್ಲ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ 2020–21ನೇ ಸಾಲಿಗೆ ₹ 2 ಕೋಟಿಯವರೆಗಿನ ವಾರ್ಷಿಕ ವಹಿವಾಟು ಹೊಂದಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಉದ್ಯಮಗಳುವಾರ್ಷಿಕ ರಿಟರ್ನ್ಸ್‌ ಜಿಎಸ್‌ಟಿಆರ್‌–9/9ಎ ಸಲ್ಲಿಸುವುದು ಕಡ್ಡಾಯ.

ADVERTISEMENT

₹ 5 ಕೋಟಿಗಿಂತ ಅಧಿಕ ವಾರ್ಷಿಕ ವಹಿವಾಟು ನಡೆಸುವವರು ಜಿಎಸ್‌ಟಿಆರ್‌–9ಸಿ ಮೂಲಕ ಸಮನ್ವಯ ವರದಿ ಸಲ್ಲಿಸಬೇಕು. ಲೆಕ್ಕ ಪರಿಶೋಧಕರು ಆಡಿಟ್‌ ಮಾಡಿದ ನಂತರ ಈ ವರದಿಯನ್ನು ಪ್ರಮಾಣೀಕರಿಸಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ‘ಸಿಬಿಐಸಿ’ಯು ಜಿಎಸ್‌ಟಿ ನಿಯಮದಲ್ಲಿ ತಿದ್ದುಪಡಿ ತಂದಿದ್ದು, ಲೆಕ್ಕ ಪರಿಶೋಧಕರ ನೆರವಿಲ್ಲದ ವಹಿವಾಟುದಾರರು ತಾವೇ ಪ್ರಮಾಣೀಕರಿಸಲು ಅವಕಾಶ ಕಲ್ಪಿಸಿದೆ. ಈ ಕುರಿತು ಭಾನುವಾರ ಅಧಿಸೂಚನೆ ಹೊರಡಿಸಿದೆ.

‘ವಾರ್ಷಿಕ ರಿಟರ್ನ್ಸ್‌ ಸಲ್ಲಿಸುವಾಗ ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಲ್ಲದ ತಪ್ಪುಗಳಾದಲ್ಲಿ ಇಲಾಖೆಯ ಪರಿಶೀಲನೆಯ ವೇಳೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.