ADVERTISEMENT

ಕೆನರಾ ಬ್ಯಾಂಕ್‌ ಠೇವಣಿ ಅಭಿಯಾನ ಫಲಪ್ರದ

10 ವಾರದಲ್ಲಿ ₹16,700 ಕೋಟಿ ಸಂಗ್ರಹಿಸಿದ ಕೆನರಾ ಬ್ಯಾಂಕ್‌

ಪಿಟಿಐ
Published 11 ಮೇ 2025, 15:32 IST
Last Updated 11 ಮೇ 2025, 15:32 IST
ಕೆ. ಸತ್ಯನಾರಾಯಣ ರಾಜು
ಕೆ. ಸತ್ಯನಾರಾಯಣ ರಾಜು   

ಮುಂಬೈ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ತನ್ನ ಉದ್ಯೋಗಿಗಳನ್ನು ಬಳಸಿಕೊಂಡು 10 ವಾರದಲ್ಲಿ ₹16,700 ಕೋಟಿ ಠೇವಣಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಬ್ಯಾಂಕ್‌ನಲ್ಲಿ 82 ಸಾವಿರ ಉದ್ಯೋಗಿಗಳಿದ್ದಾರೆ. ಪ್ರತಿಯೊಬ್ಬರಿಗೂ ಠೇವಣಿ ಸಂಗ್ರಹಿಸುವ ಗುರಿ ನೀಡಲಾಗಿತ್ತು. ಜನವರಿ 26ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಅವರು, ಪಿಟಿಐಗೆ ತಿಳಿಸಿದ್ದಾರೆ.

ಪ್ರತಿ ಉದ್ಯೋಗಿಯು ತನ್ನ ಸಂಬಂಧಿಕರು ಹಾಗೂ ತನ್ನ ಬಳಗದವರನ್ನು ಸಂಪರ್ಕಿಸಿ ₹10 ಲಕ್ಷ ಠೇವಣಿ ಸಂಗ್ರಹಿಸಬೇಕು. ಚಾಲ್ತಿ ಮತ್ತು ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿ ರೂಪದಲ್ಲಿ ಇಷ್ಟು ಮೊತ್ತ ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಹಾಗಾಗಿ, ಈ ಗುರಿ ಸಾಧನೆಯಾಗಿದೆ ಎಂದು ವಿವರಿಸಿದ್ದಾರೆ.

ADVERTISEMENT

ಬ್ಯಾಂಕ್‌ನ ಆಡಳಿತ ಮಂಡಳಿಯು ಕೈಗೊಂಡ ಈ ಅಭಿಯಾನಕ್ಕೆ ಎಲ್ಲಾ ಉದ್ಯೋಗಿಗಳು ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಎರಡು, ಮೂರು ವರ್ಷಗಳಲ್ಲಿ ಉದ್ಯೋಗಿಗಳಿಗೆ ಬಡ್ತಿ, ಅವರ ಸಾಮರ್ಥ್ಯ ಗುರುತಿಸುವಿಕೆ, ವರ್ಗಾವಣೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಹಾಗಾಗಿ, ಠೇವಣಿ ಸಂಗ್ರಹ ಅಭಿಯಾನದ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿತ್ತು. ಇದಕ್ಕೆ ನೌಕರರ ಸಂಘಟನೆಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ವಿವರಿಸಿದ್ದಾರೆ.

ಠೇವಣಿ ಸಂಗ್ರಹ ಅಭಿಯಾನದ ಫಲವಾಗಿ ಬ್ಯಾಂಕ್‌ನ ಸಾಲ ಮತ್ತು ಠೇವಣಿ ಅನುಪಾತವು (ಸಿ:ಡಿ) 2024–25ನೇ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 76ರಿಂದ ಶೇ 73ಕ್ಕೆ ತಗ್ಗಿದೆ ಎಂದು ಹೇಳಿದ್ದಾರೆ.

ಸಣ್ಣ ಮೊತ್ತದ ಠೇವಣಿ ಸಂಗ್ರಹಿಸುವ ಈ ಅಭಿಯಾನ ಫಲಪ್ರದಗೊಂಡಿದೆ. ಹಾಗಾಗಿ, ಬೃಹತ್‌ ಮೊತ್ತದ ಠೇವಣಿ ಸಂಗ್ರಹದ ಗುರಿ ಕಡಿಮೆಯಾಗಿದೆ. ಬ್ಯಾಂಕ್‌ನ ವೆಚ್ಚದ ಪ್ರಮಾಣವು ಶೇ 25ರಿಂದ ಶೇ 23ಕ್ಕೆ ತಗ್ಗಿದೆ ಎಂದು ವಿವರಿಸಿದ್ದಾರೆ.

ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಬ್ಯಾಂಕ್‌ ಬದ್ಧವಾಗಿದೆ. ಮುಂದಿನ ಹಂತದಲ್ಲಿ ನಿಶ್ಚಿತ ಠೇವಣಿ (ಆರ್‌.ಡಿ) ಸಂಗ್ರಹಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆ.ಸತ್ಯನಾರಾಯಣ ರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.