ADVERTISEMENT

6 ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಅನುಮತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:25 IST
Last Updated 27 ಏಪ್ರಿಲ್ 2024, 15:25 IST
..............
..............   

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿರುವ ಬೆನ್ನಲ್ಲೇ ನೆರೆಯ ಆರು ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರವು ಶನಿವಾರ ಅನುಮತಿ ನೀಡಿದೆ.

ಅಲ್ಲದೆ, ಮಧ್ಯಪ್ರಾಚ್ಯ ಹಾಗೂ ಯುರೋಪ್‌ನ ಕೆಲವು ದೇಶಗಳಿಗೆ ಎರಡು ಸಾವಿರ ಟನ್‌ನಷ್ಟು ಬಿಳಿ ಈರುಳ್ಳಿ ರಫ್ತಿಗೂ ಒಪ್ಪಿಗೆ ಸೂಚಿಸಿದೆ. 

2023–24ನೇ ಸಾಲಿನ ಖಾರೀಫ್‌ ಮತ್ತು ರಾಬಿ ಅವಧಿಯಲ್ಲಿ ಉತ್ಪಾದನೆ ಕುಸಿತ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್‌ 8ರಂದು ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿತ್ತು. 

ADVERTISEMENT

‘ಸದ್ಯ ದ್ವಿಪಕ್ಷೀಯ ಒಪ್ಪಂದದ ಅನುಸಾರ ಬಾಂಗ್ಲಾದೇಶ, ಯುಎಇ, ಭೂತಾನ್‌, ಬಹೆರೈನ್, ಮಾರಿಷಸ್ ಹಾಗೂ ಶ್ರೀಲಂಕಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದಿಂದ ಇಷ್ಟು ಪ್ರಮಾಣದ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ’ ಎಂದು ಕೇಂದ್ರ ಗ್ರಾಹಕ ಸಚಿವಾಲಯವು ತಿಳಿಸಿದೆ.

‘ಇ–ವೇದಿಕೆಗಳ ಮೂಲಕ ಕಡಿಮೆ ಬೆಲೆಯಲ್ಲಿ ಈ ದೇಶಗಳಿಗೆ ಈರುಳ್ಳಿ ರಫ್ತು ಮಾಡಲು ಕೇಂದ್ರದ ಏಜೆನ್ಸಿಯಾದ ನ್ಯಾಷನಲ್ ಕೋ ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ (ಎನ್‌ಸಿಇಎಲ್‌) ಕ್ರಮವಹಿಸಿದೆ’ ಎಂದು ಮೂಲಗಳು ತಿಳಿಸಿವೆ.

ಮಿತ್ರ ರಾಷ್ಟ್ರಗಳಿಗೆ ಈರುಳ್ಳಿ ಪೂರೈಸಲು ಕೇಂದ್ರವು ಸೂಚಿಸಿರುವ ಏಜೆನ್ಸಿಗಳಿಗೆ ಎನ್‌ಸಿಇಎಲ್‌ನಿಂದ ಶೇ 100ರಷ್ಟು ಮುಂಗಡ ಪಾವತಿ ಆಧಾರದ ಮೇಲೆ ಈರುಳ್ಳಿಯನ್ನು ಪೂರೈಸಲಾಗುತ್ತದೆ. 

‘ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಅಲ್ಲದೆ, ಎನ್‌ಸಿಇಎಲ್‌ ರಫ್ತು ಮಾಡುವ ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ಇದೇ ರಾಜ್ಯದಿಂದ ಪೂರೈಸಲಾಗುತ್ತದೆ’ ಎಂದು ಸಚಿವಾಲಯವು ತಿಳಿಸಿದೆ.

‘ಬಿಳಿ ಈರುಳ್ಳಿಯ ಬಿತ್ತನೆ ಬೀಜದ ದರ ಹೆಚ್ಚಿದೆ. ಅಲ್ಲದೆ, ಇದನ್ನು ಬೆಳೆಯಲು ಉತ್ತಮ ಕೃಷಿ ವಿಧಾನವನ್ನು ಅನುಸರಿಸಬೇಕಿದೆ. ಹಾಗಾಗಿ, ಉತ್ಪಾದನಾ ವೆಚ್ಚವು ಹೆಚ್ಚಿದೆ’ ಎಂದು ಹೇಳಿದೆ.

ಪ್ರಸಕ್ತ ವರ್ಷದ ರಾಬಿ ಅವಧಿಯಲ್ಲಿ ಬೆಲೆ ಸ್ಥಿರತೆ ನಿಧಿಯಡಿ (ಪಿಎಸ್ಎಫ್‌) 5 ಲಕ್ಷ ಟನ್‌ನಷ್ಟು ಈರುಳ್ಳಿ ಕಾಪು ದಾಸ್ತಾನಿಗೆ ಸಚಿವಾಲಯ ನಿರ್ಧರಿಸಿದೆ. 

ಸಚಿವಾಲಯ ಸೇರಿ ಎನ್‌ಸಿಸಿಎಫ್‌, ನಾಫೆಡ್‌ ತಂಡವು ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ ಮತ್ತು ಅಹಮದಾಬಾದ್‌ ಜಿಲ್ಲೆಗೆ ಭೇಟಿ ನೀಡಿತ್ತು. ಕಾಪು ದಾಸ್ತಾನು ಸಂಬಂಧ ರೈತರ ಉತ್ಪಾದಕ ಸಂಘಗಳು, ರೈತರ ಉತ್ಪಾದಕ ಕಂಪನಿಗಳು ಮತ್ತು ಸಹಕಾರ ಸಂಘಗಳಿಗೆ ಕೋರಿಕೆ ಸಲ್ಲಿಸಿತ್ತು.

ವಿಕಿರಣ ತಂತ್ರಜ್ಞಾನದ ನೆರವು

ದೀರ್ಘಾವಧಿವರೆಗೆ ಈರುಳ್ಳಿಯನ್ನು ಶೇಖರಣೆ ಮಾಡಿದರೆ ಮೊಳಕೆಯೊಡೆಯುತ್ತದೆ.  ಇದರಿಂದ ಉಂಟಾಗುವ ನಷ್ಟ ತಪ್ಪಿಸಲು ಮಹಾರಾಷ್ಟ್ರ ಸರ್ಕಾರವು ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯು (ಬಿಎಆರ್‌ಸಿ) ಅಭಿವೃದ್ಧಿಪಡಿಸಿರುವ ವಿಕಿರಣ ತಂತ್ರಜ್ಞಾನದ ನೆರವು ಪಡೆದಿದೆ.  ಕಳೆದ ವರ್ಷ ಈ ತಂತ್ರಜ್ಞಾನ ಅಳವಡಿಸಿಕೊಂಡಿರುವ ಶೈತ್ಯಾಗಾರಗಳಲ್ಲಿ 1200 ಟನ್‌ ಸಂಗ್ರಹಿಸಲಾಗಿತ್ತು. ಈ ಬಾರಿ 5 ಸಾವಿರ ಟನ್‌ ಸಂಗ್ರಹಿಸಲು ನಿರ್ಧರಿಸಲಾಗಿದೆ. ‘ಕಳೆದ ವರ್ಷ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಜಾರಿಗೊಳಿಸಲಾಗಿತ್ತು. ಶೈತ್ಯಾಗಾರ ಸಂಗ್ರಹದಲ್ಲಿನ ನಷ್ಟವು ಶೇ 10ರಷ್ಟಕ್ಕಿಂತ ಕಡಿಮೆ ಇದೆ’ ಎಂದು ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.